ಭಾರತವು ಜನಸಂಖ್ಯಾಕೀಯ ಲಾಭಾಂಶವನ್ನು ಕಳೆದುಕೊಂಡಿದೆ: ಟಿ.ವಿ.ಮೋಹನದಾಸ ಪೈ

Update: 2018-06-18 15:12 GMT

ಹೈದರಾಬಾದ್,ಜೂ.18: ಭಾರತವು ಇಂದು ಕೌಶಲ್ಯದ ಕೊರತೆಯಿರುವ ಮತ್ತು ಆರ್ಥಿಕತೆಯನ್ನು ಹೆಚ್ಚಿಸಲು ಅನರ್ಹರಾಗಿರುವ ಕೋಟ್ಯಂತರ ಯುವಜನರಿಂದ ತುಂಬಿದ್ದು,ದೇಶವು ಜನಸಂಖ್ಯಾಕೀಯ ಲಾಭಾಂಶದ ಸದುಪಯೋಗವನ್ನು ಕಳೆದುಕೊಂಡಿದೆ ಎಂದು ಮಾನವ ಸಂಪನ್ಮೂಲ ಹಾಗೂ ಶಿಕ್ಷಣ ತಜ್ಞರಾಗಿರುವ ಮಣಿಪಾಲ ಗ್ಲೋಬಲ್ ಎಜ್ಯುಕೇಷನ್‌ನ ಅಧ್ಯಕ್ಷ ಟಿ.ವಿ.ಮೋಹನದಾಸ ಪೈ ಹೇಳಿದ್ದಾರೆ.

 ಯಾವುದೇ ದೇಶದಲ್ಲಿ ದುಡಿಯುವ ವರ್ಗ(15ರಿಂದ 64 ವರ್ಷ)ದ ಜನರ ಸಂಖ್ಯೆ ದುಡಿಯದ ವರ್ಗ(14ಕ್ಕಿಂತ ಕೆಳಗಿನ ಮತ್ತು 65ವರ್ಷಕ್ಕಿಂತ ಮೇಲಿನ)ದ ಜನರಿಗಿಂತ ಹೆಚ್ಚಾಗಿದ್ದರೆೆ ಅದರಿಂದ ಸಂಭಾವ್ಯ ಆರ್ಥಿಕ ಬೆಳವಣಿಗೆಯನ್ನು ಜನಸಂಖ್ಯಾಕೀಯ ಲಾಭಾಂಶವೆಂದು ಕರೆಯಲಾಗುತ್ತದೆ.

 ದೇಶದಲ್ಲಿ ಈಗಾಗಲೇ ಕೌಶಲ್ಯದ ಕೊರತೆಯಿರುವ,ಆರ್ಥಿಕ ಬೆಳವಣಿಗೆಗೆ ಸೂಕ್ತವಲ್ಲದ 21ರಿಂದ 35 ವರ್ಷ ವಯೋಮಾನದ ಹತ್ತು ಕೋಟಿ ಜನರಿದ್ದಾರೆ. 2004-2014ರ ಅವಧಿಯಲ್ಲಿ ಯುಪಿಎ ಸರಕಾರಗಳ ವೈಫಲ್ಯದಿಂದಾಗಿ 2025ರ ವೇಳೆಗೆ ಈ ಗುಂಪಿಗೆ ಇನ್ನೂ ಹತ್ತು ಕೋಟಿ ಜನರು ಸೇರ್ಪಡೆಗೊಳ್ಳಲಿದ್ದಾರೆ ಮತ್ತು ಕೌಶಲ್ಯದ ಕೊರತೆಯಿರುವ,ಕಡಿಮೆ ಶಿಕ್ಷಣ ಹೊಂದಿರುವ 21ರಿಂದ 45 ವರ್ಷ ವಯೋಮಾನದವರ ಒಟ್ಟು ಸಂಖ್ಯೆ 20 ಕೋಟಿಗಳಷ್ಟಾಗಲಿದೆ ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತಿದ್ದ ಪೈ ಹೇಳಿದರು.

