ಮಿನಿ ವಿಮಾನ ನಿಲ್ದಾಣ ಕಾಮಗಾರಿಗೆ 70 ಎಕರೆ ಜಮೀನು ಮಂಜೂರು: ಚಿಕ್ಕಮಗಳೂರು ಡಿಸಿ ಶ್ರೀರಂಗಯ್ಯ

Update: 2018-06-21 14:55 GMT

ಚಿಕ್ಕಮಗಳೂರು, ಜೂ.21: ನಗರದ ಹೊರ ವಲಯದಲ್ಲಿರುವ ಗೌಡನಹಳ್ಳಿ ಗ್ರಾಮದ ಸಮೀಪದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮಿನಿ ವಿಮಾನ ನಿಲ್ದಾಣಕ್ಕೆ 100 ಎಕರೆ ಜಾಗಕ್ಕೆ ನಾಗರಿಕ ವಿಮಾನಯಾನ ಸಚಿವಾಲಯ ಬೇಡಿಕೆ ಇಟ್ಟಿದೆ. ಈ ಪೈಕಿ 70 ಎಕರೆ ಜಾಗವನ್ನು ವಿಮಾನ ನಿಲ್ದಾಣಕ್ಕೆ ಮಂಜೂರು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಶ್ರೀರಂಗಯ್ಯ ತಿಳಿಸಿದರು.

ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಂಭಾಂಗಣದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಂಸದರು ವಿಮಾನ ನಿಲ್ದಾಣ ಕಾಮಗಾರಿ ಸಂಬಂಧ ಆಗಿರುವ ಪ್ರಗತಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 100  ಎಕರೆ ಜಮೀನಿನ ಪೈಕಿ 20 ಎಕರೆ ಜಾಗದಲ್ಲಿ ಗೋಮಾಳವಿದ್ದು, ಅದನ್ನು ಶೀಘ್ರ ಮಂಜೂರು ಮಾಡಲಾಗುವುದು. 10 ಎಕರೆ ಜಾಗ ಅರಣ್ಯ ಇಲಾಖೆ ವ್ಯಾಪ್ತಿಗೊಳಪಟ್ಟಿದೆ ಎಂದು ಹೇಳಲಾಗುತ್ತಿದೆ. ಈ ಜಮೀನು ಅರಣ್ಯ ಇಲಾಖೆ ಸೇರಿದೆಯೋ, ಇಲ್ಲವೋ ಎಂಬುದನ್ನು ಪರಿಶೀಲಿಸಿ ಅಗತ್ಯ ಕ್ರಮವಹಿಸುತ್ತೇನೆಂದರು.

ವಿಮಾನ ನಿಲ್ದಾಣದಲ್ಲಿ 925 ಮೀಟರ್ ಉದ್ದರ ರನ್‍ವೇ ನಿರ್ಮಿಸಲು ಉದ್ದೇಶಿಸಲಾಗಿತ್ತು. ಆದರೆ ಅದನ್ನು ಇನ್ನೂ 475 ಮೀಟರ್‍ಗೆ ವಿಸ್ತರಿಸುವಂತೆ ಬೇಡಿಕೆ ಬಂದಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದಾಗ ಪ್ರತಿಕ್ರಿಯಿಸಿದ ಸಂಸದೆ ಶೋಭಾ ಕರಂದ್ಲಾಜೆ, ರನ್‍ವೇ ಉದ್ದ ವಿಸ್ತರಿಸಬೇಕಿದ್ದಲ್ಲಿ ಕೇಂದ್ರ ಸರಕಾರಕ್ಕೆ ಪ್ರಸ್ತಾವ ಕಳುಹಿಸಬೇಕು. ಶೀಘ್ರ ಕಳುಹಿಸಿದಲ್ಲಿ ತಾನು ಕೇಂದ್ರದ ಸಚಿವರೊಂದಿಗೆ ಚರ್ಚಿಸುತ್ತೇನೆಂದ ಅವರು, ಮಿನಿ ವಿಮಾನ ನಿಲ್ದಾಣ ಕಾಮಗಾರಿಗಳನ್ನು ಶೀಘ್ರದಲ್ಲಿ ಪ್ರಾರಂಭಿಸಲಾಗುವುದು. ಕಾಮಗಾರಿಗೆ ಅಗತ್ಯವಿರುವ ಹೆಚ್ಚುವರಿ ಖಾಸಗಿ ಹಾಗೂ ಸರಕಾರಿ ಭೂಮಿಯನ್ನು ಆದಷ್ಟು ಬೇಗ ಸ್ವಾಧೀನಪಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.

