ಇದೊಂದು ಸಂಸದೀಯ ಪ್ರಜಾಸತ್ತೆಯು ಅಣಕ

Update: 2018-06-19 18:24 GMT

90ರ ದಶಕದ ವೇಳೆಗೆ ಭಾರತದಲ್ಲಿ ಉದಾರೀಕರಣ- ಖಾಸಗೀಕರಣ-ಜಾಗತೀಕರಣದ ಯುಗಾರಂಭಗೊಂಡಾಗಿನಿಂದ, ಜನತೆಯ ಹಾಗೂ ಅವರಿಂದ ಚುನಾಯಿಸಲ್ಪಟ್ಟ ಸರಕಾರಕ್ಕೆ ಸೇರಿದ ಪ್ರತಿಯೊಂದನ್ನೂ ಖಾಸಗೀಕರಣಗೊಳಿಸಬೇಕೆಂಬ ಕಹಳೆ ಮೊಳಗುತ್ತಲೇ ಇದೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರ ಸಾರಥ್ಯದಲ್ಲಿ ಅಧಿಕಾರಕ್ಕೇರಿದ ಹಾಲಿ ಸರಕಾರಕ್ಕೆ ಈ ಕರೆಯು ಗಟ್ಟಿಯಾಗಿ ಕೇಳಿಸಿದೆ ಮಾತ್ರವಲ್ಲ, ಅದನ್ನು ಆಚರಣೆಗೆ ತರಲು ಟೊಂಕಕಟ್ಟಿ ನಿಂತಿದೆ.

ಇದಕ್ಕೆ ಪೂರ್ವಸಿದ್ಧತೆಯೆಂಬಂತೆ, ಮೋದಿ ಸರಕಾರವು ಅಧಿಕಾರಕ್ಕೆ ಬಂದ ಸ್ವಲ್ಪ ಸಮಯದಲ್ಲೇ ದೀರ್ಘಕಾಲದಿಂದ ಅಸ್ತಿತ್ವದಲ್ಲಿದ್ದ ಯೋಜನಾ ಆಯೋಗವನ್ನು ಏಕಾಏಕಿಯಾಗಿ ಬರ್ಖಾಸ್ತುಗೊಳಿಸಿತು ಹಾಗೂ ಅದರ ಜಾಗದಲ್ಲಿ ‘ಭಾರತದ ಪರಿವರ್ತನೆಗಾಗಿನ ರಾಷ್ಟ್ರೀಯ ಸಂಸ್ಥೆ’ ಅಥವಾ ನೀತಿ ಆಯೋಗವನ್ನು ಸ್ಥಾಪಿಸಲಾಯಿತು. ಇಲ್ಲಿ ಪರಿವರ್ತನೆ ಎಂಬ ಪದವನ್ನು ಖಾಸಗೀಕರಣವೆಂಬುದಕ್ಕೆ ಪರ್ಯಾಯವಾಗಿ ಬಳಸಿರುವುದು ಸ್ಪಷ್ಟವಾಗಿ ತಿಳಿಯುತ್ತದೆ. ನೀತಿ ಆಯೋಗವಂತೂ, ವಸ್ತುಶಃ ಎಲ್ಲ ಸಂಸ್ಥೆಗಳನ್ನು, ಮೂಲ ಸೌಕರ್ಯಗಳನ್ನು ಹಾಗೂ ಸೇವೆಗಳನ್ನು ಖಾಸಗೀಕರಣಗೊಳಿಸಬೇಕೆಂದು ಆಗ್ರಹಿಸುವ ಕಾರ್ಪೊರೇಟ್ ಕನ್ಸಲ್ಟೆಂಟ್ ಸಂಸ್ಥೆಯಂತೆ ವರ್ತಿಸುತ್ತಿದೆ. ಇದೀಗ, ಪ್ರಜಾತಾಂತ್ರಿಕ ಆಡಳಿತದ ಸಮರ್ಥ ಸಾಧನವೆನಿಸಿರುವ, ಸಂವಿಧಾನದ ನಿಯಮಗಳಡಿ ಸೃಷ್ಟಿಸಲಾಗಿರುವ ಭಾರತೀಯ ಆಡಳಿತ ಸೇವೆಗಳನ್ನು ಖಾಸಗೀಕರಣಗೊಳಿಸಲು ಕೂಡಾ ಪ್ರಯತ್ನಗಳು ನಡೆಯುತ್ತಿವೆ.