 10 ವರ್ಷಗಳ ಯುಪಿಎ ಆಡಳಿತದಲ್ಲಿ ಶೈಕ್ಷಣಿಕ ಸುಧಾರಣೆಗಳ ಕೊರತೆಗಾಗಿ ವಿಷಾದಿಸಿದ ಅವರು,ಶೈಕ್ಷಣಿಕ ಸುಧಾರಣೆಗಳು ಪರಿಣಾಮ ಬೀರಲು ಸಮಯಾವಕಾಶ ಬೇಕಾಗುತ್ತದೆ ಎಂದರು. ಈಗ ಕೈಗೊಂಡ ಸುಧಾರಣೆಗಳು ಹತ್ತು ವರ್ಷಗಳ ಬಳಿಕ ಫಲ ನೀಡುತ್ತವೆ ಮತ್ತು ಆ ವೇಳೆಗೆ ಈಗಿನ ಪೀಳಿಗೆಯು ಕಳೆದುಹೋಗಿರುತ್ತದೆ. ಅದು ಕಳೆದು ಹೋಗದಂತೆ ಏನು ಮಾಡಬೇಕು ಎನ್ನುವುದು ಮುಖ್ಯವಾಗಿದೆ ಎಂದು ಎಸ್‌ಬಿಐನ ಸಂಶೋಧನಾ ವಿಭಾಗದ ಇತ್ತೀಚಿನ ವರದಿಯ ಕುರಿತು ತನ್ನ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದ ಪೈ ನುಡಿದರು.

ಶ್ರೀಮಂತ ರಾಷ್ಟ್ರವಾಗಿ ಬದಲಾಗಲು ಭಾರತದ ಬಳಿ ಕೇವಲ ಒಂದು ದಶಕದ ಸಮಯಾವಕಾಶ ಉಳಿದುಕೊಂಡಿದೆ ಮತ್ತು ನಾವು ಶಿಕ್ಷಣದ ಮೇಲೆ ಹೆಚ್ಚಿನ ಗಮನವನ್ನು ಕೇಂದ್ರೀಕರಿಸಬೇಕಿದೆ. ಇದರಲ್ಲಿ ನಾವು ವಿಫಲರಾದರೆ ಜನಸಂಖ್ಯಾಕೀಯ ಲಾಭಾಂಶದ ಉಪಯೋಗ ಪಡೆಯಲು ಸಾಧ್ಯವಾಗುವುದಿಲ್ಲ. ಭಾರತವು ಈಗ ಶ್ರಮಿಸದಿದ್ದರೆ ಅದೆಂದೂ ಶ್ರೀಮಂತ ರಾಷ್ಟ್ರಗಳ ಗುಂಪಿಗೆ ಸೇರುವುದಿಲ್ಲ ಎಂದು ಈ ವರದಿಯು ಹೇಳಿದೆ.

ಮಾನವ ಸಂಪನ್ಮೂಲವು ಗುಣಾತ್ಮಕವಾಗಿ ಉತ್ತಮ ಮಟ್ಟದ್ದಾಗಬೇಕಿದ್ದರೆ ಭಾರತವು ಶಿಕ್ಷಣ,ಆರೋಗ್ಯ ಮತ್ತು ಬಾಲ ಪೋಷಣೆ ಕ್ಷೇತ್ರಗಳಲ್ಲಿ ಹೆಚ್ಚಿನ ಹೂಡಿಕೆಯನ್ನು ಮಾಡಬೇಕು ಎಂದು ಹೇಳಿದ ಅಸೋಚಾಮ್‌ನ ಮಹಾ ಕಾರ್ಯದರ್ಶಿ ಡಿ.ಎಸ್.ರಾವತ್ ಅವರು,ಕೇಂದ್ರ ಮತ್ತು ರಾಜ್ಯಸರಕಾರಗಳು ತಮ್ಮ ಮುಂಗಡಪತ್ರಗಳಲ್ಲಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ಹೆಚ್ಚಿನ ಹಣವನ್ನು ನೀಡುವ ಅಗತ್ಯವಿದೆ ಎಂದರು.

ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ,ಶಿಕ್ಷಣವನ್ನು ನಿಯಂತ್ರಿಸುವುದನ್ನು ನಿಲ್ಲಿಸುವ ಮತ್ತು ಪಾರದರ್ಶಕ ನಿಯಮಗಳನ್ನು ತರುವ ಹಾಗು ಉನ್ನತ ಶಿಕ್ಷಣದಲ್ಲಿ ಗುಣಮಟ್ಟ ಮಾನಕಗಳನ್ನು ಜಾರಿಗೊಳಿಸುವ ಅಗತ್ಯವಿದೆ ಎಂದು ಪೈ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News