ವಿಮಾನ ನಿಲ್ದಾಣ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ, ಈ ಯೋಜನೆಗೆ 109 ಎಕರೆ ಭೂಮಿ ಲಭ್ಯವಿದ್ದು 20 ಪ್ರಯಾಣಿಕರ ಸಾಮರ್ಥ್ಯದ ವಿಮಾನಗಳ ನಿಲುಗಡೆಗೆ ಅವಕಾಶವಿದೆ. ಅದನ್ನು 60 ರಿಂದ 90 ಆಸನಗಳ ಸಾಮರ್ಥ್ಯದ ವಿಮಾನಗಳ ನಿಲುಗಡೆಗೆ ಹೆಚ್ಚಿಸಲು 41 ಎಕರೆ ಜಮೀನಿನ ಅವಶ್ಯಕತೆ ಇದೆ ಎಂದರು.

ಸಭೆಯಲ್ಲಿ ಉಪಸ್ಥಿತರಿದ್ದ ವಿಮಾಣ ನಿಲ್ದಾಣ ಕಾಮಗಾರಿಯ ಅಭಿಯಂತರ ಮಾತನಾಡಿ, ರಾಜ್ಯಲ್ಲಿ ಮಡಿಕೇರಿ, ಕಾರವಾರ ಹಾಗೂ ಚಿಕ್ಕಮಗಳೂರು ನಗರಗಳಲ್ಲಿ ಮಿನಿ ವಿಮಾನ ನಿಲ್ದಾಣ ಸ್ಥಾಪನೆಗೆ ಬೇಡಿಕೆ ಇತ್ತು. ಆದರೆ ಕೇಂದ್ರದ ನಾಗರಿಕ ವಿಮಾನಯಾನ ಸಚಿವಾಲಯ ಚಿಕ್ಕಮಗಳೂರಿನಲ್ಲಿ ಪ್ರಥಮ ಆಧ್ಯತೆ ನೀಡಿ ವಿಮಾನ ನಿಲ್ದಾಣ ನಿರ್ಮಿಸಲು ಒಪ್ಪಿಗೆ ನೀಡಿದೆ. 925 ಮೀಟರ್ ರನ್ ವೇ ನಿಲ್ದಾಣದಲ್ಲಿ 9-25 ಸೀಟುಗಳ ವಿಮಾನಗಳ ಹಾರಾಟ ಸಾಧ್ಯವಾಗಲಿದೆ. ಉದ್ದ ವಿಸ್ತರಣೆ ಮಾಡಿದಲ್ಲಿ 40 ಸೀಟುಗಳ ವಿಮಾನಗಳ ಹಾರಾಟ ನಡೆಯಲಿದೆ. ಈ ಯೋಜನೆಯನ್ನು ಸಾರ್ವಜನಿಕರ ಸಹಭಾಗಿತ್ವದಲ್ಲಿ ಜಾರಿ ಮಾಡಲು ತೀರ್ಮಾನಿಸಲಾಗಿದ್ದು, ಬಾಕಿ ಜಾಗ ಮಂಜೂರು ಪ್ರಕ್ರಿಯೆ ಮುಗಿದ ಕೂಡಲೇ  ಕಾಮಗಾರಿ ಆರಂಭವಾಗಲಿದೆ.  ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಪೂರಕವಾಗಿರುವ ಹಿನ್ನೆಲೆಯಲ್ಲಿ ಅನೇಕ ಕಂಪೆನಿಗಳು ಕಾಮಗಾರಿಗಳನ್ನು ಕೈಗೊಳ್ಳಲು ಮುಂದಾಗಿದ್ದಾರೆ. ನಿಲ್ದಾಣದ ಕಾಮಗಾರಿಯ ಜೊತೆಯಲ್ಲಿ ಹೋಂಸ್ಟೇಗಳು, ಏರ್ ಆಂಬುಲೆನ್ಸ್, ಗಾಲ್ಫ್ ಕೋರ್ಟ್, ವಿಮಾನ ತರಬೇತಿ ಕೇಂದ್ರ, ಏರ್ ಮ್ಯೂಸಿಯಮ್‍ಗಳನ್ನು ಕೈಗೊಳ್ಳಲಾಗುವುದು ಎಂದರು. 

ಅಮೃತ್ ಯೋಜನೆಯಡಿಯಲ್ಲಿ ನಗರದ ನಿವಾಸಿಗಳಿಗೆ 24 ಗಂಟೆ ಕುಡಿಯುವ ನೀರನ್ನು ಒದಗಿಸುವ ಕಾಮಗಾರಿಯನ್ನು ಕೈಗೊಳ್ಳಲಾಗಿದೆ ಆದರೆ ಅದು ನಿಗಧಿತ ಸಮಯದೊಳಗೆ ಪೂರ್ಣಗೊಳಿಸಲು ಅಧಿಕಾರಿಗಳು ಮುಂದಾಗಬೇಕು. ನಗರದಲ್ಲಿ ಒಳಚರಂಡಿ ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗಿದೆ ಇದನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ರಾಜ್ಯಮಟ್ಟದ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಜೊತೆ ಸಭೆ ನಡೆಸಬೇಕೆಂದು ಜಿಲ್ಲಾಧಿಕಾರಿಗೆ ಸೂಚಿಸಿದರು.