ಭಾರತೀಯ ಆಡಳಿತಾತ್ಮಕ ಸೇವೆಯನ್ನು ಖಾಸಗೀಕರಣಗೊಳಿಸುವ ಪ್ರಯತ್ನಕ್ಕೆ ಕೆಲವು ಸಮಯದ ಹಿಂದೆಯೇ ಅಸ್ತಿಭಾರ ಹಾಕಲಾಗಿತ್ತಾದರೂ, ಕಳೆದ ಮೂರು ವರ್ಷಗಳಲ್ಲಿ ಅದಕ್ಕೆ ಹೆಚ್ಚಿನ ವೇಗ ದೊರೆತಿದೆ. ಈ ನಿಟ್ಟಿನಲ್ಲಾದ ಮೊದಲನೆಯ ಬದಲಾವಣೆಯೆಂದರೆ, ಐಎಎಸ್ ತರಬೇತಿ ನಿರತರು (ಪ್ರೊಬೇಷನರಿಗಳು) ಇನ್ನು ಮುಂದೆ ತಮ್ಮ ತರಬೇತಿಯನ್ನು ಅನತಿದೂರದ ಜಿಲ್ಲೆಗಳಲ್ಲಿರುವ ಜಿಲ್ಲಾಧಿಕಾರಿಗಳು ಅಥವಾ ಸಹಾಯಕ ಆಯುಕ್ತರ ಬಳಿ ತರಬೇತಿ ಪಡೆಯುವ ಬದಲು ದಿಲ್ಲಿಯಲ್ಲಿ ಭಾರತ ಸರಕಾರದ ಸಹಾಯಕ ಕಾರ್ಯದರ್ಶಿಗಳಾಗಿ ನೇಮಕಗೊಳಿಸಲಾಗುತ್ತದೆ. ಹೊಸತಾಗಿ ಐಎಎಸ್‌ಗೆ ನೇಮಕಗೊಂಡವರು, ನೇರವಾಗಿ ಕ್ಷೇತ್ರದ ಪರಿಚಯವನ್ನು ಮಾಡಿಕೊಳ್ಳುವುದಕ್ಕಿಂತ ಮೇಜಿನಲ್ಲಿ ಕುಳಿತು ಮಾಡುವ ಕೆಲಸ ಹೆಚ್ಚು ಮಹತ್ವದ್ದಾಗಿದೆಯೆಂಬ ಸ್ಪಷ್ಟ ಸಂದೇಶವನ್ನು ಸರಕಾರವು ಈ ಮೂಲಕ ನೀಡಹೊರಟಿದೆ. ಐಎಎಸ್ ಅಧಿಕಾರಿಗಳಿಗೆ ಲಭಿಸುವ ವಿಶಿಷ್ಟವಾದ ಅವಕಾಶವೆಂದರೆ ಬ್ಲಾಕ್, ತಹಶೀಲ್ ಹಾಗೂ ಜಿಲ್ಲಾ ಮಟ್ಟದಲ್ಲಿ ಅವರು ಮೊದಲ ಬಾರಿಗೆ ನಿಯೋಜನೆಗೊಂಡಾಗ ಅವರಿಗೆ ಸಾರ್ವಜನಿಕರು ಹಾಗೂ ರಾಜಕೀಯ ನಾಯಕತ್ವದ ಜೊತೆಗಿನ ಸಂಪರ್ಕ ಲಭ್ಯವಾಗುತ್ತದೆ ಹಾಗೂ ಜಿಲ್ಲಾ ಮಟ್ಟದ ವಿವಿಧ ಹೊಣೆಗಾರಿಕೆಗಳಿಗೆ ನಿಯೋಜನೆಗೊಳ್ಳುವುದರಿಂದ ಅವರಿಗೆ ಅಮೂಲ್ಯವಾದ ತಳಮಟ್ಟದ ಅನುಭವ ದೊರೆಯುತ್ತದೆ. ಇವೆಲ್ಲವೂ ಅವರಿಗೆ ಭವಿಷ್ಯದಲ್ಲಿ ಜನಕೇಂದ್ರಿತ ನೀತಿ ನಿರೂಪಣೆಗೆ ವರದಾನವಾಗುತ್ತವೆ. ಅಭಿವೃದ್ಧಿಯ ಹಾಗೂ ಜನಕಲ್ಯಾಣ ಯೋಜನೆಗಳನ್ನು ರೂಪಿಸುವಲ್ಲಿ ಹಾಗೂ ಅವುಗಳನ್ನು ಪರಿಣಾಮಕಾರಿಯಾಗಿ ಮತ್ತು ತ್ವರಿತವಾಗಿ ಅನುಷ್ಠಾನಗೊಳಿಸುವುದಕ್ಕೂ ಅವು ನೆರವಿಗೆ ಬರುತ್ತವೆ. ಐಎಎಸ್‌ನ ಖಾಸಗೀಕರಣಗೊಳಿಸುವ ಕೇಂದ್ರ ಸರಕಾರದ ನಡೆಗಳು, ಈ ಪ್ರಕ್ರಿಯೆಗಳನ್ನು ನಿಖರವಾಗಿ ನಿಷ್ಕ್ರಿಯಗೊಳಿಸುತ್ತವೆ.

