'ಜನಪ್ರಿಯ ಶಾಸಕರಲ್ಲ' ಎಂಬ ತನ್ವೀರ್ ಸೇಠ್ ಹೇಳಿಕೆಗೆ ಸಚಿವ ಝಮೀರ್ ತಿರುಗೇಟು ನೀಡಿದ್ದು ಹೀಗೆ..

Update: 2018-06-19 12:57 GMT

ಬೆಂಗಳೂರು, ಜೂ. 19: ‘ನಾನು ಮುಸ್ಲಿಮ್ ಸಮುದಾಯದ ಜನಪ್ರಿಯ ನಾಯಕನೆಂದು ಹೇಳಿಕೊಳ್ಳುವುದಿಲ್ಲ. ನಾನೊಬ್ಬ ಜನ ಸೇವಕ. ಮಾಜಿ ಸಚಿವ ತನ್ವೀರ್ ಸೇಠ್ ಕ್ಷೇತ್ರಕ್ಕೆ ನಾನೂ ಬರ್ತೀನಿ. ಅವರೂ ಬರಲಿ. ಯಾರಿಗೆ ಹೆಚ್ಚು ಜನ ಸೇರುತ್ತಾರೆ ಎಂಬುದು ಜನರಿಗೆ ಗೊತ್ತಾಗುತ್ತೆ’ ಎಂದು ಆಹಾರ ಸಚಿವ ಝಮೀರ್ ಅಹ್ಮದ್ ಖಾನ್, ತನ್ವೀರ್ ಸೇಠ್‌ಗೆ ಬಹಿರಂಗ ಸವಾಲು ಹಾಕಿದ್ದಾರೆ.

ಮಂಗಳವಾರ ವಿಕಾಸಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಜನಪ್ರಿಯ ನಾಯಕನಾಗಲು ನಾನೇನೂ ಚಿತ್ರ ನಟನಲ್ಲ. ನಾನೊಬ್ಬ ಸಮಾಜ ಸೇವಕ. ಆದರೆ, ಸೇಠ್ ಅವರಿಗೆ ನನ್ನದೊಂದು ಸವಾಲು. ಅವರ ಕ್ಷೇತ್ರಕ್ಕೆ ನಾನೂ ಬರ್ತೀನಿ ಅವ್ರೂ ಬರ್ಲಿ.. ಸತ್ಯ ಗೊತ್ತಾಗುತ್ತೆ ಎಂದು ತಿರುಗೇಟು ನೀಡಿದರು.

ಕಾಂಗ್ರೆಸ್ ಪಕ್ಷ ನನಗೆ ಸಚಿವ ಸ್ಥಾನ ನೀಡಲು ನಾನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಂಬಂಧಿಯಲ್ಲ. ಹೈಕಮಾಂಡ್ ಎಲ್ಲ ರೀತಿಯ ಸಮೀಕ್ಷೆ ನಡೆಸಿದ್ದು, ಅದನ್ನು ಆಧರಿಸಿ, ಸಾಮರ್ಥ್ಯ ಇರುವವರಿಗೆ ಅವಕಾಶ ನೀಡುತ್ತದೆ. ಅದೇ ರೀತಿ ನನಗೂ ಸಚಿವ ಸ್ಥಾನ ನೀಡಿದೆ. ಇದು ಹಿರಿಯವರಿಗೆ ಸಹಜವಾಗಿಯೇ ನಿರಾಶೆ ಮೂಡಿಸಿದೆ ಎಂದು ಹೇಳಿದರು.

ಝಮೀರ್ ಬಳಿ ಇರುವ ಹಜ್ ಮತ್ತು ವಕ್ಫ್ ಖಾತೆಯನ್ನು ಹಿಂಪಡೆಯಬೇಕು ಎಂದು ರೋಷನ್ ಬೇಗ್ ಒತ್ತಡ ಹೇರುವುದು ಸಹಜ. ಆದರೆ, ಎರಡೂ ಖಾತೆ ನನ್ನಿಂದ ಹಿಂಪಡೆದರೆ ಅವನ್ನು ಯು.ಟಿ.ಖಾದರ್‌ಗೆ ನೀಡಬೇಕು. ಆ ಖಾತೆಯನ್ನು ಮುಸ್ಲಿಮ್ ಸಮುದಾಯದ ಸಚಿವರಿಗೆ ನೀಡುವ ಸಂಪ್ರದಾಯವಿದೆ. ಬೇಗ್ ಅವರಿಗೆ ಖಾತೆ ಕೊಡಲು ಅವರು ಸಚಿವರಾಗಿಲ್ಲ ಎಂದು ಪರೋಕ್ಷ ವಾಗ್ದಾಳಿ ನಡೆಸಿದರು.

