ಮಾನಸಿಕ ಸಮತೋಲನಕ್ಕೆ ಯೋಗಾಭ್ಯಾಸ ಅಗತ್ಯ: ಶಾಸಕ ಜ್ಯೋತಿ ಗಣೇಶ್

Update: 2018-06-21 12:13 GMT

ತುಮಕೂರು, ಜೂ.21: ಒತ್ತಡಯುಕ್ತ ಜೀವನದಿಂದ ಮುಕ್ತಿ ಹೊಂದಿ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಸಮತೋಲನ ಕಾಪಾಡಲು ನಿರಂತರ ಯೋಗಾಭ್ಯಾಸ ಮಾಡುವುದು ಅತ್ಯಗತ್ಯ ಎಂದು ಶಾಸಕ ಜ್ಯೋತಿ ಗಣೇಶ್ ಸಲಹೆ ನೀಡಿದ್ದಾರೆ. 

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ, ನೆಹರು ಯುವ ಕೇಂದ್ರ, ಎನ್‍ಸಿಸಿ, ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾನಿಲಯ, ಪತಂಜಲಿ ಯೋಗ ಶಿಕ್ಷಣ ಸಂಸ್ಥೆ ಹಾಗೂ ಮತ್ತಿತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಗುರುವಾರ ಬೆಳಗ್ಗೆ ಆಯೋಜಿಸಿದ್ದ 4ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡುತಿದ್ದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಶಯದಂತೆ ವಿಶ್ವದಾದ್ಯಂತ ಇಂದು ಯೋಗ ದಿನವನ್ನು ಆಚರಿಸಲಾಗುತ್ತಿದೆ. 'ಜೀವನವಾದರೆ ಯೋಗಯುಕ್ತ-ಭಾರತವಾಗುವುದು ರೋಗ ಮುಕ್ತ' ಎನ್ನುವ ಮೂಲ ಮಂತ್ರವನ್ನು ನಾವು ಅಳವಡಿಸಿಕೊಳ್ಳಬೇಕು. ವಯಸ್ಕರು, ರೋಗಿಗಳು ಮಾತ್ರವಲ್ಲದೆ ಶಾಲಾ ಮಕ್ಕಳು, ವಯೋವೃದ್ಧರು ಯೋಗವನ್ನು ನಿಯಮಿತವಾಗಿ ಅಭ್ಯಾಸ ಮಾಡುವುದರಿಂದ ಉತ್ತಮ ಆರೋಗ್ಯ ಹೊಂದಬಹುದು ಎಂದು ತಿಳಿಸಿದರು. 

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾತನಾಡಿ, ಯೋಗಾಭ್ಯಾಸದಿಂದ ಇಂದ್ರಿಯಗಳನ್ನು ಹತೋಟಿಯಲ್ಲಿಡಬಹುದಲ್ಲದೆ, ದೇಹಕ್ಕೆ ನವ ಚೈತನ್ಯ ದೊರೆಯುತ್ತದೆ. ಮಳೆಗಾಲವಾಗಿದ್ದರಿಂದ ಯೋಗ ದಿನಾಚರಣೆಗೆ ಮಳೆ ಅಡ್ಡಿಯಾಗಬಹುದೆಂಬ ಆತಂಕ ಮೂಡಿತ್ತು. ಆದರೆ ದೈವ ಕೃಪೆಯಿಂದ ಮಳೆ ಬಾರದೆ ಯೋಗ ದಿನಾಚರಣೆ ಯಶಸ್ವಿಯಾಯಿತು ಎಂದು ತಿಳಿಸಿದರು.