ಕೇಂದ್ರ ಸರಕಾರದ ಇಲಾಖೆಗಳಲ್ಲಿನ ಜಂಟಿ ಕಾರ್ಯದರ್ಶಿಗಳ ಕಾರ್ಯಾಲಯಗಳಲ್ಲಿ ನಿರ್ಧಾರ ರೂಪಿಸುವ ಮಟ್ಟದಲ್ಲಿ ಐಎಎಸ್ ಅಧಿಕಾರಿಗಳ ಪಾತ್ರವನ್ನು ಗಣನೀಯವಾಗಿ ಮೊಟಕುಗೊಳಿಸಲಾಗಿದೆ. ಅವರ ಜಾಗದಲ್ಲಿ ಯಾವುದೇ ತಳಮಟ್ಟದ ಅನುಭವವಿರದ ಅಥವಾ ಜನಸಂಪರ್ಕವಿಲ್ಲದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದೇ ಮೊದಲ ಬಾರಿಗೆ ಕೇಂದ್ರ ಸರಕಾರದಲ್ಲಿರುವ ಜಂಟಿ ಕಾರ್ಯದರ್ಶಿಗಳಲ್ಲಿ ಶೇ.30ಕ್ಕೂ ಅಧಿಕ ಮಂದಿ ಐಎಎಸ್ ಹೊರಗಿನ ಸೇವೆಗಳಿಂದ ಬಂದವರಾಗಿದ್ದಾರೆ. ಕಳೆದ ಜೂನ್‌ನಲ್ಲಿ ನಡೆದ ಜಂಟಿ ಕಾರ್ಯದರ್ಶಿಗಳ ನೇಮಕದಲ್ಲಿ ಆಗಿರುವಂತೆ, ಪರಿಸ್ಥಿತಿ ಈಗ ಇನ್ನಷ್ಟು ಶೋಚನೀಯವಾಗಲಿದೆ. ಜಂಟಿ ಕಾರ್ಯದರ್ಶಿಗಳ ಕಾರ್ಯಾಲಯಗಳಿಗೆ ನೇಮಕಗೊಂಡ ಕೇವಲ 21 ಮಂದಿ ಅಧಿಕಾರಿಗಳ ಪೈಕಿ ಕೇವಲ ಏಳು ಮಂದಿ ಐಎಎಸ್ ಅಧಿಕಾರಿಗಳಾಗಿದ್ದು, ಉಳಿದವರು ಕೇಂದ್ರೀಯ ಸೇವೆಗಳಿಗೆ ಸೇರಿದವರಾಗಿದ್ದಾರೆ.

ಈಗ ಕಂಡುಬರುತ್ತಿರುವ ಇನ್ನೊಂದು ಕಳವಳಕಾರಿ ಪ್ರವೃತ್ತಿಯೆಂದರೆ, ಹಲವಾರು ಐಎಎಸ್ ಜಂಟಿ ಕಾರ್ಯದರ್ಶಿಗಳು ತಮ್ಮನ್ನು ಆಯಾ ರಾಜ್ಯ ಮಟ್ಟದ ಕೇಡರ್‌ಗಳಿಗೆ ಅವಧಿಪೂರ್ವದಲ್ಲೇ ಮರಳಿ ಕಳುಹಿಸಿ ಕೊಡಬೇಕೆಂದು ಕೋರತೊಡಗಿದ್ದಾರೆ. ಅತ್ಯಂತ ಕಡಿಮೆ ಸಂಖ್ಯೆಯ ಐಎಎಸ್ ಅಧಿಕಾರಿಗಳು ಮಾತ್ರವೇ ಕೇಂದ್ರದ ಸೇವೆಯಲ್ಲಿ ನಿಯೋಜನೆಗೊಳ್ಳಲು ಬಯಸುತ್ತಿದ್ದಾರೆ.

