ಬುಲೆಟ್ ಟ್ರೈನ್ ಬೇಡ, ಮೂಲಭೂತ ಸೌಕರ್ಯ ಒದಗಿಸಿ: ಮುಂಬೈಯ ಪಾಲ್ಘಾರ್ ನಿವಾಸಿಗಳ ಒತ್ತಾಯ

Update: 2018-06-17 14:30 GMT

ಮುಂಬೈ, ಜೂ.17: ಸರಕಾರದ ಮಹಾತ್ವಾಕಾಂಕ್ಷೆಯ ಬುಲೆಟ್ ಟ್ರೈನ್ ಯೋಜನೆಗೆ ಒಪ್ಪಿಗೆ ಸೂಚಿಸಬೇಕಿದ್ದರೆ ಮೊದಲು ನೀರಿನ ಕೊಳ, ಆ್ಯಂಬುಲೆನ್ಸ್ ಹಾಗೂ ಸೌರ ಬೀದಿ ದೀಪದ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸಬೇಕು ಎಂದು ಮುಂಬೈಯ ಪಾಲ್ಘಾರ್ ಜಿಲ್ಲೆಯ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ಗ್ರಾಮಸ್ಥರ ವಿರೋಧವನ್ನು ತಣಿಸುವ ವಿಶ್ವಾಸದಲ್ಲಿರುವ ‘ನ್ಯಾಷನಲ್ ಹೈಸ್ಪೀಡ್ ರೈಲ್ ಕಾರ್ಪೊರೇಷನ್ ಲಿ.(ಎನ್‌ಎಚ್‌ಆರ್‌ಸಿಎಲ್)’ ಅಧಿಕಾರಿಗಳು ಮುಂಬೈ-ಅಹ್ಮದಾಬಾದ್ ಬುಲೆಟ್ ಟ್ರೈನ್ ಪೂರ್ವ ನಿಗದಿತವಾದ 2022ರ ವೇಳೆಗೆ ಕಾರ್ಯಾರಂಭಗೊಳ್ಳುವ ನಿಟ್ಟಿನಲ್ಲಿ ಕಾರ್ಯಯೋಜನೆಯನ್ನು ರೂಪಿಸುತ್ತಿದ್ದಾರೆ. ಪಾಲ್ಘಾರ್ ಜಿಲ್ಲಾ ವ್ಯಾಪ್ತಿಯ 73 ಗ್ರಾಮಗಳ ಪೈಕಿ 23 ಗ್ರಾಮಗಳ ನಿವಾಸಿಗಳು ಬುಲೆಟ್ ಟ್ರೈನ್ ವಿರುದ್ಧ ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಗ್ರಾಮಸ್ಥರ ಮನ ಒಲಿಸಲು ಕೈಗೊಂಡಿರುವ ಸಮೂಹ ಸಂಪರ್ಕ ಯೋಜನೆ ವಿಫಲವಾದ ಬಳಿಕ ಇದೀಗ ಜಮೀನಿನ ಮಾಲಕರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಯೋಜನೆಗೆ ಭೂಮಿಯನ್ನು ಬಿಟ್ಟುಕೊಡಲು ಅವರ ಮನ ಒಲಿಸುವ ಕಾರ್ಯಕ್ರಮವನ್ನು ಅಧಿಕಾರಿಗಳು ನಡೆಸುತ್ತಿದ್ದಾರೆ.

ಗ್ರಾಮಸ್ಥರನ್ನು ಒಂದೆಡೆ ಸೇರಿಸಿ, ಬುಲೆಟ್ ಯೋಜನೆಯಿಂದ ಅವರಿಗಾಗುವ ಅನುಕೂಲತೆಗಳನ್ನು ಮನದಟ್ಟು ಮಾಡುವ ಪ್ರಯತ್ನ ನಿರೀಕ್ಷಿತ ಯಶ ಕಂಡಿಲ್ಲ. ಇದೀಗ ಭೂ ಮಾಲೀಕರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಅವರು ತಮ್ಮ ಜಮೀನಿಗೆ ಪರಿಹಾರದ ಜೊತೆ ಹೆಚ್ಚಿಗೆ ಏನನ್ನು ಬಯಸುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನ ನಡೆಸುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 508 ಕಿ.ಮೀ. ಉದ್ದದ ಬುಲೆಟ್ ಟ್ರೈನ್ ಕಾರಿಡಾರ್‌ನ ಸುಮಾರು 110 ಕಿ.ಮೀ. ಪಾಲ್ಘಾರ್ ಜಿಲ್ಲೆಯ ಮೂಲಕ ಸಾಗಿ ಹೋಗುತ್ತದೆ.

