ವಿಶ್ವಕಪ್ ಗ್ರೂಪ್ ದಾಖಲೆ ಕಾಯ್ದುಕೊಳ್ಳುವ ವಿಶ್ವಾಸದಲ್ಲಿ ಜರ್ಮನಿ

Update: 2018-06-22 18:43 GMT

ಸೋಚಿ, ಜೂ.22: ಕಳೆದ 80 ವರ್ಷಗಳಿಂದ ವಿಶ್ವಕಪ್‌ನ ಗ್ರೂಪ್ ಹಂತದಲ್ಲಿ ನಿರ್ಗಮಿಸದೆ ದಾಖಲೆ ನಿರ್ಮಿಸಿರುವ ಹಾಲಿ ಚಾಂಪಿಯನ್ ಜರ್ಮನಿ ಶನಿವಾರ ಸ್ವೀಡನ್ ತಂಡವನ್ನು ಎದುರಿಸಲಿದ್ದು, ತನ್ನ ಉತ್ತಮ ದಾಖಲೆ ಕಾಯ್ದುಕೊಳ್ಳುವ ವಿಶ್ವಾಸದಲ್ಲಿದೆ.

 ಜರ್ಮನಿ 1938ರ ಬಳಿಕ ಪ್ರತಿಯೊಂದು ವಿಶ್ವಕಪ್‌ನಲ್ಲಿ ಗ್ರೂಪ್ ಹಂತವನ್ನು ದಾಟಿದೆ. ಮೂರನೇ ವಿಶ್ವ ಸಮರದ ಹಿನ್ನೆಲೆಯಲ್ಲಿ 1950ರ ಟೂರ್ನಮೆಂಟ್‌ನಲ್ಲಿ ಜರ್ಮನಿಗೆ ನಿಷೇಧ ಹೇರಿದ ಕಾರಣ ಸ್ಪರ್ಧಿಸಿರಲಿಲ್ಲ.

 ಐದು ಬಾರಿಯ ಚಾಂಪಿಯನ್ ಬ್ರೆಝಿಲ್ ತಂಡ ಈ ದಾಖಲೆಯನ್ನು ಮುರಿಯುವ ಸಾಧ್ಯತೆಯಿದೆ. ದಕ್ಷಿಣ ಅಮೆರಿಕ ತಂಡ 1966ರಲ್ಲಿ ಕೊನೆಯ ಬಾರಿ ಗ್ರೂಪ್ ಹಂತದಲ್ಲಿ ಸೋತು ಕೂಟದಿಂದ ಹೊರ ನಡೆದಿತ್ತು.

ಸೋಚಿಯ ಫಿಶ್ತ್ ಸ್ಟೇಡಿಯಂನಲ್ಲಿ ‘ಎಫ್’ ಗುಂಪಿನ ಎರಡನೇ ಪಂದ್ಯ ಆಡುತ್ತಿರುವ ಜರ್ಮನಿ ತಂಡ ಸ್ವೀಡನ್ ಸವಾಲು ಎದುರಿಸಲು ಸಜ್ಜಾಗಿದೆ. ಗ್ರೂಪ್‌ನ ತನ್ನ ಮೊದಲ ಪಂದ್ಯದಲ್ಲಿ ಮೆಕ್ಸಿಕೊ ವಿರುದ್ಧ 0-1 ಅಂತರದಿಂದ ಸೋತಿರುವ ಜರ್ಮನಿ ತಂಡದ ವಿಶ್ವಕಪ್‌ನ ದೀರ್ಘಕಾಲದಿಂದ ಕಾಯ್ದುಕೊಂಡಿರುವ ದಾಖಲೆ ಅಂತ್ಯವಾಗಿತ್ತು.

 ಮೆಕ್ಸಿಕೊ ವಿರುದ್ಧ ಆಘಾತಕಾರಿ ಸೋಲುಂಡಿರುವ ಜರ್ಮನಿ ನಾಕೌಟ್ ಹಂತಕ್ಕೇರಬೇಕಾದರೆ ಸ್ವೀಡನ್ ಹಾಗೂ ದಕ್ಷಿಣ ಕೊರಿಯ ವಿರುದ್ಧದ ಉಳಿದೆರಡು ಗ್ರೂಪ್ ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ. ಜರ್ಮನಿ 2014ರ ವಿಶ್ವಕಪ್ ಪ್ರಶಸ್ತಿ ಗೆದ್ದ ಬಳಿಕ 10 ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಅಜೇಯ ಗೆಲುವಿನ ದಾಖಲೆ ಕಾಯ್ದುಕೊಂಡಿತ್ತು. ಕಳೆದ ಪಂದ್ಯದಲ್ಲಿ ಮೆಕ್ಸಿಕೊ ತಂಡ ಜರ್ಮನಿಯ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದೆ. ‘‘ನಮಗೆ ಎರಡು ಪ್ರಮುಖ ಗುರಿಯನ್ನು ಪೂರ್ಣಗೊಳಿಸಬೇಕಾಗಿದೆ. ನಾವೀಗ ಗ್ರೂಪ್ ಹಂತದ ಎರಡೂ ಪಂದ್ಯಗಳನ್ನು ಜಯಿಸಬೇಕು. ನಮಗೆ ಗೆಲುವು ಹೊರತುಪಡಿಸಿ ಬೇರೇನೂ ಬೇಡ’’ ಎಂದು ಜರ್ಮನಿಯ ಥಾಮಸ್ ಮುಲ್ಲರ್ ಹೇಳಿದ್ದಾರೆ.

ಎದುರಾಳಿ ಜರ್ಮನಿ ಭಾರೀ ಒತ್ತಡದಲ್ಲಿದೆ ಎಂಬುದನ್ನು ಅರಿತಿರುವ ಸ್ವೀಡನ್‌ಗೆ ಮುಂದಿನ ಸುತ್ತಿಗೇರಲು ಉತ್ತಮ ಅವಕಾಶ ಲಭಿಸಿದೆ. ಸ್ವೀಡನ್ ಡ್ರಾ ಸಾಧಿಸಿದರೂ ಮುಂದಿನ ಸುತ್ತಿಗೇರಲು ಸಾಧ್ಯವಾಗುತ್ತದೆ. ಆದರೆ, ಜರ್ಮನಿಗೆ ಮೂರಂಕದ ಅಗತ್ಯವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News