ನಾಗರಿಕ ಸೇವೆಗಳ ಹುದ್ದೆಗಳಿಗೆ ನೇರಪ್ರವೇಶಾತಿ
ನಾಗರಿಕ ಸೇವೆಗಳಿಗೆ (ಸಿವಿಲ್ ಸರ್ವಿಸಸ್) ಅರ್ಹ ಅಭ್ಯರ್ಥಿಗಳ ನೇರ ಪ್ರವೇಶಕ್ಕೆ ಅವಕಾಶ ನೀಡಲು ಕೇಂದ್ರ ಸರಕಾರವು ಈಗ ಯೋಜನೆಯನ್ನು ಹಮ್ಮಿಕೊಂಡಿದೆ. ಇತ್ತೀಚೆಗೆ ಅದು 10 ಜಂಟಿ ಕಾರ್ಯದರ್ಶಿ ಮಟ್ಟದ ಹುದ್ದೆಗಳ ನೇಮಕಾತಿಗಾಗಿ ಕಂದಾಯ, ಆರ್ಥಿಕ ಸೇವೆಗಳು, ಆರ್ಥಿಕ ವ್ಯವಹಾರಗಳು, ಕೃಷಿ, ಸಹಕಾರ ಹಾಗೂ ರೈತ ಕಲ್ಯಾಣ, ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳು, ಶಿಪ್ಪಿಂಗ್, ಪರಿಸರ, ಅರಣ್ಯಗಳು ಮತ್ತು ಹವಾಮಾನ ಬದಲಾವಣೆ, ರಸ್ತೆ ಮತ್ತು ಪುನರ್‌ನವೀಕರಣ ಯೋಗ್ಯ ಇಂಧನ, ನಾಗರಿಕ ವಾಯುಯಾನ ಹಾಗೂ ವಾಣಿಜ್ಯ ಕ್ಷೇತ್ರಗಳಿಗೆ ಸಂಬಂಧಿಸಿ ಇಲಾಖೆಗಳಿಗಾಗಿ ‘ಅಸಾಧಾರಣ ಅರ್ಹತೆಯಿರುವ ವ್ಯಕ್ತಿಗಳಿಂದ’ ಅರ್ಜಿಗಳನ್ನು ಆಹ್ವಾನಿಸಿದೆ.

ಅರ್ಜಿ ಆಹ್ವಾನಿಸಲ್ಪಟ್ಟ ಹುದ್ದೆಗಳ ಸಂಖ್ಯೆ ಕಡಿಮೆಯಿದ್ದರೂ, ಒಮ್ಮೆ ಈ ಪ್ರಕ್ರಿಯೆ ಆರಂಭಗೊಂಡಲ್ಲಿ, ಸರಕಾರದೊಳಗೆ ಪರ್ಯಾಯ ಖಾಸಗಿ ಸೇವೆಯನ್ನು ಬಳಸಿಕೊಳ್ಳುವ ಹೊಸ ವ್ಯವಸ್ಥೆಗೆ ಇದು ನಾಂದಿಹಾಡುವ ಸಾಧ್ಯತೆಯಿದೆ.

ರಾಜಕೀಯ ಹಾಗೂ ಸರಕಾರದಲ್ಲಿ, ಪೋಷಕ ವ್ಯವಸ್ಥೆ (patronage system) ಎಂಬುದು ಅಧಿಕಾರದಲ್ಲಿರುವ ರಾಜಕೀಯ ಪಕ್ಷದ ಸ್ನೇಹಿತರನ್ನು ಹಾಗೂ ಬೆಂಬಲಿಗರನ್ನು ಸರಕಾರಿ ಹುದ್ದೆಗಳಿಗೆ ನೇಮಿಸುವ ಹಾಗೂ ಅವರಿಗೆ ಭಡ್ತಿ ನೀಡುವ ಒಂದು ವ್ಯವಸ್ಥೆ ಏರ್ಪಾಡಾಗಿದೆ. ಸರಕಾರಿ ಹುದ್ದೆಗಳಲ್ಲಿ ತಮ್ಮ ರಾಜಕೀಯ ವೈರಿಗಳನ್ನು ಹೊರದಬ್ಬಲು ಹಾಗೂ ತಮ್ಮ ರಾಜಕೀಯ ಸ್ನೇಹಿತರನ್ನು ನೇಮಿಸುವ ಉದ್ದೇಶದಿಂದಲೇ ಈ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ. ಇದೊಂದು ಸಂಸದೀಯ ಪ್ರಜಾಸತ್ತೆಯ ಅಣಕವಾಗಿದೆ.

