ಮ್ಯಾಗಝಿನ್ ಮುಖಪುಟದಲ್ಲಿ ಮಗುವಿಗೆ ಎದೆಹಾಲುಣಿಸುವ ಚಿತ್ರ ವಿವಾದ: ಕೇರಳ ಹೈಕೋರ್ಟ್ ಪ್ರತಿಕ್ರಿಯಿಸಿದ್ದು ಹೀಗೆ

Update: 2018-06-21 10:23 GMT

ತಿರುವನಂತಪುರಂ, ಜೂ.21: ರೂಪದರ್ಶಿಯೊಬ್ಬರು ಮಗುವಿಗೆ ಹಾಲುಣಿಸುವ ಚಿತ್ರವನ್ನು ತನ್ನ ಮುಖಪುಟದಲ್ಲಿ ಪ್ರಕಟಿಸಿದ 'ಮಾತೃಭೂಮಿ ಗೃಹಲಕ್ಷ್ಮಿ' ಮ್ಯಾಗಝಿನ್ ಗೆ ಸಂಬಂಧಿಸಿದ ಪ್ರಕರಣದಲ್ಲಿ ಪ್ರತಿಕ್ರಿಯಿಸಿರುವ ಕೇರಳ ಹೈಕೋರ್ಟ್, ಈ ಚಿತ್ರವನ್ನು ಅಶ್ಲೀಲ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿ ಫೆಲಿಕ್ಸ್ ಎಂ.ಎ. ಎಂಬವರು ದಾಖಲಿಸಿದ್ದ ಅರ್ಜಿಯನ್ನು ತಳ್ಳಿ ಹಾಕಿದೆ.

"ನಾವು  ನಮ್ಮ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ ಚಿತ್ರದಲ್ಲಿ ಅಶ್ಲೀಲತೆಯನ್ನು ಕಂಡಿಲ್ಲ ಹಾಗೂ ಅದಕ್ಕೆ ನೀಡಲಾದ ಶೀರ್ಷಿಕೆಯಲ್ಲಿ ಏನಾದರೂ ಆಕ್ಷೇಪಾರ್ಹವಾದುದನ್ನು ನೋಡಿಲ್ಲ. ರಾಜಾ ರವಿವರ್ಮನಂತಹ ಕಲಾವಿದರ ಚಿತ್ರಗಳನ್ನು ನೋಡುವ ದೃಷ್ಟಿಯಲ್ಲಿಯೇ ಈ ಚಿತ್ರವನ್ನೂ ನೋಡಿದ್ದೇವೆ.  ಸೌಂದರ್ಯ ನೋಡುವವನ ಕಣ್ಣಲ್ಲಿದೆ, ಹಾಗೆಯೇ ಅಶ್ಲೀಲತೆ ಕೂಡ'' ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.

"ಚಿತ್ರವು ಯಾವುದೇ ವಿಧದಲ್ಲಿ ಅಶ್ಲೀಲವಲ್ಲ ಅಥವಾ ಅಶ್ಲೀಲತೆಯನ್ನು ಬಿಂಬಿಸುವುದಿಲ್ಲ, ಇದೇ ಕಾರಣಕ್ಕಾಗಿ ಅರ್ಜಿಯನ್ನು ವಜಾಗೊಳಿಸಲಾಗಿದೆ'' ಎಂದು ನ್ಯಾಯಾಲಯ ಹೇಳಿದೆ.

ಅರ್ಜಿದಾರ ಫೆಲಿಕ್ಸ್ ತಮ್ಮ ಅಪೀಲಿನಲ್ಲಿ ಈ  ಚಿತ್ರವು ಪೋಕ್ಸೋ ಕಾಯ್ದೆಯ  ಹಾಗೂ ಬಾಲಾಪರಾಧ ಕಾಯ್ದೆಯ ಸೆಕ್ಷನ್ 45ರ ಉಲ್ಲಂಘನೆಯಾಗಿದೆ ಹಾಗೂ ಮಹಿಳೆಯರನ್ನು ಅಶ್ಲೀಲವಾಗಿ ಬಿಂಬಿಸುವುದನ್ನು ನಿಷೇಧಿಸುವ ಕಾಯ್ದೆಯ 1986 ಇದರ ಉಲ್ಲಂಘನೆಯಾಗಿದೆ ಎಂದು ವಾದಿಸಿದ್ದರು. ಅವಿವಾಹಿತ ಜಿಲು ಜೋಸೆಫ್ ಎಂಬ ರೂಪದರ್ಶಿಯನ್ನು ತಾಯಿಯಂತೆ ಬಿಂಬಿಸಿ ಈ ಚಿತ್ರ ತೆಗೆದಿರುವುದರಿಂದ ಮಗುವಿನ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ.ತಾಯ್ತನ ಹಾಗೂ ಸ್ತನ್ಯಪಾನವನ್ನು ವಾಣಿಜ್ಯೀಕರಣಗೊಳಿಸುವ ಮೂಲಕ ನವಜಾತ ಶಿಶುಗಳ ಹಕ್ಕುಗಳಿಗೆ ಅಪಾಯವೊಡ್ಡಲಾಗಿದೆ ಎಂದೂ ದೂರುದಾರ ತನ್ನ ಅಪೀಲಿನಲ್ಲಿ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News