ಪರಿಸರ ಮಾಲಿನ್ಯ ಉಂಟುಮಾಡುವ ಕಾರ್ಖಾನೆಗಳ ವಿರುದ್ಧ ಕಠಿಣ ಕ್ರಮ: ಸಚಿವ ಆರ್.ಶಂಕರ್

Update: 2018-06-18 18:23 GMT

ದಾವಣಗೆರೆ,ಜೂ.18: ಪರಿಸರ ಮಾಲಿನ್ಯ ಮಾಡುವಂತಹ ಕಾರ್ಖಾನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಮತ್ತು ಪರಿಸರ ಖಾತೆ ಸಚಿವ ಆರ್. ಶಂಕರ್ ಎಚ್ಚರಿಸಿದರು.

ನಗರದ ಹೊರ ವಲಯದ ಅರಣ್ಯ ಇಲಾಖೆಯ ಕಚೇರಿ ಹಾಗೂ ದೇವಸರಾಜ ಅರಸ್ ಬಡಾವಣೆಯ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿಗೆ ಸೋಮವಾರ ದಿಢೀರ್ ಬೇಟಿ ನೀಡಿ, ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಮಾಲಿನ್ಯ ನಿಯಂತ್ರಣ ಮಂಡಳಿ ನಿಗದಿ ಪಡಿಸಿರುವ ಪ್ಯಾರಾಮೀಟರ್ ಗೂ ಹೆಚ್ಚಿನ ಪ್ರಮಾಣದಲ್ಲಿ ಹೊಗೆ ಉಗುಳುವ ಸರಳ ಕೈಗಾರಿಕೆಗಳಿಂದ ಹಿಡಿದು ಬಿರ್ಲಾ ಫ್ಯಾಕ್ಟರಿಯಂಥಹ ಬೃಹತ್ ಕೈಗಾರಿಕೆಗಳ ವಿರುದ್ಧವೂ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಜಿಲ್ಲೆಯಲ್ಲಿ ಸುಮಾರು 400 ಕೈಗಾರಿಕೆಗಳಿದ್ದು, ಅವು ವಾಯುಮಾಲಿನ್ಯ ಮಾಡದಂತೆ ಪರಿಸರ ಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದರು.

ರಾಣೇಬೆನ್ನೂರಿನಲ್ಲಿ ಹಿರೋ ಬೈಕ್ ಶೋರೂಂ ನವರು ಒಮ್ಮೆ ಉಪಯೋಗಿಸಿದ ನೀರನ್ನು ಮರು ಶುದ್ಧೀಕರಿಸಿ, ಮರುಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ, ಮಹಡಿ ಮೇಲೆ ಸೋಲಾರ್ ಅಳವಡಿಸಿಕೊಂಡು ಸೌರಶಕ್ತಿ ಉತ್ಪತ್ತಿ ಮಾಡಿಕೊಂಡು ಪ್ರಾಕೃತಿಕವಾಗಿ ಗಾಳಿ, ಬೆಳಕು ಬಳಸಿಕೊಂಡು ಶೋರೂಂ ನಡೆಸುತ್ತಿದ್ದಾರೆ. ಈ ರೀತಿ ನೀರು ಮರು ಬಳಕೆ ಮಾಡಿಕೊಂಡರೆ, ನೀರಿನ ಬವಣೆ ನೀಗಲಿದೆ. ಆದ್ದರಿಂದ ಕೈಗಾರಿಕೋಧ್ಯಮಿಗಳು ಈ ನಿಟ್ಟಿನಲ್ಲಿ ಗಮನ ಹರಿಸಬೇಕಾಗಿದೆ ಎಂದರು.

ಪ್ಲಾಸ್ಟಿಕ್ ನಿಷೇಧಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, 40 ಮೈಕ್ರಾನ್‍ಗಿಂತ ಕಡಿಮೆ ಮೈಕ್ರಾನ್‍ನ ಪ್ಲಾಸ್ಟಿಕ್ ಉತ್ಪಾದನೆ ಹಾಗೂ ಮಾರಾಟ ಮಾಡುವವರ ವಿರುದ್ಧವೂ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ರಾಜ್ಯದಲ್ಲಿ ಶೇ. 12ರಷ್ಟು ಗಿಡಿಮರಗಳು ಕಡಿಮೆ ಇರುವುದರಿಂದ ಗಿಡ ನೆಡಲು ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.

ಬಹುತೇಕ ಬಗರ್‍ಹುಕುಂ ಸಾಗುವಳಿದಾರರು ಅರಣ್ಯ ಇಲಾಖೆಯು ಸಾಗುವಳಿ ಚೀಟಿ ನೀಡಲು ತಕರಾರು ತಗೆಯುತ್ತಿದೆ ಎಂಬ ಅಭಿಪ್ರಾಯ ಹೊಂದಿದ್ದಾರೆ. ಆದರೆ, ನಾನು ರೈತರಿಗಾಗಿ ಕೆಲಸ ಮಾಡಲು ಸಿದ್ಧನಿದ್ದೇನೆ. ರೈತರಿಗೆ ಸಾಗುವಳಿ ಚೀಟಿಯೂ ಸಿಗಬೇಕು ಅದರ ಜೊತೆಗೆ ಅರಣ್ಯ ಸಂಪತ್ತು ಉಳಿಯಬೇಕೆಂಬುದು ನನ್ನ ಅಭಿಲಾಷೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ರೈತರು ಕಷ್ಟಪಟ್ಟು ಬೆಳೆದ ಬೆಳೆ ಒಂದು ಕಡೆ ಪ್ರಕೃತಿ ವಿಕೋಪದಿಂದ ಹಾಳಾದರೆ, ಮತ್ತೊಂದೆಡೆ ಕಾಡುಪ್ರಾಣಿಗಳ ಹಾವಳಿಯಿಂದಲೂ ಹಾನಿಗೆ ಒಳಗಾಗುತ್ತಿವೆ. ಹೀಗಾಗಿ ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ. ಆದ್ದರಿಂದ ಶೇ. 50ರಷ್ಟು ಸಹಾಯಧನದಲ್ಲಿ ಸೋಲಾರ್ ಹಾಗೂ ತಂತಿಬೇಲಿ ಅಳವಡಿಕೆಗೆ ಸಾಲಸೌಲಭ್ಯ ನೀಡಿದರೂ, ರೈತರು ಅದು ಯಾವುದಕ್ಕೂ ಸಾಲುವುದಿಲ್ಲ ಎಂಬ ಕಾರಣಕ್ಕೆ ಮುಂದೆಬರುತ್ತಿಲ್ಲ. ಇದಕ್ಕಾಗಿ ಒಂದು ರೂಪುರೇಷೆ ರಚಿಸಿ, ಪ್ರಾಣಿಗಳ ಹಾವಳಿ ತಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ಸಂದರ್ಭ ಪರಿಸರ ಇಲಾಖೆ ವೈಜ್ಞಾನಿಕಾಧಿಕಾರಿ ಮಂಜುನಾಥ್ ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News