ಮಗುವಿನ ಹೆಸರು ಆಯ್ಕೆ ಮಾಡಲು ಚುನಾವಣೆ ನಡೆಸಿದ ದಂಪತಿ !

Update: 2018-06-19 12:16 GMT

ಮುಂಬೈ, ಜೂ. 19: ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯ ದಿಯೋರಿ ತಾಲೂಕಿನ ದಂಪತಿ ಮಿಥುನ್ ಮತ್ತು ಮಾನ್ಸಿ ಬಂಗ್ ಎಂಬವರು ತಮ್ಮ ಗಂಡು ಮಗುವಿನ ಹೆಸರನ್ನು ಆಯ್ಕೆ ಮಾಡಲು ತಮ್ಮ ಕುಟುಂಬ ಸದಸ್ಯರು, ಸಂಬಂಧಿಗಳು ಹಾಗೂ ಸ್ನೇಹಿತರನ್ನು ಜತೆ ಸೇರಿಸಿ ಜೂ. 15ರಂದು ಚುನಾವಣೆಯೊಂದನ್ನು ನಡೆಸಿದರು.

ಎಪ್ರಿಲ್ 5ರಂದು ಜನಿಸಿದ ಮಗುವಿಗೆ ಕುಟುಂಬ ಸದಸ್ಯರು ಮತ್ತು ಸಂಬಂಧಿಗಳು ಒಟ್ಟು ಮೂರು ಹೆಸರುಗಳನ್ನು ಸೂಚಿಸಿದ್ದರು. ಇವುಗಳಲ್ಲಿ ಮಗುವಿಗೆ ಯಾವ ಹೆಸರನ್ನಿಡುವುದು ಎಂಬ ಗೊಂದಲದಲ್ಲಿದ್ದ ದಂಪತಿ ಗೊಂದಲಕ್ಕೆ ಅಂತ್ಯ ಹಾಡಲು ನಿರ್ಧರಿಸಿ ಈ ಮೂರೂ ಹೆಸರುಗಳಿದ್ದ ಮತಪತ್ರಗಳನ್ನು ತಯಾರಿಸಿ ಮತದಾನ ನಡೆಸಿದರು.

ಈ ವಿಶಿಷ್ಟ ಮತದಾನ ಸಮಾರಂಭದಲ್ಲಿ ಮಾಜಿ ಸಂಸದ ನಾನಾ ಪಟೋಲೆ ಕೂಡ ಹಾಜರಿದ್ದರು. ಪಟೋಲೆ ಅವರು ರಾಜೀನಾಮೆ ನೀಡಿ ತೆರವಾಗಿದ್ದ ಗೊಂಡಿಯಾ ಲೋಕಸಭಾ ಸ್ಥಾನಕ್ಕೆ ಮೇ 28ರಂದು ಉಪಚುನಾವಣೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಅಂದ ಹಾಗೆ ಮಗುವಿನ ಹೆಸರು ಆಯ್ಕೆ ಮಾಡಲು ನಡೆಸಲಾದ ಚುನಾವಣೆಯನ್ನು ಬಾಲಕ್ ನಾಮ್ ಚಾಯನ್ ಆಯೋಗ್ ಎಂಬ ಹೆಸರಿನಡಿಯಲ್ಲಿ ನಡೆಸಲಾಯಿತು. ಭಾರತದ ಚುನಾವಣಾ ಆಯೋಗದ ಚಿಹ್ನೆಯಂತಹುದೇ ಚಿಹ್ನೆ ಈ ಆಯೋಗ್ ಹೊಂದಿತ್ತು.

ಯುವನ್, ಯೌವಿಕ್ ಹಾಗೂ ಯಕ್ಷ್ ಎಂಬ ಮೂರು ಹೆಸರುಗಳ ನಡುವೆ ಆಯ್ಕೆ ನಡೆದಾಗ ಯುವನ್ ಹೆಸರಿಗೆ ಗರಿಷ್ಠ 92 ಮತಗಳು ದೊರಕಿದ್ದವು. ಒಟ್ಟು 192 ಜನರು ಮತ ಚಲಾಯಿಸಿದ್ದರು. ಅಂತಿಮವಾಗಿ ಮಗುವಿಗೆ ಯುವನ್ ಎಂಬ ಹೆಸರನ್ನಿಡಲಾಗಿದೆ.

ದಂಪತಿಗೆ ಈ ಮೊದಲು ಒಂದು ಹೆಣ್ಣು ಮಗು ಹುಟ್ಟಿದ್ದು ಅದಕ್ಕೆ ಭೂಮಿ ಎಂಬ ಹೆಸರನ್ನಿಡಲಾಗಿತ್ತು. ಆಗ ಕೂಡ ಇಂತಹುದೇ ಮತದಾನ ನಡೆಸಲಾಗಿತ್ತೇ ಎಂಬ ಪ್ರಶ್ನೆಗೆ ಆಗ ಕುಟುಂಬದಲ್ಲಿ ಮರಣವೊಂದು ಸಂಭವಿಸಿದ್ದರಿಂದ ಯಾವುದೇ ಸಮಾರಂಭ ನಡೆದಿಲ್ಲ ಎಂದು ದಂಪತಿ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News