ಕಡೂರು: ಹೊತ್ತಿ ಉರಿದ ಟ್ಯಾಂಕರ್ ಲಾರಿ; ಓರ್ವ ಸಜೀವ ದಹನ ?

Update: 2018-06-19 13:28 GMT

ಚಿಕ್ಕಮಗಳೂರು/ಕಡೂರು, ಜೂ.19: ಪೆಟ್ರೋಲ್ ಸಾಗಿಸುತ್ತಿದ್ದ ಟ್ಯಾಂಕರ್ ಲಾರಿಯೊಂದು ಎದುರಿನಿಂದ ಬಂದ ಬೈಕ್‍ಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದು ಹೊತ್ತಿ ಉರಿದ ಪರಿಣಾಮ ಚಾಲಕ ಶೇ.90ರಷ್ಟು ಸುಟ್ಟಗಾಯಗಳೊಂದಿಗೆ ಜೀವನ್ಮರಣ ಹೋರಾಟ ನಡೆಸುತ್ತಿರುವ ಘಟನೆ ಕಡೂರು ತಾಲೂಕಿನ ಗಿರಿಯಾಪುರ ಪಟ್ಟಣದಲ್ಲಿ ಮಂಗಳವಾರ ಸಂಜೆ ನಡೆದಿದ್ದು, ಲಾರಿಯಲ್ಲಿದ್ದ ಕ್ಲೀನರ್ ನ ಸುಳಿವು ಸಿಕ್ಕಿಲ್ಲವಾದ್ದರಿಂದ ಆತ ಸಜೀವವಾಗಿ ದಹನಗೊಂಡಿರಬಹುದೆಂದು ಶಂಕಿಸಲಾಗುತ್ತಿದೆ.

ಘಟನೆಯಲ್ಲಿ ಪೆಟ್ರೋಲ್ ಟ್ಯಾಂಕರ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಟ್ಯಾಂಕರ್ ಚಾಲಕ ದೇಹ ಸಂಪೂರ್ಣವಾಗಿ ಸುಟ್ಟ ಗಾಯಗಳಿಂದಾವೃತವಾಗಿದ್ದು, ಆತನನ್ನು ಕಡೂರು ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ. ಟ್ಯಾಂಕರ್ ಚಾಲಕನನ್ನು ಹಾಸನ ದಾದಾಫೀರ್ ಎಂದು ಗುರುತಿಸಲಾಗಿದೆ.  ಕ್ಲೀನರ್ ಹೆಸರು, ವಿಳಾಸ ಪತ್ತೆಯಾಗಿಲ್ಲ. ಘಟನೆಯಲ್ಲಿ ನಿವೃತ್ತ ಶಿಕ್ಷಕರ 2 ಮನೆಗಳು ಸಂಪೂರ್ಣವಾಗಿ ಹೊತ್ತಿ ಉರಿದಿದ್ದು, ಸಮೀಪದ 3 ಮನೆಗಳು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಭಾಗಶಃ ಸುಟ್ಟು ಹೋಗಿವೆ. ಅಲ್ಲದೇ ಘಟನೆ ನಡೆದ ಸ್ಥಳದಲ್ಲಿನ ಬಸ್ ನಿಲ್ದಾಣ, ಒಂದು ಪೆಟ್ಟಿಗೆ ಅಂಗಡಿ, 2 ವಾಣಿಜ್ಯ ಮಳಿಗೆಗಳೂ ಸುಟ್ಟು ಕರಕಲಾಗಿವೆ ಎಂದು ತಿಳಿದು ಬಂದಿದೆ.

ಮಂಗಳವಾರ ಮಧ್ಯಾಹ್ನ ಹಾಸನ ಪೆಟ್ರೋಲ್ ಘಟಕದಿಂದ ಹೊರಟ ಟ್ಯಾಂಕರ್ ಕಡೂರು, ಗಿರಿಯಾಪುರ ಮಾರ್ಗವಾಗಿ ಹೊಸದುರ್ಗಕ್ಕೆ ಹೊರಟಿತ್ತು ಎನ್ನಲಾಗಿದ್ದು, ಸಂಜೆಯ ವೇಳೆಗೆ ಕಡೂರು ತಾಲೂಕಿನ ಗಿರಿಯಾಪುರ ಪಟ್ಟಣದ ಹೃದಯ ಭಾಗದಲ್ಲಿರುವ ಬಸ್ ನಿಲ್ದಾಣ ಸಮೀಪದ ತಿರುವಿನಲ್ಲಿ ವೇಗದಿಂದ ನುಗ್ಗಿದ ಟ್ಯಾಂಕರ್ ಎದುರಿನಿಂದ ಬಂದ ಬೈಕ್ ಒಂದಕ್ಕೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಚಾಲಕ ಟ್ಯಾಂಕರ್ ಅನ್ನು ರಸ್ತೆ ಬದಿಗೆ ಕೊಂಡೊಯ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಲಾರಿ ಮಗುಚಿ ಬಿದ್ದಿದೆ. ಬಿದ್ದ ತಕ್ಷಣ ಪೆಟ್ರೋಲ್ ಹೊರ ಚೆಲ್ಲುತ್ತಿದ್ದಂತೆ ಭಾರೀ ಸ್ಫೋಟದೊಂದಿಗೆ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಲಾರಿಯಡಿಯಲ್ಲಿ ಸಿಲುಕಿಕೊಂಡ ಕ್ಲೀನರ್ ಸಜೀವವಾಗಿ ದಹನವಾಗಿದ್ದಾನೆ. ಶೇ.90ರಷ್ಟು ಗಾಯಗೊಂಡಿದ್ದ ಲಾರಿ ಚಾಲಕ ಸುಟ್ಟ ಗಾಯಗಳೊಂದಿಗೆ ಬೆಂಕಿಯ ಮಧ್ಯೆಯಿಂದ ಹೊರಳಿಕೊಂಡು ಬಂದು ಚರಂಡಿಗೆ ಬಿದ್ದಿದ್ದಾನೆ. ಕೂಡಲೇ ಸಾರ್ವಜನಿಕರು ಆತನನ್ನು ಕಡೂರು ಸರಕಾರಿ ಆಸ್ಪತ್ರಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ವಾರ್ತಾಭಾರತಿಗೆ ತಿಳಿಸಿದ್ದಾರೆ.

