ಮಂಡ್ಯ: ಸತೀಶ್ ಜಾರಕಿಹೊಳಿಗೆ ಸಚಿವ ಸ್ಥಾನ ನೀಡಲು ಒತ್ತಾಯಿಸಿ ಧರಣಿ

Update: 2018-06-18 18:39 GMT

ಮಂಡ್ಯ,ಜೂ.18: ರಾಜ್ಯ ಮೈತ್ರಿ ಸರಕಾರದಲ್ಲಿ ಶಾಸಕ ಸತೀಶ್ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡದಿರುವುದನ್ನು ಖಂಡಿಸಿ ಮಂಡ್ಯ ಜಿಲ್ಲಾ ಗಂಗಾಮತಸ್ಥ, ಬೆಸ್ತ, ನಾಯಕ ಜನಾಂಗ, ಸತೀಶ್ ಜಾರಕಿಹೊಳಿ ಅಭಿಮಾನಿ ಬಳಗ ಮತ್ತು ಮಾನವ ಬಂಧುತ್ವ ವೇದಿಕೆ ವತಿಯಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.

ನಗರದ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಸತೀಶ್ ಜಾರಕಿಹೊಳಿ ಅವರ ಭಾವಚಿತ್ರವನ್ನಿಡಿದುಕೊಂಡು ಸಚಿವ ಸ್ಥಾನ ನೀಡಲೇಬೇಕು ಎಂದು ಘೋಷಣೆ ಕೂಗಿದರು. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಸೋನಿಯಾಗಾಂಧಿ, ಪರಮೇಶ್ವರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

ಜಾರಕಿಹೊಳಿ ಸಮುದಾಯದ ಸರ್ವೋತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಇವರ ಏಳಿಗೆಯನ್ನು ಸಹಿಸದ ಕೆಲವರು ಸಂಪುಟದಲ್ಲಿ ಯಾವುದೇ ಸಚಿವ ಸ್ಥಾನ ಸಿಗದ ಹಾಗೆ ಹುನ್ನಾರ ನಡೆಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವ ಗಂಗಾಮತಸ್ಥ, ಬೆಸ್ತ ಹಾಗೂ ನಾಯಕ ಸಮುದಾಯದ ಅಭಿವೃದ್ಧಿಗೆ ಶಾಸಕರು ಹಗಲಿರುಳು ಶ್ರಮಿಸುತ್ತಿದ್ದಾರೆ. ಇಂತಹ ನಾಯಕನಿಗೆ ಸಮ್ಮಿಶ್ರ ಸರಕಾರದಲ್ಲಿ ಉತ್ತಮ ಖಾತೆ ನೀಡಿಲ್ಲವೆಂದು ಅವರು ಕಿಡಿಕಾರಿದರು.

ರಾಜಕೀಯವಾಗಿ ಸಮುದಾಯದ ಮುಖಂಡರಿಗೆ ಯಾವುದೇ ಪಕ್ಷಗಳು ಪ್ರಾಧಾನ್ಯತೆ ನೀಡುತ್ತಿಲ್ಲ. ಇದರಿಂದ ಸತೀಶ್ ಜಾರಕಿಹೊಳಿ ಅವರ ಮುಂದಿನ ನಡೆ ಬದಲಾದರೂ ಆಶ್ಚರ್ಯಪಡುವಂತಿಲ್ಲ. ನಮ್ಮ ನಾಯಕರು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವು ಸದಾ ಸಿದ್ದರಿರುತ್ತೇವೆ ಎಂದು ಪ್ರತಿಭಟನಾಕಾರರು ಹೇಳಿದರು.

ಕಾಂಗ್ರೆಸ್ ಗೆಲುವುಗೆ ಸತೀಶ್ ಜಾರಕಿಹೊಳಿ ಶ್ರಮವಹಿಸಿದ್ದಾರೆ. ಸಿದ್ದರಾಮಯ್ಯ ಗೆಲ್ಲಲು ಅವರ ಶ್ರಮ ಕಾರಣ. ಹಿಂದಿನ ಸರಕಾರದಲ್ಲಿ ನೀಡಿದ್ದ ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಆದ್ದರಿಂದ ಬಾಕಿ ಉಳಿಸಿಕೊಂಡಿರುವ ಖಾತೆಗಳಲ್ಲಿ ಮಹತ್ವದ ಖಾತೆ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಸತೀಶ್ ಜಾರಕಿಹೊಳಿ ಅಭಿಮಾನಿಗಳ ಬಳಗದ ಜಿಲ್ಲಾಧ್ಯಕ್ಷ ಹಾಗೂ ಮಳವಳ್ಳಿ ತಾಲೂಕು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಎಸ್.ರವಿ, ಮಾರ್ಕಂಡಯ್ಯ, ರವಿ, ರೇವಣ್ಣ, ನಗರಸಭೆ ಸದಸ್ಯರಾದ ಆನಂತ ಪದ್ಮನಾಬ, ನಗರಸಭೆ ನಾಮನಿರ್ದೇಶಿತ ಸದಸ್ಯ ನಹೀಮ್, ದಿನೇಶ್, ಯಜಮಾನ್ ಹನುಮಂತರಾಜು, ಗಂಗಣ್ಣ, ಯುವ ಮುಖಂಡ ಮಂಜು, ಚಂದ್ರು, ಪುರುಷೋತ್ತಮ್ ನಾಗೇಂದ್ರ, ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News