ಲೋಕಸಭಾ ಸದಸ್ಯರ ಅನುದಾನಡಿಯಲ್ಲಿ 7.5ಕೋಟಿ ಅನುದಾನ ನೀಡಲಾಗಿದ್ದು, ಈಗಾಗಲೇ 2.5 ಕೋಟಿ ಬಳಕೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಬಾಕಿ ಉಳಿದ 4.95 ಕೋಟಿ ಬಳಕೆಯ ಬಗ್ಗೆ ಯು.ಸಿ. ನೀಡಬೇಕಿದೆ, ಕಾಮಗಾರಿಗಳು ನಿಧಾನಗತಿಯಲ್ಲಿ ಕೈಗೊಂಡಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು ತ್ವರಿತವಾಗಿ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು. ಮೂಡಿಗೆರೆ ವ್ಯಾಪ್ತಿಯಲ್ಲಿ ಸಂಸದರ ನಿಧಿಯಡಿಯಲ್ಲಿ ಸಾಕಷ್ಟು ಸಮುದಾಯ ಭವನಗಳ ಕಾಮಗಾರಿ ಪೂರ್ಣಗೊಳ್ಳದ ಬಗ್ಗೆ ಅಸಮಾದಾನ ವ್ಯಕ್ತಪಡಿಸಿದರು. ಶೀಘ್ರ ಕಾಮಗಾರಿ ಪೂರ್ಣಗೊಳಿಸಿ ಯುಸಿ ನೀಡಲು ಕ್ರಮಕೈಗೊಳ್ಳುವಂತೆ ಸಂಬಂಧಿಸಿದ ಇಂಜಿನಿಯರ್ ಹಾಗೂ ಜಿಲ್ಲಾಧಿಕಾರಿಗೆ ಸೂಚಿಸಿದ ಅವರು, ಪ್ರಗತಿ ಪರಿಶೀಲನಾ ಸಭೆಗಳು ಕೇವಲ ಕಾಟಾಚಾರಕ್ಕೆ ನಡೆಯುತ್ತಿವೆ. ಅಧಿಕಾರಿಗಳು ಕೇವಲ ಸಭೆ ಮಾಡುತ್ತಿದ್ದಾರೆ. ಆದರೆ ಹಿಂದಿನ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಜಾರಿಯಲ್ಲಿ ಯಾವುದೇ ಪ್ರಗತಿಯಾಗಿಲ್ಲ ಎಂದು ಸಿಡಿಮಿಡಿಗೊಂಡರು. 

ಸಭೆಯಲ್ಲಿ ಉಪಸ್ಥಿತರಿದ್ದ ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಮಾತನಾಡಿ, ಪ್ರಗತಿಪರಿಶೀಲನಾ ಸಭೆಗಳು ನೆಪಕ್ಕೆ ಮಾತ್ರ ನಡೆಯಬಾರದು. ಕೈಗೊಂಡ ನಿರ್ಣಯಗಳು ಶೀಘ್ರ ಜಾರಿಯಾಗಬೇಕು. ತಪ್ಪಿದಲ್ಲಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.

ಸಭೆಯಲ್ಲಿ ಶಾಸಕ ಸಿಟಿ ರವಿ, ಎಡಿಸಿ ರಮೇಶ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಚಿಕ್ಕಮಗಳೂರು ನಗರದಲ್ಲಿ ಕೈಗೊಂಡಿರುವ ಅಮೃತ್ ಯೋಜನೆ ಜಾರಿಯಲ್ಲಿ ಗುತ್ತಿಗೆದಾರರು ವಿಳಂಬ ಮಾಡುತ್ತಿದ್ದಾರೆ. ಈ ಬಗ್ಗೆ ಅವರಿಗೆ ಸಾಕಷ್ಟು ಬಾರಿ ಎಚ್ಚರಿಕೆ ನೀಡಿದ್ದರೂ ಪ್ರಯೋಜನವಾಗಿಲ್ಲ. 120 ಕೋ.ರೂ. ಯೋಜನೆಯಲ್ಲಿ ಕೇವಲ 20 ಕೋ. ರೂ. ಮಾತ್ರ ಖರ್ಚಾಗಿದೆ. ಆದ್ದರಿಂದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು.
- ಸಿ.ಟಿ.ರವಿ, ಶಾಸಕ
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News