ಗಿರಿಯಾಪುರ ಪಟ್ಟಣದಲ್ಲಿ ಘಟನೆ ನಡೆದ ವೇಳೆ ಟ್ಯಾಂಕರ್ ರಸ್ತೆ ಬದಿಯಲ್ಲಿದ್ದ ಸಾಲು ಮನೆಗಳತ್ತ ಮಗುಚಿ ಬಿದ್ದಿದ್ದು, ಟ್ಯಾಂಕರ್‍ನಿಂದ ಹೊತ್ತಿ ಉರಿದ ಬೆಂಕಿಯ ಕೆನ್ನಾಲಿಗೆ ಪಕ್ಕದಲ್ಲೇ ಇದ್ದ ಗುರುಶಾಂತಪ್ಪ, ಮೃತ್ಯುಂಜಯ ಎಂಬ ನಿವೃತ್ತ ಶಿಕ್ಷಕ ಸಹೋದರರ ಮನೆಗಳಿಗೆ ವ್ಯಾಪಿಸಿದ್ದು, ಬೆಂಕಿಯ ತೀವ್ರತೆಗೆ ಎರಡೂ ಮನೆಗಳು ಸಂಪೂರ್ಣವಾಗಿ ದಹಿಸಿವೆ. ಮತ್ತೆ ಮೂರು ಮನೆಗಳಿಗೆ ಭಾಗಶಃ ಹಾನಿಯಾಗಿವೆ. ಟ್ಯಾಂಕರ್‍ನಿಂದ ಎದ್ದ ಬೆಂಕಿಯ ತೀವ್ರತೆಗೆ ಸಿಲುಕಿ ಪಕ್ಕದ ಬಸ್ ನಿಲ್ದಾಣ, ಚಿದಾನಂದ ಎಂಬವರ ಪೆಟ್ಟಿಗೆ ಅಂಗಡಿ ಹಾಗೂ ಎರಡು ವಾಣಿಜ್ಯ ಮಳಿಗೆಗೆಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಮನೆಯಲ್ಲಿದ್ದವರಿಗೆ ಹಾಗೂ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗಿಲ್ಲ ಎನ್ನಲಾಗಿದೆ.

ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಚಿಕ್ಕಮಗಳೂರು, ಲಕ್ಕವಳ್ಳಿ, ಕಡೂರು, ತರೀಕೆರೆ, ಹೊಸದುರ್ಗ ಪಟ್ಟಣಗಳ ಆಗ್ನಿಶಾಮಕ ವಾಹನಗಳು ಸ್ಥಳಕ್ಕೆ ಬಂದು ಬೀಡು ಬಿಟ್ಟಿದ್ದು, ನೂರಾರು ಆಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆಂದು ತಿಳಿದು ಬಂದಿದೆ. ಸ್ಥಳದಲ್ಲಿ ಧಟ್ಟ ಹೊಗೆ ಎದ್ದಿರುವುದು ಹಾಗೂ ಭಾರೀ ಜನಸ್ತೋಮ ಸೇರಿರುವುದರಿಂದ ಪರಿಹಾರ ಕಾರ್ಯಗಳಿಗೆ ಅಡ್ಡಿಯಾಗಿದ್ದು, ಸ್ಥಳದಲ್ಲಿ ಇನ್ನೂ ಬೆಂಕಿಯನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿದು ಬಂದಿದೆ.

ಘಟನೆ ಹಿನ್ನೆಲೆಯಲ್ಲಿ ಅಡಿಶನಲ್ ಎಸ್ಪಿ ಗೀತಾ, ಕಡೂರು ಡಿವೈಎಸ್ಪಿ, ತರೀಕೆರೆ ಸಿಐ, ತರೀಕೆರೆ ವಿಭಾಗದ ಎಸಿ ಸರೋಜಾ, ಕಡೂರು, ತರೀಕೆರೆ ತಾಲೂಕುಗಳ ತಹಶೀಲ್ದಾರ್ ಗಳು, ಇಒಗಳು, ಕಡೂರು ಶಾಸಕ ಬೆಳ್ಳಿ ಪ್ರಕಾಶ್, ತರೀಕೆರೆ ಶಾಸಕ ಸುರೇಶ್, ಜಿಪಂ ಸದಸ್ಯ ಮಹೇಶ್ ಹಾಗೂ  ತರೀಕೆರೆ ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಸ್ವಾಮೀಜಿ ಸ್ಥಳದಲ್ಲೇ ಬೀಡು ಬಿಟ್ಟಿದ್ದು, ಸಾರ್ವಜನಿಕರ ನೆರವಿನೊಂದಿಗೆ ಪರಿಹಾರ ಕ್ರಮಗಳ ನೇತೃತ್ವ ವಹಿಸಿದ್ದಾರೆಂದು ತಿಳಿದು ಬಂದಿದೆ. ಸ್ಥಳದಲ್ಲಿ ಭಾರೀ ಜನಸ್ತೋಮ ನೆರೆದಿದ್ದು ಜನರ ನಿಯಂತ್ರಣ ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News