ಮೋದಿ ಆಡಳಿತದ ಈ ಎಲ್ಲಾ ನಡೆಗಳು ಕೇಂದ್ರ ಸರಕಾರದ ಸೇವೆಯಿಂದ ಐಎಎಸ್‌ನ್ನು ಹೊರಗಿಡುವ ತಂತ್ರವಾಗಿದೆ. ಇದಕ್ಕೆ ಸಮರ್ಥನೆಯಾಗಿ, ಏಳನೇ ವೇತನ ಆಯೋಗದ ಅಧ್ಯಕ್ಷರಾದ ನ್ಯಾಯಮೂರ್ತಿ ಎ.ಕೆ. ಮಾಥುರ್ ಹಾಗೂ ಅದರ ಸದಸ್ಯ ಡಾ.ರತಿನ್ ರಾಯ್ ಅವರು, ‘‘ಇತ್ತೀಚಿನ ದಿನಗಳಲ್ಲಿ ಸರಕಾರದ ಉನ್ನತ ನಿರ್ವಹಣೆಯ ಹಾಗೂ ಆಡಳಿತಾತ್ಮಕ ಹುದ್ದೆಗಳು ಗಣನೀಯವಾಗಿ ವಿಕಸನಗೊಂಡಿದ್ದು, ಅವು ಹೆಚ್ಚುಹೆಚ್ಚು ತಾಂತ್ರಿಕವಾಗುತ್ತಿದ್ದು, ಅವುಗಳಿಗೆ ನಿರ್ದಿಷ್ಟವಾದ ಸಾಫ್ಟ್‌ವೇರ್ ತಂತ್ರಜ್ಞಾನದ ಅರಿವಿರುವ ಅಗತ್ಯವಿರುತ್ತದೆ’’ ಎಂದು ಹೇಳಿರುವುದನ್ನು ಇಲ್ಲಿ ಗಂಭೀರವಾಗಿ ಪರಿಗಣಿಸಬೇಕಾಗಿದೆ.

ಆದರೆ ಅವರು ಈ ಒಂದು ಪ್ರಶ್ನೆಗೆ ಉತ್ತರಿಸಲೇಬೇಕಾಗಿದೆ. ಭಾರತದ ಮಟ್ಟಿಗೆ ಸರಕಾರವನ್ನು ನಡೆಸಲು ಸಾಫ್ಟ್‌ವೇರ್ ಪರಿಣತಿಯ ಅಗತ್ಯವು ಎಷ್ಟಿರುತ್ತದೆ?. ಬೃಹತ್ ಉದ್ಯಮಿಗಳ ‘ಕೊಳ್ಳೆಹೊಡೆಯುವ ಅಭಿವೃದ್ಧಿ ಮಾದರಿ’ಗೆ ಉತ್ತೇಜನ ನೀಡುವುದಕ್ಕಾಗಿಯೇ ಅಥವಾ ದೈತ್ಯ ಕಾರ್ಪೊರೇಟ್ ಸಂಸ್ಥೆಗಳ ಒಲೈಕೆಗೋಸ್ಕರವೇ? ಅಥವಾ ದಯನೀಯ ಪರಿಸ್ಥಿತಿಯಲ್ಲಿ ಬದುಕುತ್ತಿರುವ ಕೋಟ್ಯಂತರ ಮಂದಿಯನ್ನು ಮೇಲೆತ್ತಲು ಸಾಧ್ಯವಿರುವಂತಹ ಪರಿಣಾಮಕಾರಿ ಆಡಳಿತವನ್ನು ನೀಡಿ, ದೇಶವನ್ನು ಒಗ್ಗೂಡಿಸುವುದಕ್ಕಾಗಿಯೇ?.

Writer - ಎಂ.ಜಿ. ದೇವಸಹಾಯಂ

contributor

Editor - ಎಂ.ಜಿ. ದೇವಸಹಾಯಂ

contributor

Similar News