ತಮಿಳುನಾಡಿನ ಅನುಕ್ರೀತಿ ವಾಸ್ 'ಮಿಸ್ ಇಂಡಿಯಾ 2018'

Update: 2018-06-20 05:20 GMT

ಹೊಸದಿಲ್ಲಿ, ಜೂ. 20: ತಮಿಳುನಾಡಿನ ಅನುಕ್ರೀತಿ ವಾಸ್ 2018ರ ಮಿಸ್ ಇಂಡಿಯಾ ವರ್ಲ್ಡ್ ಕಿರೀಟ ಧರಿಸಿದರು. 2017ರ ಮಿಸ್ ಇಂಡಿಯಾ ಮಾನುಷಿ ಚಿಲ್ಲರ್, ಕರೀನಾ ಕಪೂರ್ ಖಾನ್, ಜಾಕ್ವೆಲಿನ್ ಫರ್ನಾಂಡಿಸ್ ಹಾಗೂ ಧಕ್ ಧಕ್ ಬೆಡಗಿ ಮಾಧುರಿ ದೀಕ್ಷಿತ್ ಅವರ ರೋಮಾಂಚಕ ಪ್ರದರ್ಶನದ ನಡುವೆ ನಡೆದ ಸ್ಪರ್ಧೆ ಪ್ರೇಕ್ಷಕರ ಮನಸೂರೆಗೊಂಡಿತು.

ಎಫ್‌ಬಿಬಿ ಕಲರ್ಸ್‌ ಫೆಮಿನಾ ಮಿಸ್ ಇಂಡಿಯಾ- 2018, 55ನೇ ವರ್ಷದ ಸ್ಪರ್ಧೆಯಾಗಿದ್ದು, ದೆಹಲಿ ಸೇರಿದಂತೆ ಎಲ್ಲ 30 ರಾಜ್ಯಗಳ ಪ್ರತಿನಿಧಿಗಳನ್ನು ಒಳಗೊಂಡಿದೆ. ಮಿಸ್ ಇಂಡಿಯಾ ಕಿರೀಟದ ಹೋರಾಟಕ್ಕೆ ಪ್ರತಿರಾಜ್ಯದಿಂದ ತಲಾ ಒಬ್ಬರು ಆಯ್ಕೆಯಾಗಿದ್ದರು. ಕಳೆದ ವರ್ಷದ ವಿಜೇತೆ ಹಾಗೂ ವಿಶ್ವಸುಂದರಿ ಮಾನುಷಿ ಚಿಲ್ಲರ್, ತಮ್ಮ ಅನುಭವ ಹಂಚಿಕೊಂದರು.

ಇತರ ತೀರ್ಪುಗಾರರಲ್ಲಿ ಕ್ರಿಕೆಟರ್ ಕೆ.ಎಲ್.ರಾಹುಲ್ ಮತ್ತು ಇರ್ಫಾನ್ ಪಠಾಣ್, ಬಾಲಿವುಡ್‌ನ ಬಾಬಿ ಡಿಯೋಲ್, ಮಲೈಕಾ ಅರೋರಾ ಖಾನ್ ಮತ್ತು ಕುನಾಲ್ ಕಪೂರ್, ಖ್ಯಾತ ನಿರೂಪಕ ಫಾಯೆ ಡಿಸೋಜಾ, ವಿನ್ಯಾಸಗಾರ ಗೌರವ್ ಗುಪ್ತಾ ಇದ್ದರು. ಕರಣ್ ಜೋಹರ್ ಹಾಗೂ ಆಯುಷ್ಮಾನ್ ಖುರ್ರಾನಾ ನಿರೂಪಕರಾಗಿದ್ದರು.

ಎಲ್ಲ ರಾಜ್ಯ ವಿಜೇತರಿಗೆ ನೇಹಾ ಧೂಪಿಯಾ (ಉತ್ತರ ವಲಯ), ರಕೂಲ್ ಪ್ರೀತ್ ಸಿಂಗ್ (ದಕ್ಷಿಣ), ಪೂಜಾ ಹೆಎಗ್ಡೆ (ಪಶ್ಚಿಮ) ಮತ್ತು ಪೂಜಾ ಛೋಪ್ರಾ (ಪೂರ್ವ) ಮಾರ್ಗದರ್ಶನ ಮಾಡಿದ್ದರು. ಅತ್ಯುತ್ತಮ ಪ್ರತಿಭೆಗಳನ್ನು ಆಯ್ಕೆ ಮಾಡಿ ತರಬೇತಿ ನೀಡುವ ಜತೆಗೆ ಫೈನಲಿಸ್ಟ್‌ಗಳಿಗೆ ಮಾರ್ಗದರ್ಶನ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News