ಯೋಗ ಎಲ್ಲರ ದೈನಂದಿನ ಚಟುವಟಿಕೆಯಾಗಬೇಕು: ಶ್ರೀ ವಚನಾನಂದ ಸ್ವಾಮೀಜಿ

Update: 2018-06-20 17:32 GMT

ದಾವಣಗೆರೆ,ಜೂ.20: ಯೋಗ ಎಲ್ಲರ ದೈನಂದಿನ ಚಟುವಟಿಕೆಯಾಗಬೇಕು. ಯೋಗಾಭ್ಯಾಸವನ್ನು ಪ್ರತಿಯೊಬ್ಬರೂ ತಮ್ಮ ದೈನಂದಿನ ಬದುಕಿನಲ್ಲಿ ಅಳವಡಿಸಿಕೊಂಡಲ್ಲಿ ವ್ಯಕ್ತಿತ್ವಕ್ಕೆ ಶಕ್ತಿ, ಮನಸ್ಸಿಗೆ, ದೇಹಕ್ಕೂ ಹೊಳಪು ಬರುತ್ತದೆ ಎಂದು ಶ್ವಾಸಗುರು, ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ತಿಳಿಸಿದರು. 

ಬುಧವಾರ ನಗರದ ಹೈಸ್ಕೂಲ್ ಮೈದಾನದಲ್ಲಿ 4ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಜಿಪಂ, ಆಯುಷ್ ಇಲಾಖೆ, ತಪೋವನ ಮೆಡಿಕಲ್ ಕಾಲೇಜ್ ಆಫ್ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸಸ್, ಪತಂಜಲಿ ಯೋಗ ಸಮಿತಿ, ಜಿಲ್ಲಾ ಯೋಗ ಒಕ್ಕೂಟ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಯೋಗ ಜಾಥಾದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. 

ನಿರಂತರ ಯೋಗಾಭ್ಯಾಸದಿಂದ ವ್ಯಕ್ತಿತ್ವಕ್ಕೂ ಶಕ್ತಿ ಸಿಗುತ್ತದೆ. ಮುಖದಲ್ಲೂ ತೇಜಸ್ಸು, ಕಾಂತಿ ಮೂಡುತ್ತದೆ. ಯೋಗವು ನಮ್ಮ ಬದುಕಿನ ಉಸಿರಾಗಬೇಕಿದೆ. ನಿತ್ಯವೂ ಸರಿಯಾಗಿ ಉಸಿರಾಡುವ, ವಿವಿಧ ಬಗೆಯ ಯೋಗಾಸನ ಮಾಡುವುದರಿಂದ ನಮ್ಮ ಬಳಿ ಯಾವುದೇ ಕಾಯಿಲೆ ಸುಳಿಯುವುದಿಲ್ಲ ಎಂದರು.

ಒಂದೊಂದು ಬಗೆಯ ಯೋಗಾಸನವೂ ಒಂದೊಂದು ರೋಗ ನಿವಾರಣೆಗೆ ಪೂರಕ. ಯೋಗಾಸನದಲ್ಲೂ ಹಲವಾರು ವಿಧಗಳಿದ್ದು, ಹೊಟ್ಟೆ ನೋವು, ಹೃದಯಾಘಾತ, ಸಕ್ಕರೆ ಕಾಯಿಲೆ, ರಕ್ತದೊತ್ತಡ, ಕೈ-ಕಾಲು ನೋವು, ಜ್ವರ, ಸೀತ, ಕೆಮ್ಮುಗಳಿಂದ ದೂರವಿರಲು, ಆರೋಗ್ಯಕರ ಜೀವನವನ್ನು ನಮ್ಮದಾಗಿಸಿಕೊಳ್ಳುವುದಕ್ಕೆ ಯೋಗಾಸನ ನಮ್ಮ ಬದುಕಿನ ಒಂದು ಭಾಗವಾಗಿ ನಾವು ಪರಿಗಣಿಸಬೇಕಿದೆ ಎಂದು ಸಲಹೆ ನೀಡಿದರು. 

