ಸತತ 29 ಪಂದ್ಯಗಳಲ್ಲಿ ‘ಗೋಲುರಹಿತ ಡ್ರಾ’ಕ್ಕೆ ಸಾಕ್ಷಿಯಾಗದ ರಶ್ಯ ಫುಟ್ಬಾಲ್‌ ವಿಶ್ವಕಪ್

Update: 2018-06-24 06:40 GMT

 ಮಾಸ್ಕೊ, ಜೂ.24: ಫುಟ್ಬಾಲ್‌ನಲ್ಲಿ ಗೋಲುಗಳು ಜೀವಸತ್ವವಾಗಿದೆ. ಈಗ ರಶ್ಯದಲ್ಲಿ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ಈಗಾಗಲೇ ಇದು ಸಾಬೀತಾಗಿದೆ. ಶನಿವಾರ ಟ್ಯುನಿಶಿಯ ವಿರುದ್ಧ ಪಂದ್ಯದಲ್ಲಿ ಬೆಲ್ಜಿಯಂ ತಂಡ 5-2 ಗೋಲುಗಳ ಅಂತರದಿಂದ ಜಯ ಸಾಧಿಸಿತು. ಇದೇ ಪಂದ್ಯದ 6ನೇ ನಿಮಿಷದಲ್ಲಿ ಪೆನಾಲ್ಟಿಯಲ್ಲಿ ಗೋಲು ಬಾರಿಸಿದ ಬೆಲ್ಜಿಯಂನ ಏಡೆನ್ ಹಝಾರ್ಡ್ ವಿಶ್ವಕಪ್‌ನ 64 ವರ್ಷಗಳ ಹಳೆಯ ದಾಖಲೆ ಪತನಕ್ಕೆ ಕಾರಣರಾದರು.

1954ರ ವಿಶ್ವಕಪ್‌ನ ಬಳಿಕ ಗರಿಷ್ಠ ಸಂಖ್ಯೆಯ ಪಂದ್ಯಗಳು ಗೋಲುರಹಿತ ಡ್ರಾಗೊಳ್ಳದೇ ಇರುವುದು ಈ ವರ್ಷದ ವಿಶ್ವಕಪ್‌ನ ವಿಶೇಷವಾಗಿದೆ. 1954ರಲ್ಲಿ ಸ್ವಿಟ್ಝರ್ಲೆಂಡ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಎಲ್ಲ 26 ಪಂದ್ಯಗಳು ಗೋಲುರಹಿತ ಡ್ರಾಗೊಳ್ಳದೇ ವಿಶಿಷ್ಟ ದಾಖಲೆ ನಿರ್ಮಾಣವಾಗಿತ್ತು.

 ಮಾಸ್ಕೊದಲ್ಲಿ ಶನಿವಾರ ನಡೆದ ವಿಶ್ವಕಪ್ ಗ್ರೂಪ್ ಪಂದ್ಯದಲ್ಲಿ ಬೆಲ್ಜಿಯಂನ ಏಡೆನ್ ಹಝಾರ್ಡ್ ಮೊದಲ ಗೋಲು ಬಾರಿಸುವುದರೊಂದಿಗೆ ಈ ವರ್ಷದ ವಿಶ್ವಕಪ್‌ನಲ್ಲಿ ಎಲ್ಲ 27 ಪಂದ್ಯಗಳು ಗೋಲುರಹಿತ ಡ್ರಾಗೊಳ್ಳದೇ ಅಂತ್ಯಗೊಂಡವು. 64 ವರ್ಷಗಳ ಹಳೆಯ ದಾಖಲೆಯೊಂದು ಪತನವಾಯಿತು.

  ಶನಿವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಜರ್ಮನಿ ತಂಡ ಸ್ವೀಡನ್ ವಿರುದ್ಧ 2-1 ಅಂತರದಿಂದ ಜಯ ಸಾಧಿಸಿದ್ದು, ಇದು ಗೋಲುರಹಿತ ಡ್ರಾಗೊಳ್ಳದ ಈ ವರ್ಷದ 29ನೇ ಪಂದ್ಯವಾಗಿದೆ. ಈ ವರ್ಷದ ವಿಶ್ವಕಪ್‌ನಲ್ಲಿ ಈತನಕ ನಡೆದಿರುವ ಒಟ್ಟು 29 ಗ್ರೂಪ್ ಪಂದ್ಯಗಳಲ್ಲಿ 71 ಗೋಲುಗಳು ದಾಖಲಾಗಿವೆ.

ಎಲ್ಲ ತಂಡಗಳ ಕೋಚ್‌ಗಳು ಅಳವಡಿಸಿಕೊಂಡ ಹೊಸ ರಣನೀತಿ ಹಾಗೂ ಈ ವರ್ಷ ಚಾಲ್ತಿಗೆ ಬಂದಿರುವ ವಿಡಿಯೋ ಅಸಿಸ್ಟೆಂಟ್ ರೆಫರಿ ಕೂಡ ಗೋಲುರಹಿತ ಡ್ರಾಗೊಳ್ಳದೇ ಇರಲು ಒಂದು ಕಾರಣವಾಗಿರಬಹುದು ಎಂದು ವಿಶ್ಲೇಷಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News