27 ಕೋಟಿ ರೂ. ಮೌಲ್ಯದ ಮಾದಕವಸ್ತುಗಳ ಜೊತೆ ಬಿಜೆಪಿ ನಾಯಕನ ಬಂಧನ

Update: 2018-06-21 16:35 GMT

ಇಂಪಾಲ, ಜೂ.21: 27 ಕೋಟಿ ರೂ. ಮೌಲ್ಯದ ಮಾದಕದ್ರವ್ಯಗಳನ್ನು ವಶಪಡಿಸಿಕೊಂಡಿರುವ ಮಾದಕದ್ರವ್ಯ ಹಾಗೂ ಗಡಿ ವ್ಯವಹಾರ (ಎನ್‌ಎಬಿ) ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಹಾಗೂ ಚಂದೇಲ್ ಜಿಲ್ಲೆಯ ಸ್ವಾಯತ್ತ ಜಿಲ್ಲಾ ಕೌನ್ಸಿಲ್‌ನ ಮುಖ್ಯಸ್ಥ ಲುತ್ಕೋಝಿ ಝೂ ಸೇರಿದಂತೆ ಏಳು ಮಂದಿಯನ್ನು ಬಂಧಿಸಿದ್ದಾರೆ.

ವಶಪಡಿಸಿಕೊಂಡ ಮಾದಕದ್ರವ್ಯಗಳಲ್ಲಿ 4.595 ಕೆ.ಜಿ ಹೆರೋಯಿನ್, 28 ಕೆ.ಜಿ ವರ್ಲ್ಡ್ ಇಸ್ ಯುವರ್ಸ್ (ಡಬ್ಲೂವೈ) ಮಾತ್ರೆಗಳು ಹಾಗೂ 95,000 ರೂ. ಅಮಾನ್ಯಗೊಂಡ ನೋಟುಗಳು ಮತ್ತು 57.18 ಲಕ್ಷ ನಗದು ಸೇರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಧಿಕಾರಿಗಳು ಒಂದು 0.32 ಎನ್‌ಪಿಬಿ ಪಿಸ್ತೂಲ್, 21 ಗುಂಡುಗಳು, ಒಂದು ಎಸ್‌ಬಿಬಿಎಲ್ ರೈಫಲ್, ಎರಡು ಗನ್ ಪರವಾನಿಗೆ ಪುಸ್ತಕಗಳು ಹಾಗೂ ಎಂಟು ಬ್ಯಾಂಕ್ ಪಾಸ್‌ಪುಸ್ತಕಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಇತರ ಆರೋಪಿಗಳನ್ನು ಎಸ್ತರ್ ವಂಗೆನಾಮ್, ಮುಂಗ್ ಝೂ ಅರಿಕ್, ತೆರೆಸ ಗೈಟೆ ನೆಂಗ್ಬೊಯಿ, ಲಾರೆನ್ಸ್ ಝೂ, ಮಿನ್ಲಾಲ್ ಮಟೆ, ಸಿಯೊ ಜಮ್ತಂಗ್ ಮಟೆ ಹಾಗೂ ಜಮ್ಕಾಹವೊ ಎಂದು ಗುರುತಿಸಲಾಗಿದೆ. 2017ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಜಯಗಳಿಸಿದ್ದ ಲುತ್ಕೋಝಿ ನಂತರ ಚಂದೇಲ್‌ನಲ್ಲಿ ಕೌನ್ಸಿಲ್ ರಚಿಸುವ ಸಂದರ್ಭ ಬಿಜೆಪಿ ಸೇರಿದ್ದರು. ತಂಗ್ಮಿನ್ಲುನ್ ಝೂ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸುವ ವೇಳೆ ಆತ ಲಂಗೋಲ್ ಗೇಮ್ ಗ್ರಾಮದಲ್ಲಿರುವ ತನ್ನ ನಿವಾಸದಲ್ಲಿ ಎರಡು ಸೂಟ್‌ಕೇಸ್‌ಗಳಲ್ಲಿ ಮಾದಕದ್ರವ್ಯಗಳನ್ನು ಅಡಗಿಸಿಟ್ಟಿರುವ ಬಗ್ಗೆ ಬಾಯ್ಬಿಟ್ಟಿದ್ದ.

ಪೊಲೀಸರು ಆತನ ಮನೆಗೆ ತೆರಳಿ ತಪಾಸಣೆ ನಡೆಸಿದಾಗ ಸೂಟ್‌ಕೇಸ್‌ಗಳ ಒಳಗೆ ಅಪಾರ ಪ್ರಮಾಣದಲ್ಲಿ ಹೆರೋಯಿನ್, ಡಬ್ಲೂವೈ ಮಾತ್ರೆಗಳು ಪತ್ತೆಯಾಗಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News