ಮಂಡ್ಯ: ಖಾಸಗಿ ಕೃಷಿ ಕಾಲೇಜು ರದ್ದತಿಗೆ ಒತ್ತಾಯಿಸಿ ಪ್ರತಿಭಟನೆ

Update: 2018-06-18 18:36 GMT

ಮಂಡ್ಯ,ಜೂ.18: ಕೃಷಿ ವಿವಿ ಕಾಯ್ದೆಗೆ ತಿದ್ದುಪಡಿ ತಂದು ಖಾಸಗಿ ಕೃಷಿ ಕಾಲೇಜುಗಳನ್ನು ಶಾಶ್ವತವಾಗಿ ರದ್ದುಪಡಿಸಲು ಒತ್ತಾಯಿಸಿ ತಾಲೂಕಿನ ವಿ.ಸಿ.ಫಾರಂನ ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಸರಕಾರಿ ಕೃಷಿ ಸ್ನಾತಕೋತ್ತರ ಪದವಿ ಶಿಕ್ಷಣಕ್ಕೆ ರೈ ಟೆಕ್ನಾಲಜಿ ವಿಶ್ವವಿದ್ಯಾಲಯದ ಸ್ನಾತಕ ಪದವಿಗಳನ್ನು ನಿರ್ಬಂಧಿಸಿ ಕಾಲೇಜನ್ನು ಮುಚ್ಚಿಸಬೇಕು. ರಾಜ್ಯದ ಖಾಸಗಿ ಕೃಷಿ ಕಾಲೇಜುಗಳಿಗೆ ಅಫಿಲಿಯೇಷನ್ ನಿಲ್ಲಿಸಿ, ಶಾಶ್ವತವಾಗಿ ರದ್ದುಪಡಿಸಬೇಕು ಎಂದು ಅವರು ಒತ್ತಾಯಿಸಿದರು.

ಖಾಸಗೀ ಕಾಲೇಜುಗಳ ಶಿಕ್ಷಣ, ಸಂಶೋಧನೆ, ವಿಸ್ತರಣೆಯ ವಿಭಾಗದಲ್ಲಿ ಹಲವಾರು ನೂನ್ಯತೆಗಳಿವೆ. ಇದರಿಂದ ನಿರುದ್ಯೋಗ ಸೃಷ್ಟಿಯಾಗುವುದಲ್ಲದೆ, ಗುಣಮಟ್ಟದ ಶಿಕ್ಷಣವನ್ನು ನೀಡದೆ ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳು ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು.

ಖಾಸಗೀ ಕಾಲೇಜುಗಳು ಕರ್ನಾಟಕ ಕೃಷಿ ವಿಶ್ವವಿದ್ಯಾಲಯಗಳ 1963ರ ಕಾಯ್ದೆಯನ್ನು ಪಾಲಿಸುತ್ತಿಲ್ಲ. ಕೃಷಿ ಇಲಾಖೆ ಆದೇಶದಲ್ಲಿ ತಿಳಿಸಿರುವ ಸೂಚನೆ ಪಾಲಿಸುತ್ತಿಲ್ಲ. ಗುಣಮಟ್ಟದ ಶಿಕ್ಷಣ ನೀಡುತ್ತಿಲ್ಲ ಎಂದು ಅವರು ದೂರಿದರು.

ವಿದ್ಯಾರ್ಥಿ ಮುಖಂಡರಾದ ದರ್ಶನ್, ಶ್ರೀಧರ್, ಚೇತನ್, ಲೇಖನ, ಪ್ರೀತಿ, ಲಾವಣ್ಯ, ವಿಫುಲ್, ಬಾಲಾಜಿ, ಸಾಗರ್, ಭರತ್ ಪ್ರತಿಭಟನೆ ನೇತೃತ್ವ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News