ಜಿಲ್ಲೆಯ 73 ಗ್ರಾಮಗಳ ಸುಮಾರು 300 ಹೆಕ್ಟೇರ್ ಭೂಮಿಯ ಅಗತ್ಯವಿದ್ದು ಈ ಯೋಜನೆಯಿಂದ ಸುಮಾರು 3,000 ಜನರ ಮೇಲೆ ಪರಿಣಾಮ ಬೀರುತ್ತದೆ. ಆದರೆ ಯೋಜನೆಗಾಗಿ ಭೂಸ್ವಾಧೀನ ಪ್ರಕ್ರಿಯೆ ನಡೆಸುವುದನ್ನು ಪಾಲ್ಘಾರ್ ಜಿಲ್ಲೆಯ ಆದಿವಾಸಿಗಳು ಹಾಗೂ ಹಣ್ಣು ಬೆಳೆಯುವ ಕೃಷಿಕರು ತೀವ್ರವಾಗಿ ವಿರೋಧಿಸಿದ್ದಾರೆ. ಆದರೆ ಯೋಜನೆಯನ್ನು ವಿರೋಧಿಸುವವರು ವೈಯಕ್ತಿಕ ಬೇಡಿಕೆಗಳನ್ನು ಮುಂದಿರಿಸದೆ ಮೂಲಭೂತ ಸೌಕರ್ಯ ಒದಗಿಸಬೇಕೆನ್ನುವ ಬೇಡಿಕೆ ಇರಿಸಿರುವುದು ಅಧಿಕಾರಿಗಳ ಆತಂಕವನ್ನು ಸ್ವಲ್ಪ ಮಟ್ಟಿಗೆ ಕಡಿಮೆಗೊಳಿಸಿದೆ. ಜಿಲ್ಲೆಯ ಮನ್‌ಕುಂಡ್ಸರ್ ಗ್ರಾಮಸ್ಥರು ಮುಂದಿರಿಸಿದ ಬೇಡಿಕೆ- ತಮ್ಮ ಊರಿನಲ್ಲಿರುವ ಐದು ಎಕರೆ ವ್ಯಾಪ್ತಿಯ ನೀರಿನ ಕೊಳದಿಂದ ನೀರು ಸೋರಿಕೆಯಾಗುತ್ತಿದ್ದು ಇದಕ್ಕೆ ಬಲವಾದ ದಂಡೆಯನ್ನು ನಿರ್ಮಿಸಬೇಕು ಎನ್ನುವುದು. ಇದೇ ರೀತಿ, ಖುರ್ಡ್ ಮತ್ತು ವಿಕ್ರಮ್‌ಗರ್ ಗ್ರಾಮಸ್ಥರ ಬೇಡಿಕೆ ತಮ್ಮ ಊರಿಗೆ ಶಾಶ್ವತ ವೈದ್ಯರೋರ್ವರನ್ನು ನಿಯುಕ್ತಿಗೊಳಿಸಬೇಕು ಎಂಬುದಾಗಿದೆ.

