ದೇಶದಲ್ಲಿ ಯುದ್ಧಕ್ಕಿಂತ ಭೀಕರ ಸ್ಥಿತಿ: ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಆತಂಕ

Update: 2018-06-19 13:35 GMT

ಕಲಬುರಗಿ, ಜೂ. 19: ಪ್ರಪಂಚದ ಕೆಲ ದೇಶಗಳು ಯುದ್ಧದ ಮನಸ್ಥಿತಿಯಲ್ಲಿವೆ. ಆದರೆ, ನಮ್ಮ ದೇಶದಲ್ಲಿ ಯುದ್ಧಕ್ಕಿಂತ ಅತ್ಯಂತ ಭೀಕರ ಪರಿಸ್ಥಿತಿ ಇದೆ. ನಮ್ಮ ದೇಶದಲ್ಲಿ ಧರ್ಮಗಳಿವೆ. ಆದರೆ, ಧಾರ್ಮಿಕತೆ ಇಲ್ಲ ಎಂದು ಸಾಹಿತಿ ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಆತಂಕ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಇಲ್ಲಿನ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಏರ್ಪಡಿಸಿದ್ದ ಬುದ್ಧ ಪೂರ್ಣಿಮೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇರಾಕ್, ಇರಾನ್, ದಕ್ಷಿಣ ಕೊರಿಯಾ, ಉತ್ತರ ಕೊರಿಯಾ ದೇಶಗಳು ಯುದ್ಧದ ಮನಸ್ಥಿತಿಯಲ್ಲಿವೆ. ಆದರೆ ಭಾರತ ದೇಶದಲ್ಲಿ ಆಂತರಿಕವಾಗಿ ಮನಸ್ಸುಗಳಲ್ಲಿ ಯುದ್ಧ ನಡೆದಿದೆ. ಜಮ್ಮು -ಕಾಶ್ಮೀರದ ಊನಾದಲ್ಲಿ ಎಂಟು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ, ಮಹಾರಾಷ್ಟ್ರದಲ್ಲಿ ಬಾವಿಗೆ ಇಳಿದರೆಂಬ ಕಾರಣಕ್ಕೆ ದಲಿತ ಬಾಲಕರಿಬ್ಬರನ್ನು ಬೆತ್ತಲೆಗೊಳಿಸಿ ಅಮಾನವೀಯವಾಗಿ ಥಳಿಸಿರುವುದು ಯುದ್ಧಕ್ಕಿಂತ ಭೀಕರ ಎಂದು ಬೇಸರ ವ್ಯಕ್ತಪಡಿಸಿದರು.

ಮೌಢ್ಯಕ್ಕೆ ಬೌದ್ಧ ಧಮ್ಮದಲ್ಲಿ ಜಾಗವಿಲ್ಲ. ದುಃಖವನ್ನು ತಿಳಿದುಕೊಂಡಾಗ ಮಾತ್ರ ಸುಖದಿಂದ ಬದುಕಲು ಸಾಧ್ಯ. ಸಚ್ಚಾರಿತ್ರ್ಯ, ಸನ್ನಡತೆ ಬಹಳ ಮುಖ್ಯ. ಇನ್ನೊಬ್ಬರ ಏಳ್ಗೆಯನ್ನು ಪ್ರೀತಿಸಬೇಕು. ಎಲ್ಲ ಧರ್ಮದವರನ್ನು ಮನುಷ್ಯರಂತೆ ಕಾಣಬೇಕು. ಆದರೆ ರಾಷ್ಟ್ರೀಯ ಪಕ್ಷವೊಂದು ಮುಸ್ಲಿಮರನ್ನು ದ್ವೇಷಿಸುತ್ತಿದೆ ಎಂದು ಬಿಜೆಪಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬೌದ್ಧ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ಎಚ್.ಟಿ.ಪೋತೆ ಮಾತನಾಡಿ, ಈ ಸಂಸ್ಥೆಯು 2011ರಲ್ಲಿ ಆರಂಭವಾಗಿದ್ದು, 1 ಕೋಟಿ ರೂ. ಅನುದಾನ ಲಭ್ಯವಿದೆ. ಸಂಸ್ಥೆಯಿಂದ ಡಿಸೆಂಬರ್ ಒಳಗೆ ಅಂತಾರಾಷ್ಟ್ರೀಯ ಸಮ್ಮೇಳನ ಆಯೋಜಿಸಲಾಗುವುದು ಎಂದು ತಿಳಿಸಿದರು. ಈ ವೇಳೆ ಗುಲ್ಬರ್ಗ ವಿವಿ ಕುಲಪತಿ ಪ್ರೊ.ಎಸ್.ಆರ್.ನಿರಂಜನ, ಸಿಂಡಿಕೇಟ್ ಸದಸ್ಯ ವಿಜಯ ಭಾಸ್ಕರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News