ಇದಕ್ಕೂ ಮುನ್ನ ಯೋಗಾಳುಗಳಿಗೆ ಯೋಗ ಶಿಕ್ಷಣ ನೀಡಿದ ಪತಂಜಲಿ ಯೋಗ ಶಿಕ್ಷಣ ಸಂಸ್ಥೆಯ ತ್ಯಾಗರಾಜ್ ಅವರು, ಹಸ್ತ, ಪಾದ, ಸೊಂಟ, ಬೆನ್ನು, ಕಣ್ಣು, ಭುಜ, ತಲೆ, ಮಂಡಿ ಮತ್ತಿತರ ದೇಹದ ಭಾಗಗಳು ಚುರುಕಾಗುವಂತೆ ಹಲವಾರು ಭಂಗಿಯ ಆಸನಗಳ ಅಭ್ಯಾಸ ಮಾಡುವ ವಿಧಾನವನ್ನು ತಿಳಿಸಿದರು.  ಶಿಸ್ತುಬದ್ಧವಾಗಿ ಉಸಿರಾಡುತ್ತಾ, ದೈಹಿಕ ಸಮತೋಲನವನ್ನು ಕಾಪಾಡಿಕೊಳ್ಳುವುದೇ ಯೋಗ ಎಂದು ತಿಳಿಸಿದರು. 

ಯೋಗಾಭ್ಯಾಸದ ನಂತರ ದೇಹ ಪುನಶ್ಚೇತನಗೊಳ್ಳವುದನ್ನು ಯೋಗಾಳುಗಳು ಗಮನಿಸಬಹುದು ಎಂದು ತಿಳಿಸಿದರಲ್ಲದೆ ರಕ್ತದೊತ್ತಡ ನಿಯಂತ್ರಣಕ್ಕಾಗಿ ಕಪಾಲಭಾತಿ, ನಿದ್ರಾಹೀನತೆಗಾಗಿ ಭ್ರಾಮರಿ, ನಾಡಿಮಿಡಿತದ ಸಹಜ ಸ್ಥಿತಿಗಾಗಿ ನಾಡಿಶೋಧ ಪ್ರಾಣಾಯಾಮಗಳನ್ನು ಅಭ್ಯಾಸ ಮಾಡಬೇಕೆಂದು ಸಲಹೆ ನೀಡಿದರು. 

ಧ್ಯಾನದ ಅಭ್ಯಾಸ ವಿಧಾನವನ್ನು ತಿಳಿಸಿದ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾನಿಲಯದ ಸುಜಾತಕ್ಕ, ಧ್ಯಾನದಿಂದ ಆಧ್ಯಾತ್ಮಿಕ ಆರೋಗ್ಯ ವೃದ್ಧಿಯಾಗುವುದಲ್ಲದೆ ಆಂತರಿಕ ಬಲ ಹೆಚ್ಚಾಗುವುದು ಎಂದು ಹೇಳಿದರು. 

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ, ತುಮಕೂರು ಬೆಟಾಲಿಯನ್ ಕಮಾಂಡರ್ ಕರ್ನಲ್ ಯೋಗೀಂದ್ರ ಪರ್ಮರ್, ಡಿಹೆಚ್‍ಓ ಡಾ.ರಂಗಸ್ವಾಮಿ, ಜಿಲ್ಲಾ ಸರ್ಜನ್ ಡಾ.ವೀರಭದ್ರಯ್ಯ, ಡಾ.ಪ್ರಭಾಕರ್, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಜಯಲಕ್ಷ್ಮಿ ಇನ್ನಿತರರು ಉಪಸ್ಥಿತರಿದ್ದರು. 

ಬೆಳ್ಳಗ್ಗೆ 6 ಗಂಟೆಯಿಂದ ನಡೆದ ಯೋಗಾಭ್ಯಾಸದಲ್ಲಿ ಸುಮಾರು 800 ಎನ್‍ಸಿಸಿ ಕೆಡೆಟ್, ಆಯುಷ್ ಕಾಲೇಜಿನ ವಿದ್ಯಾರ್ಥಿಗಳು, ಬ್ರಹ್ಮಕುಮಾರಿ ಸಮಾಜದ ಸದಸ್ಯರು, ಪತಂಜಲಿ ಸಂಸ್ಥೆಯ ಸದಸ್ಯರು ಸೇರಿದಂತೆ ಸಾರ್ವಜನಿಕರು ಪಾಲ್ಗೊಂಡು ಯೋಗಾಭ್ಯಾಸ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News