ಬೀತೆ ಗ್ರಾಮಸ್ಥರು ತಮ್ಮ ಊರಿಗೆ ಸೌರ ಬೀದಿ ದೀಪದ ವ್ಯವಸ್ಥೆ ಹಾಗೂ ಆ್ಯಂಬುಲೆನ್ಸ್ ವ್ಯವಸ್ಥೆಗೆ ಕೋರಿಕೆ ಸಲ್ಲಿಸಿದ್ದಾರೆ. ಇನ್ನೊಂದು ಗ್ರಾಮದ ಜನತೆ ತಮ್ಮೂರಿನಲ್ಲಿ ಬುಲೆಟ್ ಟ್ರೈನ್‌ಗೆ ನಿಲುಗಡೆ ನೀಡಬೇಕೆಂದು ಕೋರಿದ್ದರೆ, ಕೇಲ್ವಾ ಗ್ರಾಮಸ್ಥರು ತಮ್ಮೂರಿಗೆ ನಿರಂತರವಾಗಿ ಔಷಧ ಪೂರೈಕೆಯಾಗಬೇಕೆಂದು ಒತ್ತಾಯಿಸಿದ್ದಾರೆ. ಈ ಎಲ್ಲಾ ಬೇಡಿಕೆಗಳನ್ನೂ ಗ್ರಾಮಸ್ಥರ ಪರವಾಗಿ ಗ್ರಾಮದ ಮುಖ್ಯಸ್ಥ(ಸರಪಂಚ)ರು ‘ಲೆಟರ್‌ಹೆಡ್’ನಲ್ಲಿ ಬರೆದು ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಯೋಜನೆಗೆ ವಿರೋಧ ಸೂಚಿಸುವವರಲ್ಲಿ ಚಿಕ್ಕುಹಣ್ಣು ಹಾಗೂ ಮಾವಿನ ಹಣ್ಣು ಬೆಳೆಯುತ್ತಿರುವ ರೈತರು ಪ್ರಮುಖವಾಗಿದ್ದಾರೆ. ಕಳೆದ ಮೂರು ದಶಕಗಳ ಶ್ರಮದಿಂದ ನಿರ್ಮಿಸಿರುವ ಚಿಕ್ಕು ಹಣ್ಣಿನ ತೋಟವನ್ನು ಭೂಸ್ವಾಧೀನ ಮಾಡಿಕೊಳ್ಳಲು ಸರಕಾರ ಮುಂದಾಗಿದೆ. ಆದರೆ ನನ್ನ ಇಬ್ಬರು ನಿರುದ್ಯೋಗಿ ಪುತ್ರರಿಗೆ ಉದ್ಯೋಗ ನೀಡುವ ಖಾತರಿಯನ್ನು ಸರಕಾರ ನೀಡಿದರೆ ಮಾತ್ರ ನಾನು ಭೂಮಿಯನ್ನು ಬಿಟ್ಟುಕೊಡುತ್ತೇನೆ ಎಂದು 62ರ ಹರೆಯದ ರೈತ ದಶರಥ್ ಪೂರವ್ ಎಂಬಾತ ತಿಳಿಸಿದ್ದಾನೆ.

1990ರಲ್ಲಿ ಸೂರ್ಯ ಆಣೆಕಟ್ಟು ಯೋಜನೆಯಿಂದ ಸಂತ್ರಸ್ತರಾಗಿರುವ ಪಾಲ್ಘಾರ್‌ನ ಹನುಮಾನ್ ನಗರ ಮತ್ತು ಚಂದ್ರನಗರ ಗ್ರಾಮಗಳ ಆದಿವಾಸಿಗಳು ಕೂಡಾ ಬುಲೆಟ್ ಟ್ರೈನ್ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ರೈತರ ಬೇಡಿಕೆಗಳನ್ನು ಲಿಖಿತವಾಗಿ ಸಲ್ಲಿಸಿದರೆ ನಾವು ಕ್ರಮ ಕೈಗೊಳ್ಳುತ್ತೇವೆ. ಬುಲೆಟ್ ಟ್ರೈನ್ ಯೋಜನೆಯಿಂದ ಈ ಪ್ರದೇಶದಲ್ಲಿ ಉದ್ಯೋಗಾವಕಾಶ ಹೆಚ್ಚುತ್ತದೆ ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ. ಆದರೆ ಭೂಸ್ವಾಧೀನ ಪ್ರಕ್ರಿಯೆಯ ನೋಟಿಸ್ ನೀಡಲಾಗಿದ್ದು ಅದಕ್ಕೆ ಉತ್ತರಿಸಲು ಸಮಯವನ್ನೇ ನೀಡಲಾಗಿಲ್ಲ. ಆದ್ದರಿಂದ ಯೋಜನೆಯ ಕುರಿತು ತಮಗೆ ಅಸ್ಪಷ್ಟತೆ ಇದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News