ಕಾಶ್ಮೀರ: ಶತ್ರುವಿನ ಜೊತೆಗಿನ ಶಯನ ಪ್ರಹಸನಕ್ಕೆ ತೆರೆ

Update: 2018-06-20 04:38 GMT

ಜಮ್ಮು ಕಾಶ್ಮೀರದಲ್ಲಿ ನಾಗರಿಕರ ಮೇಲೆ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಕೆಲ ದಿನಗಳ ಹಿಂದೆಯಷ್ಟೇ ವಿಶ್ವಸಂಸ್ಥೆ ಎಚ್ಚರಿಕೆಯನ್ನು ನೀಡಿತ್ತು. ಭಾರತ ಮತ್ತು ಪಾಕಿಸ್ತಾನ ಜೊತೆ ಸೇರಿ, ಅಲ್ಲಿ ನಾಗರಿಕ ಹಕ್ಕುಗಳ ದಮನ ನಡೆಸುತ್ತಿದೆ ಎಂದು ಆರೋಪಿಸಿದ್ದಲ್ಲದೆ ಈ ಬಗ್ಗೆ ತನಿಖೆ ನಡೆಸುವ ಇಂಗಿತವನ್ನು ವ್ಯಕ್ತಪಡಿಸಿತ್ತು. ಭಾರತ ತನ್ನ ಮೇಲಿರುವ ಆರೋಪವನ್ನು ಸ್ಪಷ್ಟವಾಗಿ ಅಲ್ಲಗಳೆದಿತ್ತಾದರೂ, ವಿಶ್ವಸಂಸ್ಥೆಯು ಭಾರತದ ಮೇಲೆ ಮಾಡಿರುವ ಆರೋಪ ದೇಶಕ್ಕೆ ಒಂದು ಕಳಂಕವೇ ಸರಿ. ಜಮ್ಮು ಕಾಶ್ಮೀರದಲ್ಲಿ ಮೈತ್ರಿಯೆನ್ನುವ ಬಿಜೆಪಿಯ ಹುಲಿಸವಾರಿಯ ಪರಿಣಾಮ ಇದು. ಪಿಡಿಪಿ ಪ್ರತ್ಯೇಕತಾವಾದಿಗಳ ಜೊತೆಗೆ ಮೃದು ನಿಲುವನ್ನು ತಳೆದಿರುವ ಪಕ್ಷ. ಅಫ್ಝಲ್‌ಗುರುವನ್ನು ಹುತಾತ್ಮನೆಂದು ಪಿಡಿಪಿಯ ನಾಯಕರು ನಂಬಿದ್ದಾರೆ ಮಾತ್ರವಲ್ಲ, ಬಹಿರಂಗವಾಗಿ ಇದನ್ನು ಘೋಷಿಸಿದ್ದಾರೆ. ಇಂತಹ ಪಕ್ಷದ ಜೊತೆಗೆ ಬಿಜೆಪಿ ಮೈತ್ರಿ ಮಾಡಿರುವುದೇ ಮಹಾ ತಪ್ಪು. ಈ ಮೂಲಕ ಅದು ಕಾಶ್ಮೀರದ ಪ್ರತ್ಯೇಕತಾವಾದಿಗಳ ಜೊತೆಗೆ ಪರೋಕ್ಷವಾಗಿ ಕೈ ಜೋಡಿಸಿ ದಂತಾಗಿತ್ತು.

