ಕಡೂರು: ಹೈವೇ ಶಾಲೆಯಲ್ಲಿ ವಿಶ್ವಯೋಗ ದಿನಾಚರಣೆ

Update: 2018-06-21 11:54 GMT

ಕಡೂರು, ಜೂ.21: ಯೋಗವು ದೇಶದ ಸನಾತನ ಸಂಸ್ಕೃತಿಯಾಗಿದ್ದು, ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಯೋಗದಿಂದ ಆರೋಗ್ಯ ಹೊಂದಲು ಸಹಕಾರಿಯಾಗಲಿದೆ ಎಂದು ಲೇಖಕ ಹಾಗೂ ಹೈವೆ ಶಾಲೆಯ ಪ್ರಾಂಶುಪಾಲ ಯೋಗೀಶ್ ಸಹ್ಯಾದ್ರಿ ತಿಳಿಸಿದರು.

ನಗರದ ಹೈವೆ ಶಾಲೆಯಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಂದು ಯೋಗಾಸನಗಳಲ್ಲೂ ಭಾರತೀಯ ಪರಂಪರೆ, ಶಿಸ್ತು, ದೇಹವನ್ನು ದಂಡಿಸುವ ಕ್ರಮ ಕಾಣಬಹುದಾಗಿದೆ. ಯೋಗದಿಂದ ಮನಸ್ಸನ್ನು ನಿಯಂತ್ರಿಸುವುದರ ಜೊತೆಗೆ ಉತ್ತಮ ಆರೋಗ್ಯವನ್ನು ಪಡೆಯಬಹುದು. ಇಂದಿನ ಫಾಸ್ಟ್ ಪುಡ್ ಸಂಸ್ಕೃತಿಯಲ್ಲಿ ವಿದ್ಯಾರ್ಥಿಗಳು ಭಾರತೀಯ ಪರಂಪರೆಯಿಂದ ದೂರ ಸರಿಯುತ್ತಿದ್ದಾರೆ. ಅಲ್ಲದೇ ಸಾಮಾಜಿಕ ಜಾಲತಾಣಗಳ ಮೊರೆ ಹೋಗುತ್ತಿರುವುದು ವಿಷಾದನೀಯ ಸಂಗತಿ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಡೂರು ಅಕಾಡೆಮಿ ಆಫ್ ಎಜುಕೇಷನ್ ಸಂಸ್ಥೆಯ ಅಧ್ಯಕ್ಷ ಶಿವಕುಮಾರ್.ಬಿ. ಯೋಗ ಕಲೆಯ ಪಿತಾಮಹ ಪತಂಜಲಿ ಮಹರ್ಷಿ ಇಡೀ ಜಗತ್ತಿಗೆ ಯೋಗವನ್ನು ಪರಿಚಯಿಸಿದ್ದು, ಇದು ಭಾರತೀಯರಿಗೆ ಹೆಮ್ಮೆ ತರುವ ವಿಷಯವಾಗಿದೆ. ವಿದ್ಯಾರ್ಥಿಗಳು ಇನ್ನೂ ಹೆಚ್ಚಿನ ರೀತಿಯಲ್ಲಿ ಯೋಗ ಕಲೆಯನ್ನು ಕಲಿತು ದೇಶದ ಹಿರಿಮೆಯನ್ನು ಹೆಚ್ಚಿಸಬೇಕು. ಪೋಷಕರು ಹಾಗೂ ಶಿಕ್ಷಕರು ಮಕ್ಕಳಲ್ಲಿ ನೈತಿಕ ಮೌಲ್ಯಗಳ ಜೊತೆಗೆ ಬೌದ್ಧಿಕ ಚಿಂತನೆಗಳನ್ನು ಕಲಿಸಬೇಕಾಗಿರುವುದು ಅತ್ಯಂತ ಅವಶ್ಯಕವಾಗಿದೆ ಎಂದು ಹೇಳಿದರು.

ಸಂಸ್ಥೆಯ ಖಜಾಂಚಿ ಜಿ.ರಂಗರಾವ್ ಮಾತಾನಾಡಿ ಸುಮಾರು ಏಳು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಪೋಷಕರು ಶಿಕ್ಷಕರೊಳಗೂಡಿ ಏಕಕಾಲದಲ್ಲಿ ಯೋಗಾಸನಗಳನ್ನು ಮಾಡುತ್ತಿರುವುದು ಅತ್ಯಂತ ಪ್ರಶಂಸನೀಯ ಎಂದು ಅಭಿನಂದಿಸಿದರು. ದೈಹಿಕ ಶಿಕ್ಷಕ ಮಂಜುನಾಥ್ ಕುಪ್ಪಾಳು ಅತ್ಯಂತ ಕ್ಲಿಷ್ಟಕರವಾದ ಕ್ರಿಯಾಸನಗಳನ್ನು ಪ್ರದರ್ಶಿಸಿದರು. ವಿದ್ಯಾರ್ಥಿಗಳಾದ ಬಿ.ಜಿ ಅನನ್ಯ, ಕೃಪ. ಎಸ್.ಪಿ, ಸುಕೃತ್, ಚಂದನ.ವಿ.ಎಸ್, ಸಾಕ್ಷಿ.ಕೆ, ಅನುಶ್ರೀ. ಕೆಲವು ಯೋಗಾಸನಗಳನ್ನು ಪ್ರದರ್ಶಿಸಿದರು.

ಕನ್ನಡ ಶಿಕ್ಷಕ ಮಂಜುನಾಥ್.ಕೆ. ಕಾರ್ಯಕ್ರಮ ನಿರೂಪಿಸಿದರು, ಪನ್ನಾರೊಜಿ ಸ್ವಾಗತಿಸಿದರು. ಮಧುರ ಪದಕಿ ಪ್ರಾರ್ಥಿಸಿದಳು. ಪೋಷಕರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News