ಪ್ರಸ್ತುತ ದಿನಮಾನಗಳಲ್ಲಿ ದುಶ್ಚಟಗಳಿಗೆ ಬಲಿಯಾಗುವವರ ಸಂಖ್ಯೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಯೋಗಾಸನ ಮಾಡುವುದರಿಂದ ಯಾವುದು ಸರಿ, ಯಾವುದು ತಪ್ಪೆಂಬ ಅರಿವಾಗುತ್ತದೆ. ದುಶ್ಚಟಗಳಿಂದಲೂ ದೂರವಾಗಲು ಯೋಗಭ್ಯಾಸದಿಂದ ಸಾಧ್ಯವಾಗಲಿದೆ. ಗುಟ್ಕಾ, ತಂಬಾಕು, ಬೀಡಿ, ಸಿಗರೇಟು, ಕುಡಿದ ಸೇರಿದಂತೆ ದುಶ್ಚಟ, ದುರಾಭ್ಯಾಸಗಳಿಂದ ದೂರವಿರುವಂತೆ ಯೋಗಾಸನ ಮಾಡುತ್ತದೆ ಎಂದು ವಿವರಿಸಿದರು.

ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಯೋಗ ಬಲ್ಲವರು ಆರೋಗ್ಯವಂತ ಜೀವನ ತಮ್ಮದಾಗಿಸಿಕೊಳ್ಳುತ್ತಾರೆ. ಆರೋಗ್ಯವಂತ ಸಮಾಜ ನಿರ್ಮಾಣಕ್ಕೂ ಕೈಜೋಡಿಸುತ್ತಾರೆ. ಯೋಗ ಮಾಡುವುದರಿಂದ ಯಾವುದೇ ಕಾಯಿಲೆಯೂ ನಮ್ಮ ಬಳಿ ಸುಳಿಯುವುದಿಲ್ಲ. ಪ್ರಾಚೀನ ಋಷಿ, ಮುನಿಗಳಿಂದ ಇಡೀ ಮಾನವ ಕುಲದ ಏಳಿಗೆಗೆ ಬಳುವಳಿಯಾಗಿ ಬಂದ ಯೋಗಕ್ಕೆ ಸಮಾಜ, ದೇಶ, ಜನರನ್ನು ಬದಲಿಸುವ ಅದ್ಭುತ ಶಕ್ತಿ ಇದೆ ಎಂದ ಅವರು, ಪ್ರಧಾನಿ ನರೇಂದ್ರ ಮೋದಿ 3 ದಶಕದಿಂದಲೂ ಯೋಗಾಭ್ಯಾಸವನ್ನು ಬದುಕಿನ ಒಂದು ಭಾಗವನ್ನಾಗಿ ಮಾಡಿಕೊಂಡಿದ್ದಾರೆ. ಯೋಗವನ್ನು ಇಡೀ ವಿಶ್ವಕ್ಕೆ ಪರಿಚಯಿಸಿ, ವಿಶ್ವಾದ್ಯಂತ ಯೋಗ ದಿನ ಆಚರಣೆಯಾಗುವಂತೆ ಮಾಡುವಲ್ಲಿಯೂ ಪ್ರಧಾನಿ ಮೋದಿ ಪಾತ್ರ ಮಹತ್ವದ್ದು ಎಂದರು. 

ರಷ್ಯಾದ ಯೋಗ ಗುರು ಟ್ರುವಿಯನ್, ಶಾಸಕ ಎಸ್.ಎ. ರವೀಂದ್ರನಾಥ, ಮೇಯರ್ ಶೋಭಾ ಪಲ್ಲಾಗಟ್ಟೆ, ಜಿಪಂ ಅಧ್ಯಕ್ಷೆ ಮಂಜುಳಾ ರಾಜು, ಉಪಾಧ್ಯಕ್ಷೆ ಗೀತಾ ಗಂಗಾನಾಯ್ಕ, ಜಿಲ್ಲಾಧಿಕಾರಿ ಡಿ.ಎಸ್. ರಮೇಶ್, ಯೋಗ ಒಕ್ಕೂಟದ ಅಧ್ಯಕ್ಷ ಬಿ.ಸಿ.ಉಮಾಪತಿ, ಪ್ರಧಾನ ಕಾರ್ಯದರ್ಶಿ ವಾಸುದೇವ ರಾಯ್ಕರ್, ಆಯುಷ್ ಅಧಿಕಾರಿ ಡಾ.ಯು.ಸಿದ್ದೇಶ್ ಮತ್ತಿತರರಿದ್ದರು.ಯೋಗ ಎಲ್ಲರ ದೈನಂದಿನ ಚಟುವಟಿಕೆಯಾಗಬೇಕು: ಶ್ರೀ ವಚನಾನಂದ ಸ್ವಾಮೀಜಿ
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News