ಎಲ್ಲಕ್ಕಿಂತ ಮುಖ್ಯವಾಗಿ, ಈ ಮೈತ್ರಿ ಸರಕಾರವನ್ನು ಬಳಸಿಕೊಂಡು ಆರೆಸ್ಸೆಸ್ ಮತ್ತು ಸಂಘಪರಿವಾರ ಕಾಶ್ಮೀರದ ಜನರ ಭಾವನೆಗಳ ಮೇಲೆ ನೇರ ಹಸ್ತಕ್ಷೇಪ ನಡೆಸತೊಡಗಿತು. ಕಾಶ್ಮೀರದ ಗಾಯವನ್ನು ಕೆದಕಿ ರಾಡಿ ಮಾಡ ತೊಡಗಿತು. ಪಂಡಿತರಿಗಾಗಿ ಕಾಶ್ಮೀರದಲ್ಲಿ ಘೆಟ್ಟೋಗಳ ನಿರ್ಮಾಣ, ಗೋಹತ್ಯೆ ನಿಷೇಧ ಮೊದಲಾ ಭಾವನಾತ್ಮಕ ರಾಜಕಾರಣಗಳ ಆಟಕ್ಕೆ ಇಳಿಯಿತು. ಕಾಶ್ಮೀರದ ಗಾಯ ಉಲ್ಬಣಿಸಲು ಇದು ಮುಖ್ಯ ಕಾರಣವಾಯಿತು. ಜೊತೆಗೆ ಕಾಶ್ಮೀರದಲ್ಲಿ ಬೀದಿಗಿಳಿದ ಹೋರಾಟಗಾರರನ್ನೇ ಉಗ್ರವಾದಿಗಳು ಎಂದು ಚಿತ್ರಿಸಿ ಅವರನ್ನು ಸೇನೆ ಮತ್ತು ಒಪಲೀಸರು ಮೂಲಕ ದಮನಿಸಲು ಯತ್ನಿಸಿತು. ನಾಗರಿಕರ ಮೇಲೆ ಪೆಲೆಟ್ ಗನ್ನುಗಳನ್ನು ಬಳಸಿರುವುದು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯ ವಿಷಯವಾಯಿತು. ಬುರ್ಹಾನ್‌ವಾನಿಯ ಹತ್ಯೆ ಕಾಶ್ಮೀರದ ಜನರನ್ನು ತೀವ್ರವಾಗಿ ಕೆರಳಿಸಿತು. ಒಬ್ಬ ಉಗ್ರವಾದಿಯ ಹತ್ಯೆಯ ಪರವಾಗಿ ಅಷ್ಟೊಂದು ಪ್ರಮಾಣದ ನಾಗರಿಕರು ಬೀದಿಗಿಳಿದದ್ದು ಅದೇ ಮೊದಲು. ಇದೇ ಸಂದರ್ಭದಲ್ಲಿ ಸೇನೆಯಿಂದ ನಡೆದ ನಾಗರಿಕರ ಹತ್ಯೆಗಳು, ನಾಗರಿಕನೊಬ್ಬನನ್ನು ಜೀಪಿಗೆ ಗುರಾಣಿಯಂತೆ ಬಳಸಿರುವುದೆಲ್ಲ ಉಗ್ರವಾದಿಗಳಿಗೆ ಪರೋಕ್ಷವಾಗಿ ನೆರವಾಯಿತು. ಸೇನೆಯ ಬಲದಿಂದ ನಾಗರಿಕರ ಪ್ರತಿಭಟನೆಯನ್ನು ಸದ್ದಿಲ್ಲದಂತೆ ಅಡಗಿಸಬಹುದು ಎನ್ನುವ ಯೋಜನೆ ರೂಪುಗೊಂಡದ್ದು ಸಂಘಪರಿವಾರದ ಕಚೇರಿಯಲ್ಲಿ. ಅದನ್ನು ಅನುಷ್ಠಾನಕ್ಕಿಳಿಸಲು ಹೋಗಿ ಕಾಶ್ಮೀರವನ್ನು ಇನ್ನಷ್ಟು ಆಪತ್ತಿಗೆ ದೂಡಿತು. ಉಗ್ರವಾದಿಗಳು ಮತ್ತು ನಾಗರಿಕರ ನಡುವಿನ ವ್ಯತ್ಯಾಸ ಗುರುತಿಸುವಲ್ಲೇ ಸರಕಾರ ವಿಫಲವಾಯಿತು.

