ನಾಳೆಯಿಂದ ಲಾರಿ ಮಾಲಕರ ಮುಷ್ಕರ

Update: 2018-06-17 15:18 GMT

ಬೆಂಗಳೂರು, ಜೂ. 17: ಡೀಸೆಲ್ ದರ ಏರಿಕೆ ಹಾಗೂ ಥರ್ಡ್ ಪಾರ್ಟಿ ಪ್ರೀಮಿಯಂ ದುಬಾರಿ ದರ ಖಂಡಿಸಿ ಜೂ.18ರಿಂದ ಕರ್ನಾಟಕ ಸೇರಿದಂತೆ ದೇಶದಾದ್ಯಂತ ಲಾರಿ ಮಾಲಕರು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ.

ಕರ್ನಾಟಕದಲ್ಲಿ 9 ಲಕ್ಷದ 30 ಸಾವಿರ ಲಾರಿಗಳು ಸೇರಿದಂತೆ ದೇಶಾದ್ಯಂತ 93 ಲಕ್ಷ ಲಾರಿಗಳು ತಮ್ಮ ಸರಕು ಸಾಗಾಣಿಕೆ ಸಂಪೂರ್ಣ ನಿಲ್ಲಿಸಿ, ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದು ದಿನನಿತ್ಯ ಬಳಕೆ ವಸ್ತುಗಳು ಹಾಗೂ ಆಹಾರ ಪದಾರ್ಥಗಳ ಮೇಲೆ ಪರಿಣಾಮ ಬೀರಲಿದೆ.

ಕೇಂದ್ರ ಸರಕಾರಕ್ಕೆ ನೋಟು ಅಮಾನ್ಯೀಕರಣದ ಬಳಿಕ 10 ಲಕ್ಷ ಕೋಟಿಗೂ ಅಧಿಕ ಹಣ ತೆರಿಗೆ ಹರಿದು ಬಂದಿದೆ. ಹೀಗಿದ್ದರೂ ಥರ್ಡ್ ಪಾರ್ಟಿ ಪ್ರೀಮಿಯಂ ಹೆಚ್ಚಳ ಹಾಗೂ ಡೀಸೆಲ್ ದರ ಏರಿಕೆ ಮಾಡುವ ಮೂಲಕ ಲಾರಿ ಮಾಲಕರು ಮತ್ತು ಅವರ ಅವಲಂಬಿತರ ಮೇಲೆ ಬರೆ ಎಳೆಯಲು ಮುಂದಾಗಿದೆ. ಇದನ್ನು ಖಂಡಿಸಿ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದು ಲಾರಿ ಮಾಲಕರ ಸಂಘಟನೆಗಳು ತಿಳಿಸಿವೆ.

ಕೇಂದ್ರ ಸರಕಾರ ಪದೇ ಪದೇ ಡೀಸೆಲ್-ಪೆಟ್ರೋಲ್ ಬೆಲೆ ಹೆಚ್ಚಳ ಮಾಡುತ್ತಿದೆ. ಇದರಿಂದಾಗಿ ಲಾರಿ ಮಾಲಕರು ಮತ್ತು ಸಿಬ್ಬಂದಿಗೆ ಅಧಿಕ ಹೊರೆಯಾಗುತ್ತಿದೆ. ಈ ಸಂಬಂಧ ಹಲವು ಬಾರಿ ಪ್ರಧಾನಿ ನರೇಂದ್ರಮೋದಿಗೆ ಅಖಿಲ ಭಾರತ ಸಂಘಟನೆ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಅನಿವಾರ್ಯವಾಗಿ ದೇಶಾದ್ಯಂತ ಮುಷ್ಕರ ನಡೆಸಲು ಮುಂದಾಗಿದ್ದೇವೆ ಎಂದು ಲಾರಿ ಮಾಲಕರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News