ಮೈತ್ರಿ ಸರಕಾರದಲ್ಲಿ ನಾನು ಸಚಿವನಾದ ಬಳಿಕ ನನ್ನ ಸಮುದಾಯದ ಹಿರಿಯರಾದ ರೆಹ್ಮಾನ್ ಖಾನ್, ಸಿ.ಎಂ.ಇಬ್ರಾಹೀಂ, ಎನ್.ಎ.ಹಾರೀಸ್ ಅವರನ್ನು ಭೇಟಿ ಮಾಡಿದ್ದೇನೆ. ರೋಷನ್ ಬೇಗ್ ಭೇಟಿಗೆ ಕರೆ ಮಾಡಿದ್ದೆ, ಅವರು ಹೊರಗಡೆ ಹೋಗಿದ್ದು ಫೋನ್ ಮಾಡಿಸುವುದಾಗಿ ಹೇಳಿದ್ದರೂ ಇನ್ನೂ ಫೋನ್ ಬಂದಿಲ್ಲ ಎಂದು ಪ್ರತಿಕ್ರಿಯೆ ನೀಡಿದರು.

ನನ್ನ ಸಾಮರ್ಥ್ಯ ತಿಳಿಯಿತು: ತನ್ವೀರ್ ಸೇಠ್ ಸೋಲಿಸಲು ನಾನು ಯಾವುದೇ ಪ್ರಯತ್ನವನ್ನು ಮಾಡಿಲ್ಲ. ಆದರೆ, ನಾನು ‘ಮುಸ್ಲಿಮ್ ಸಮುದಾಯದ ನಾಯಕನೇ ಅಲ್ಲ’ ಎನ್ನುವವರಿಂದ ನನಗೆ ನನ್ನ ಸಾಮರ್ಥ್ಯ ಏನೆಂದು ತಿಳಿಯಿತು ಎಂದ ಅವರು, ತನ್ವೀರ್ ಸೇಠ್ ತಮ್ಮ ಕ್ಷೇತ್ರ ಬಿಟ್ಟು ಬೇರೆ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆಯೇ ಕೇಳಿನೋಡಿ ಎಂದು ಮಾಧ್ಯಮ ಪ್ರತಿನಿಧಿಗಳನ್ನು ಪ್ರಶ್ನಿಸಿದರು.

ನನಗೆ ಅದೇ ಕಾರ್ ಬೇಕು: ‘ನಾನು ಫಾರ್ಚೂನರ್ ಕಾರು ಕೇಳಿರೋದು ನಿಜ. ನನಗೆ ದೊಡ್ಡ ಕಾರಿನಲ್ಲಿ ಓಡಾಡಿ ಅಭ್ಯಾಸ. ಹೀಗಾಗಿ ಫಾರ್ಚೂನರ್ ಕಾರ್ ಕೇಳಿದ್ದೇನೆ. ಸಿದ್ದರಾಮಯ್ಯ ಬಳಸುತ್ತಿದ್ದ ಕಾರು, ಅದಕ್ಕಾಗಿ ನಾನು ಆ ಫಾರ್ಚೂನರ್ ಕಾರು ಕೇಳಿದ್ದೇನೆ’ ಎಂದು ಝಮೀರ್ ಅಹ್ಮದ್ ಸ್ಪಷ್ಟಪಡಿಸಿದರು.

ನನಗೆ ಈಗ ಅದೇ ಕಾರು ಬೇಕು. ಅವರು ಬಳಸುತ್ತಿದ್ದ ಕಾರು ಅಂದರೆ ನನಗೆ ಇಷ್ಟ. ಸಿದ್ದರಾಮಯ್ಯ ಅಂದರೂ ನನಗೆ ಹೆಚ್ಚು ಇಷ್ಟ, ಅವರ ಕಾರನ್ನೇ ಕೊಡಿ ಎಂದು ಕೇಳಿದ್ದೇನೆ. ಇದರಲ್ಲಿ ಅದೃಷ್ಟ-ದುರಾದೃಷ್ಟ ಎಂಬುದಿಲ್ಲ. ಅಧಿಕಾರ ಶಾಶ್ವತವಲ್ಲ, ಎಲ್ಲವನ್ನೂ ಶಾಶ್ವತವಾಗಿ ಇಟ್ಟುಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ನಾನು ಈ ಹಿಂದೆ ಸಚಿವನಾದರೆ ಗಿನ್ನಿಸ್ ದಾಖಲೆ ಮಾಡುತ್ತೇನೆಂಬ ಹೇಳಿಕೆಗೆ ಈಗಲೂ ಬದ್ಧ. ಆದರೆ, ನನಗೆ ಸ್ವಲ್ಪ ಕಾಲಾವಕಾಶ ಕೊಟ್ಟರೆ ಇಲಾಖೆಯನ್ನು ಉತ್ತಮ ಸಾಧನೆ ಮಾಡಿ ತೋರಿಸುತ್ತೇನೆ’

-ಬಿ.ಝಡ್.ಝಮೀರ್ ಅಹ್ಮದ್ ಖಾನ್ ಆಹಾರ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News