ದಸಂಸ ಮುಖಂಡ ಸಿ.ಬಿ.ಮಹಾದೇವಪ್ಪ ನಿಧನ

Update: 2018-06-17 15:02 GMT

ಮಂಡ್ಯ, ಜೂ.17: ದಸಂಸ ಜಿಲ್ಲಾ ಸಂಚಾಲಕ ಪಾಂಡವಪುರ ತಾಲೂಕಿನ ಚಿಕ್ಕಾಡೆ ಗ್ರಾಮದ ದಲಿತ ಮುಖಂಡ ಸಿ.ಬಿ.ಮಹಾದೇವಪ್ಪ(51)  ಹೃದಯಾಘಾತಕ್ಕೊಳಗಾಗಿ ಶನಿವಾರ ತಡರಾತ್ರಿ ಬೆಂಗಳೂರಿನಲ್ಲಿ ನಿಧನರಾದರು.

ತನ್ನ ಸಹೋದರ ವಕೀಲ ನವೀನ್ ಅವರ ಮದುವೆ ಆಹ್ವಾನ ಪತ್ರಿಕೆ ಹಂಚಲು ಬೆಂಗಳೂರಿಗೆ ತೆರಳಿದ್ದಾಗ ತೀವ್ರ ಎದೆನೋವು ಕಾಣಿಸಿಕೊಂಡು ಸ್ಥಳದಲ್ಲೇ ಕುಸಿದು ಬಿದ್ದರು. ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಫಲಕಾರಿಯಾಗದೆ ಕೊನೆಯುಸಿರೆಳೆದರು.

ರವಿವಾರ ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಸ್ವಗ್ರಾಮ ಚಿಕ್ಕಾಡೆಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಮೃತ ಮಹದೇವಪ್ಪ ಅವರಿಗೆ ತಂದೆ ಬೋರಯ್ಯ, ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. 

1988ರಲ್ಲಿ ದಲಿತ ಚಳವಳಿಗೆ ಧುಮುಕಿದ ಮಹಾದೇವಪ್ಪ, ಸುದೀರ್ಘ 30 ವರ್ಷಗಳವರೆಗೆ ವಿವಿಧ ಪದಾಧಿಕಾರತ್ವ ಪಡೆದು ಹಲವಾರು ಹೋರಾಟ ನಡೆಸಿದ್ದರು. ಕ್ರಾಂತಿಗೀತೆಗಳನ್ನು ಹಾಡುವ ಮೂಲಕ ಹಾಡುಗಾರರಾಗಿಯೂ ಹೆಸರು ಮಾಡಿದ್ದರು.

ಗಣ್ಯರಿಂದ ಅಂತಿಮ ದರ್ಶನ: ಸಾಹಿತಿ ದೇವನೂರು ಮಹಾದೇವ, ಪ್ರೊ.ಹುಲ್ಕೆರೆ ಮಹಾದೇವ, ರಾಜ್ಯ ಸಂಪನ್ಮೂಲ ಕೇಂದ್ರದ ನಿರ್ದೇಶಕ ಡಾ.ತುಕರಾಂ, ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು, ಹೆಬ್ಬಾಲೆ ನಿಂಗರಾಜು, ಸಿದ್ದಲಿಂಗಯ್ಯ, ಚಿಕ್ಕಮಗಳೂರು ಶ್ರೀನಿವಾಸ್, ಆಲಗೂಡು ಶಿವಕುಮಾರ್, ಪಾಂಡವಪುರ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಪರಮೇಶ್, ಮಾಜಿ ಅಧ್ಯಕ್ಷ ವೇದಮೂರ್ತಿ, ಹಾಡುಗಾರ ಹರಳಹಳ್ಳಿ ಗೋವಿಂದರಾಜು, ಎಚ್.ಪಿ.ಸೋಮಶೇಖರ್, ಟಿ.ಎಸ್.ಹಾಳಯ್ಯ, ಚಿಕ್ಕಬ್ಯಾಡರಹಳ್ಳಿ ಬಿ.ಪ್ರಕಾಶ್, ಇತರರು ಮೃತ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News