ಜಮೀನು ವಿವಾದ: ದಲಿತ ರೈತನನ್ನು ಬೆಂಕಿ ಹಚ್ಚಿ ಕೊಂದ ಮೇಲ್ಜಾತಿಯ ಕುಟುಂಬ

Update: 2018-06-22 08:50 GMT

ಭೋಪಾಲ್, ಜೂ.22: ಆಸ್ತಿ ಜಗಳವೊಂದು 55 ವರ್ಷದ ದಲಿತ ರೈತನೊಬ್ಬನ ಜೀವಂತ ದಹನದಲ್ಲಿ ಕೊನೆಯಾದ ಘಟನೆ ಭೋಪಾಲ ಜಿಲ್ಲೆಯ ಪರೋಸಿಯ ಘಟ್ಕೇಡಿ ಗ್ರಾಮದಿಂದ ವರದಿಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಯಾದವ ಸಮುದಾಯಕ್ಕೆ ಸೇರಿದ ತಿರಣ್ ಯಾದವ್, ಆತನ ಪುತ್ರ ಪ್ರಕಾಶ್ ಹಾಗೂ ಸೋದರಳಿಯಂದಿರಾದ ಬಲಬೀರ್ ಹಾಗೂ ಸಂಜು ಎಂಬವರನ್ನು ಬಂಧಿಸಿದ್ದಾರೆ.

ಮೃತ ರೈತ ಕಿಶೋರಿಲಾಲ್ ಜಾಟವ್ ಗೆ ಸರಕಾರದಿಂದ 2000ರಲ್ಲಿ ಪರೋಸಿಯಾ ಖಟ್ಕೇಡಿ ಗ್ರಾಮದಲ್ಲಿ 3.5 ಎಕರೆ ಜಮೀನು ಮಂಜೂರಾಗಿತ್ತು.  ಆದರೆ ಮೇಲ್ಜಾತಿಗೆ ಸೇರಿದ ಯಾದವ ಕುಟುಂಬದ ಜಮೀನೊಂದು ಇದರ ಪಕ್ಕದಲ್ಲಿದ್ದುದರಿಂದ  ಆ ಕುಟುಂಬ ಜಾಟವ್ ಭೂಮಿಯ ಒಂದು ಭಾಗದಲ್ಲಿ ಕೃಷಿ ನಡೆಸಿತ್ತು. ಭೂಮಿ ಅಳತೆ ಸಂದರ್ಭ ಇದು ತಿಳಿದು ಬಂದಾಗ ಅವರ ನಡುವೆ ಜಗಳ ನಡೆದು ಜಾಟವ್ ಗೆ ಸೇರಿದ ಭೂಮಿಯನ್ನು  ಬಿಟ್ಟು ಕೊಡಲು ಯಾದವ ಕುಟುಂಬ ನಿರಾಕರಿಸಿತ್ತು.

ಗುರುವಾರ ಆರೋಪಿಗಳು ತನಗೆ ಸೇರಿದ ಭೂಮಿಯನ್ನು ಉಳುತ್ತಿರುವುದನ್ನು ಕಂಡ ಜಾಟವ್ ತನ್ನ ಪತ್ನಿಯೊಂದಿಗೆ ಅಲ್ಲಿಗೆ ಧಾವಿಸಿ ತನ್ನ ವಿರೋಧ ವ್ಯಕ್ತಪಡಿಸಿದಾಗ ಆರಂಭದಲ್ಲಿ ಜಾಟವ್ ಗೆ ಹಲ್ಲೆ ನಡೆಸಿದ ಆರೋಪಿಗಳು ನಂತರ ಆತನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಅಲ್ಲಿಂದ ಪರಾರಿಯಾಗಿದ್ದರು.

ಜಾಟವ್ ರನ್ನು ಕೂಡಲೇ  ಬೈರಾಸಿಯಾ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ  ಅಲ್ಲಿ ಅವರು ಮೃತಪಟ್ಟಿದ್ದಾರೆ. ಘಟನೆ ಬಗ್ಗೆ ತಿಳಿದ ಗ್ರಾಮಸ್ಥರು ಆಸ್ಪತ್ರೆಯೆದುರು ಜಮಾಯಿಸಿ ಆರೋಪಿಗಳ ತಕ್ಷಣ ಬಂಧನಕ್ಕೆ ಒತ್ತಾಯಿಸಿದರಲ್ಲದೆ ರಸ್ತೆ ತಡೆ ನಡೆಸುವ ಬೆದರಿಕೆಯನ್ನೂ ಒಡ್ಡಿದ್ದಾರೆ. ಪೊಲೀಸರು ಗ್ರಾಮಸ್ಥರ ಮನವೊಲಿಸಿದ ನಂತರ ಜಾಟವ್ ಮೃತದೇಹವನ್ನು ಆಸ್ಪತ್ರೆಯಿಂದ ಕೊಂಡು ಹೋಗಿ ಅಂತ್ಯಸಂಸ್ಕಾರ ನಡೆಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News