ಸಹಸ್ರಾರು ಮಂದಿಯ ಜತೆ ಪ್ರಧಾನಿ ಮೋದಿ ಯೋಗ ದಿನಾಚರಣೆ

Update: 2018-06-21 06:18 GMT

ಹೊಸದಿಲ್ಲಿ, ಜೂ. 21: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಗುರುವಾರ ಮುಂಜಾನೆ ಪ್ರಧಾನಿ ನರೇಂದ್ರ ಮೋದಿ ಸಹಸ್ರಾರು ಯೋಗಾಸಕ್ತರ ಜತೆಗೆ ಯೋಗ ನಡೆಸಿದರು.

ಡೆಹ್ರಾಡೂನ್‌ನಲ್ಲಿ ಮೋದಿ ಯೋಗ ಪ್ರದರ್ಶನ ನೀಡಿದರು. ಇದಕ್ಕೂ ಮುನ್ನ ಮೋದಿ ತಮ್ಮ ಭಾಷಣದಲ್ಲಿ ಯೋಗದ ಮಹತ್ವವನ್ನು ವಿವರಿಸಿದರು. ಉತ್ತರಾಖಂಡದ ರಾಜಧಾನಿ ಡೆಹ್ರಾಡೂನ್‌ನ ಅರಣ್ಯ ಸಂಶೋಧನಾ ಸಂಸ್ಥೆಯಲ್ಲಿ ಈ ಕಾರ್ಯಕ್ರಮ ನಡೆಯಿತು. ಉತ್ತಮ ಆರೋಗ್ಯ ಮತ್ತು ಕಲ್ಯಾಣಕ್ಕಾಗಿ ಜಾಗತಿಕ ಮಟ್ಟದಲ್ಲಿ ಯೋಗವನ್ನು ಸ್ವೀಕರಿಸಿರುವುದು ಉತ್ತಮ ಬೆಳವಣಿಗೆ ಎಂದು ಮೋದಿ ಹೇಳಿದರು. ಯೋಗ ವಿಶ್ವಾದ್ಯಂತ ದೊಡ್ಡ ಸಮುದಾಯ ಚಳವಳಿಯಾಗಿ ಬೆಳೆಯುತ್ತಿದೆ ಎಂದು ವಿಶ್ಲೇಷಿಸಿದರು.

ದೇಶದ ಇತರೆಡೆಗಳಲ್ಲೂ ಸಹಸ್ರಾರು ಸಂಘ ಸಂಸ್ಥೆಗಳು, ಸರ್ಕಾರಿ ಕಚೇರಿಗಳು, ಸೇನಾ ನೆಲೆ ಆಶ್ರಯದಲ್ಲಿ ಕೂಡಾ ಯೋಗ ಕಾರ್ಯಕ್ರಮ ನಡೆಯಿತು.
ಈಸ್ಟರ್ನ್ ನೇವಲ್ ಕಮಾಂಡ್ ಸಿಬ್ಬಂದಿ ಹಡಗಿನಲ್ಲೇ ಯೋಗ ಮಾಡುವ ಮೂಲಕ ಗಮನ ಸೆಳೆದರು. ಬಂಗಾಳಕೊಲ್ಲಿಯ ವಿಶಾಖಪಟ್ಟಣಂ ತೀರದಲ್ಲಿ ಐಎನ್‌ಎಸ್ ಜ್ಯೋತಿ ಹಡಗಿನಲ್ಲಿ ಈ ಯೋಗ ಪ್ರದರ್ಶನ ನಡೆಯಿತು. ಪೂರ್ವ ನೌಕಾ ಕಮಾಂಡ್‌ನ ಸಬ್‌ಮೆರಿನ್ ಸಿಬ್ಬಂದಿ ಇದರಲ್ಲಿ ಪಾಲ್ಗೊಂಡಿದ್ದರು.
ಬಾಬಾ ರಾಮ್‌ದೇವ್, ಆಚಾರ್ಯ ಬಾಲಕೃಷ್ಣ ಹಾಗೂ ರಾಜಸ್ಥಾನ ಮುಖ್ಯಮಂತ್ರಿ ವಸುಂಧರರಾಜೇ ಅವರು ಕೋಟಾದಲ್ಲಿ ಯೋಗಾಸನ ಪ್ರದರ್ಶನ ನೀಡಿದರು.

ಕೊಚ್ಚಿನ್‌ನಲ್ಲಿ ನೌಕಾಪಡೆ ಸಿಬ್ಬಂದಿ ಕೂಡಾ ಐಎನ್‌ಎಸ್ ಜಮುನಾ ಹಡಗಿನಲ್ಲೇ ಯೋಗ ನಡೆಸಿದರು. ಪೂರ್ವ ನೆಲೆಯ ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ವೈಸ್ ಅಡ್ಮಿರಲ್ ಕರ್ಮವೀರ್ ಸಿಂಗ್ ಅವರು ವಿಶಾಖಪಟ್ಟಣದಲ್ಲಿ ನಡೆದ ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಮಹಾರಾಷ್ಟ್ರ ರಾಜ್ಯಪಾಲ ಸಿ.ವಿದ್ಯಾಸಾಗರ ರಾವ್ ರಾಜಭವನದಲ್ಲಿ ಯೋಗ ನಡೆಸಿದರು. ಚೆನ್ನೈನ ಮೈಲಾಪುರ ಪಾರ್ಕ್‌ನಲ್ಲಿ ಕರ್ನಾಟಕ ಸಂಗೀತ ಕಲಾವಿದೆ ಸುಧಾ ರಘುನಾಥನ್ ಯೋಗ ಪ್ರದರ್ಶನ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News