ಕಾಶ್ಮೀರದ ನಿಜವಾದ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನವನ್ನೂ ಬಿಜೆಪಿ ಮಾಡಲಿಲ್ಲ. ಪ್ರತಿಭಟನೆ ನಡೆಸುವ, ಕಲ್ಲುತೂರಾಟ ನಡೆಸುವ ನಾಗರಿಕರು ಹಣ ಪಡೆದು ಕಲ್ಲುತೂರಾಟ ಮಾಡುತ್ತಿದ್ದಾರೆ ಎಂಬ ಹೇಳಿಕೆಯನ್ನು ನೀಡಿ ಇಡೀ ಸಮಸ್ಯೆಯನ್ನು ಸರಳೀಕರಿಸಿತು. ಅಷ್ಟೇ ಅಲ್ಲ, ನೋಟು ನಿಷೇಧದಿಂದಾಗಿ ಕಾಶ್ಮೀರದಲ್ಲಿ ಹಿಂಸಾಚಾರ ನಿಲ್ಲುತ್ತದೆ ಎಂಬ ಬೇಜವಾಬ್ದಾರಿ ತರ್ಕವನ್ನು ದೇಶದ ಮುಂದಿಟ್ಟಿತು. ನೋಟು ನಿಷೇಧದಿಂದಾಗಿ ಕಾಶ್ಮೀರದಲ್ಲಿ ಇನ್ನಷ್ಟು ಆರ್ಥಿಕ ಬಿಕ್ಕಟ್ಟು ಕಾಣಿಸಿಕೊಂಡಿತು. ಸ್ಥಳೀಯ ಉದ್ದಿಮೆಗಳ ಮೇಲೂ ಅದು ಪರಿಣಾಮ ಬೀರಿತು. ಇದರಿಂದಾಗಿ ಯುವಕರು ಹೆಚ್ಚು ಹೆಚ್ಚು ನಿರುದ್ಯೋಗಿಗಳಾಗ ತೊಡಗಿದರು. ಇಂತಹ ನಿರುದ್ಯೋಗಿಗಳನ್ನು ಉಗ್ರವಾದಿಗಳು ತಮ್ಮೆಡೆಗೆ ಸೆಳೆಯ ತೊಡಗಿದರು. ಕಾಶ್ಮೀರ ಸಮಸ್ಯೆ ನೋಟಿನಿಂದ ಸೃಷ್ಟಿಯಾದುದಲ್ಲ ಎನ್ನುವುದು ಕೇಂದ್ರ ಸರಕಾರಕ್ಕೆ ಅರಿವಾಗುವಾಗ ತೀರಾ ತಡವಾಗಿತ್ತು.

ವಿಶ್ವಸಂಸ್ಥೆ ಯಾವಾಗ ಕಾಶ್ಮೀರದ ಬಗ್ಗೆ ಭಾರತಕ್ಕೆ ಎಚ್ಚರಿಕೆಯನ್ನು ನೀಡಿತೋ ಅಲ್ಲಿಂದ ಬಿಜೆಪಿ ಮತ್ತು ಪಿಡಿಪಿ ಎರಡೂ ಪಕ್ಷಗಳಿಗೆ ತಮ್ಮ ತಮ್ಮ ಸಂಬಂಧವನ್ನು ಕಳಚಿಕೊಳ್ಳುವುದು, ಬಿಗಡಾಯಿಸಿರುವ ಪರಿಸ್ಥಿತಿಯಿಂದ ಪಾರಾಗುವುದು ಅನಿವಾರ್ಯ ಅನ್ನಿಸಿದೆ. ಪ್ರತ್ಯೇಕತಾವಾದಿಗಳ ವಿರುದ್ಧ ನಿಷ್ಠುರ ನಿಲುವು ತಲೆಯಲು ಪಿಡಿಪಿ ಸಿದ್ಧವಿಲ್ಲ. ಪ್ರತಿಭಟನಾಕಾರರ ವಿರುದ್ಧ ಸೇನೆ ಮತ್ತು ಪೊಲೀಸರು ನಡೆಸುತ್ತಿರುವ ದೌರ್ಜನ್ಯದ ವಿರುದ್ಧ ಬಹಿರಂಗವಾಗಿ ಮಾತನಾಡಲು ಸಾಧ್ಯವಾಗದಂತಹ ಸ್ಥಿತಿ ಪಿಡಿಪಿಯ ಕೈಗಳನ್ನು ಕಟ್ಟಿ ಹಾಕಿದಂತಿತ್ತು. ಇದೇ ಸಂದರ್ಭದಲ್ಲಿ ಕಥುವಾ ಪ್ರಕರಣ ಮೈತ್ರಿ ಸರಕಾರದೊಳಗಿರುವ ಅಸಮಾಧಾನವನ್ನು ಸಂಪೂರ್ಣವಾಗಿ ಬಹಿರಂಗಗೊಳಿಸಿತು. ಕಥುವಾದಲ್ಲಿ ಎಳೆ ಮಗುವಿನ ಮೇಲೆ ಸಂಘಪರಿವಾರದ ಕಾರ್ಯಕರ್ತರು ನಡೆಸಿದ ಬರ್ಬರ ಅತ್ಯಾಚಾರ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಯಿತು. ಇದೇ ಸಂದರ್ಭದಲ್ಲಿ, ಮೈತ್ರಿ ಸರಕಾರದ ಬಿಜೆಪಿ ಸಚಿವರು ಆರೋಪಿಗಳನ್ನು ರಕ್ಷಿಸಲು ಬೀದಿಗಿಳಿದಿರುವುದು ಮಾಧ್ಯಮಗಳಲ್ಲಿ ಚರ್ಚೆಯ ವಿಷಯವಾಯಿತು. ಆ ಸಚಿವರನ್ನು ಹೊರ ಹಾಕಲೇಬೇಕು ಎಂದು ಪಿಡಿಪಿ ಹಟ ಹಿಡಿಯಿತು. ಬಿಜೆಪಿ ಅನಿವಾರ್ಯವಾಗಿ ಇಬ್ಬರು ಸಚಿವರಿಂದ ರಾಜೀನಾಮೆ ನೀಡಿಸಿತು. ಇದರಿಂದ ಬಿಜೆಪಿ ತೀವ್ರ ಮುಜುಗರ ಅನುಭವಿಸಬೇಕಾಯಿತು. ಜಮ್ಮು ಘಟನೆಯ ಬಳಿಕ ಪಿಡಿಪಿ ತನ್ನ ನಿಲುವನ್ನು ಸ್ಪಷ್ಟವಾಗಿ ಮುಂದಿಡತೊಡಗಿತು. ಸಂಘಪರಿವಾರ ಮತ್ತು ಸೇನೆಯ ದೌರ್ಜನ್ಯಗಳ ವಿರುದ್ಧ ನೇರವಾಗಿ ಮಾತನಾಡಲು ಶುರು ಹಚ್ಚಿತು. ಜೊತೆಗೆ ಬಲ ಪ್ರಯೋಗದಿಂದ ಕಾಶ್ಮೀರದಲ್ಲಿ ಶಾಂತಿ ನೆಲಸಲು ಸಾಧ್ಯವಿಲ್ಲ ಎನ್ನುವುದನ್ನೂ ತನ್ನ ಮಿತ್ರ ಪಕ್ಷವಾದ ಬಿಜೆಪಿಗೆ ಸ್ಪಷ್ಟ ಪಡಿಸ ತೊಡಗಿತು. ಇತ್ತೀಚಿನ ಕದನ ವಿರಾಮ ಮಾತುಕತೆಯೂ ಅದರ ಭಾಗವೇ ಆಗಿದೆ. ಆದರೆ ಈ ಕುರಿತಂತೆ ಬಿಜೆಪಿಯ ನಿಲುವು ಭಿನ್ನವಾಗಿದೆ. ಪ್ರತ್ಯೇಕತಾವಾದಿಗಳ ಜೊತೆಗೆ ನೇರ ಮಾತುಕತೆ ನಡೆಸಿದರೆ ಅದನ್ನು ವಿರೋಧ ಪಕ್ಷಗಳು ಬಳಸಿಕೊಳ್ಳಬಹುದು ಎನ್ನುವ ಭಯ ಬಿಜೆಪಿಗಿದೆ. ಕಾಶ್ಮೀರದ ಕುರಿತಂತೆ ಬಿಜೆಪಿ ತಳೆದಿರುವ ನಿಲುವು ಪಿಡಿಪಿಗೆ ತದ್ವಿರುದ್ಧವಾದುದು. ಅಂತಿಮವಾಗಿ ಕಾಶ್ಮೀರದ ಸಮಸ್ಯೆಯನ್ನು ತನ್ನಿಂದ ಪರಿಹರಿಸುವುದು ಸಾಧ್ಯವಿಲ್ಲ ಎನ್ನುವುದು ಬಿಜೆಪಿಗೆ ಕೊನೆಗೂ ಮನವರಿಕೆಯಾದಂತಿದೆ. ಈ ಹುಲಿ ಸವಾರಿಗೆ ಅಂತಿಮವಾಗಿ ತಾನೇ ಬಲಿಯಾಗುವ ಭಯ ಅದನ್ನು ಕಾಡಿದೆ. ಮಹಾಚುನಾವಣೆ ಹತ್ತಿರ ಬರುತ್ತಿದೆ. ಈಗಾಗಲೇ ಪಿಡಿಪಿಯೊಂದಿಗೆ ಮೈತ್ರಿ ಮಾಡುವ ಮೂಲಕ ಕಳಂಕವನ್ನು ಮೈಮೇಲೆ ಎಳೆದುಕೊಂಡಿರುವ ಬಿಜೆಪಿಗೆ ಲೋಕಸಭಾ ಚುನಾವಣೆಗೆ ಮುನ್ನ ಅದರಿಂದ ಕಳಚಿಕೊಳ್ಳುವುದು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕಥುವಾ ಪ್ರಕರಣವನ್ನು ಒಂದು ನೆಪ ಮಾಡಿಕೊಂಡು ಇಬ್ಬರೂ ಪರಸ್ಪರ ಮಂಚದಿಂದ ಇಳಿದಿದ್ದಾರೆ.

ಪಿಡಿಪಿ ಮತ್ತು ಬಿಜೆಪಿ ಮೈತ್ರಿ ಸರಕಾರದ ನಡುವೆ ವಿಚ್ಛೇದನವೇನೋ ನಡೆದಿದೆ. ಆದರೆ ಈ ಅವಧಿಯಲ್ಲಿ ಕಾಶ್ಮೀರದ ಕುರಿತು ಭಾರತ ತಳೆದ ನಿಲುವಿನ ಬಗ್ಗೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಒಂದು ಕೆಟ್ಟ ಸಂದೇಶ ರವಾನೆಯಾಗಿದೆ. ಕಾಶ್ಮೀರದ ಸಮಸ್ಯೆ ಸಂಪೂರ್ಣ ಬಿಗಡಾಯಿಸಿದೆ. ವಿಶ್ವಸಂಸ್ಥೆ ಕಾಶ್ಮೀರದ ವಿಷಯದಲ್ಲಿ ಈಗಾಗಲೇ ಒಂದು ಕಣ್ಣಿಟ್ಟಿದೆ. ಇಂತಹ ಸಂದರ್ಭ ದಲ್ಲಿ, ಬಲ ಪ್ರಯೋಗಿಸಿ ಕಾಶ್ಮೀರದ ಜನರನ್ನು ನಿಯಂತ್ರಣದಲ್ಲಿಡಬಹುದು ಎನ್ನುವ ಆಲೋಚನೆಯಿಂದ ದೂರ ಸರಿಯುವುದು ಒಳಿತು. ಕಾಶ್ಮೀರದ ಜನರನ್ನು ನಮ್ಮವರನ್ನಾಗಿಸಿಕೊಳ್ಳದೇ ಕಾಶ್ಮೀರವನ್ನು ನಮ್ಮದಾಗಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದನ್ನು ಸರಕಾರ ಇನ್ನಾದರೂ ಅರ್ಥಮಾಡಿಕೊಳ್ಳಬೇಕು. ಸದ್ಯಕ್ಕೆ, ಹೊಸ ಚುನಾವಣೆಯೇ ಕಾಶ್ಮೀರದ ಬಿಕ್ಕಟ್ಟಿಗೆ ಪರಿಹಾರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News