ಭಾರತದ ಪ್ರಜ್ಞಾನಂದ ವಿಶ್ವದ ಎರಡನೇ ಕಿರಿಯ ಚೆಸ್ ಗ್ರಾಂಡ್‌ಮಾಸ್ಟರ್

Update: 2018-06-24 07:25 GMT

ಚೆನ್ನೈ, ಜೂ.24: ಈಗ ಇಟಲಿಯಲ್ಲಿ ನಡೆಯುತ್ತಿರುವ ಗ್ರೆಂಡೈನ್ ಓಪನ್‌ನಲ್ಲಿ ಫೈನಲ್ ಸುತ್ತಿಗೆ ತಲುಪಿರುವ ಭಾರತದ ಆರ್. ಪ್ರಜ್ಞಾನಂದ ದೇಶದ ಕಿರಿಯ ಹಾಗೂ ವಿಶ್ವದ ಎರಡನೇ ಕಿರಿಯ ಚೆಸ್ ಗ್ರಾಂಡ್‌ಮಾಸ್ಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಪ್ರಜ್ಞಾನಂದಗೆ ಈಗಿನ ವಯಸ್ಸು 12 ವರ್ಷ, 10 ತಿಂಗಳು ಹಾಗೂ 13 ದಿನವಾಗಿದೆ.

ಚೆನ್ನೈ ಮೂಲದ ಆಟಗಾರ ಪ್ರಜ್ಞಾನಂದ ಫೈನಲ್ ಸುತ್ತಿನಲ್ಲಿ ಗ್ರಾಂಡ್‌ಮಾಸ್ಟರ್ ಪ್ರಜ್‌ಸರ್ಸ್ ರೊಲ್ಯಾಂಡ್ ವಿರುದ್ಧ ಆಡಲಿದ್ದು ಇದು ಅವರ ಪ್ರಶಸ್ತಿಯನ್ನು ಖಚಿತಪಡಿಸಿದೆ. 8ನೇ ಸುತ್ತಿನಲ್ಲಿ ಜಿಎಂ ಮೊರೊನಿ ಲಿಕಾ ಜೂನಿಯರ್‌ರನ್ನು ಸೋಲಿಸಿದ ಪ್ರಜ್ಞಾನಂದ ಮೂರನೇ ಗ್ರಾಂಡ್‌ಮಾಸ್ಟರ್ ಮಾನದಂಡ ಗಿಟ್ಟಿಸಲು 2482 ರೇಟಿಂಗ್‌ಗಿಂತ ಹೆಚ್ಚಿರುವ ಆಟಗಾರರೊಂದಿಗೆ ಫೈನಲ್‌ನಲ್ಲಿ ಆಡಬೇಕಾಗಿತ್ತು. 2514 ರೇಟಿಂಗ್ ಹೊಂದಿರುವ ರೊಲ್ಯಾಂಡ್ ಅವರು ಪ್ರಜ್ಞಾನಂದರ ಫೈನಲ್ ಎದುರಾಳಿಯಾಗಿ ಲಭಿಸಿದ್ದಾರೆ.

ಉಕ್ರೇನ್‌ನ ಸರ್ಗಿ ಕರ್ಜಾಕಿನ್ ವಿಶ್ವದ ಅತ್ಯಂತ ಕಿರಿಯ ಗ್ರಾಂಡ್ ಮಾಸ್ಟರ್ ಆಗಿದ್ದಾರೆ. 2002ರಲ್ಲಿ ಕರ್ಜಾಕಿನ್ 12 ವರ್ಷ, 7 ತಿಂಗಳಲ್ಲಿ ಈ ಸಾಧನೆ ಮಾಡಿದ್ದರು. ಪ್ರಜ್ಞಾನಂದ 10 ವರ್ಷ, 10 ತಿಂಗಳು ಹಾಗೂ 19 ದಿನಗಳಲ್ಲಿ ಅತ್ಯಂತ ಕಿರಿಯ ವಯಸ್ಸಿನಲ್ಲಿ ಇಂಟರ್‌ನ್ಯಾಶನಲ್ ಮಾಸ್ಟರ್ ಪ್ರಶಸ್ತಿ ಜಯಿಸಿದ್ದರು. ದೇಶದ ಮೊದಲ ಗ್ರಾಂಡ್‌ಮಾಸ್ಟರ್ ಐದು ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಪ್ರಜ್ಞಾನಂದ ಸಾಧನೆಯನ್ನು ಶ್ಲಾಘಿಸಿದ್ದಾರೆ.

 ‘‘ಇದೊಂದು ಖಂಡಿತವಾಗಿಯೂ ಅದ್ಭುತ ಸಾಧನೆ. ನಮ್ಮ ಓರ್ವ ವಿದ್ಯಾರ್ಥಿ ಈ ಸಾಧನೆ ಮಾಡಿದ್ದಕ್ಕೆ ಸಂತೋಷವಾಗುತ್ತಿದೆ. ತರಗತಿಗೆ ಹಾಜರಾಗಲು ಗಂಟೆಗೊಮ್ಮೆ ಪ್ರಯಾಣಿಸುತ್ತಿದ್ದ. ಅವರ ಹೆತ್ತವರು ಉತ್ತಮ ಬದ್ಧತೆ ಪ್ರದರ್ಶಿಸಿದ್ದರು. ಪ್ರಜ್ಞಾನಂದಗೆ ಕಳೆದ ವರ್ಷವೇ ಉಕ್ರೇನ್‌ನ ಕರ್ಜಕಿನ್ ದಾಖಲೆ ಮುರಿಯುವ ಅವಕಾಶವಿತ್ತು. ಜಿಎಂ ಮಾನದಂಡಕ್ಕೆ ಹತ್ತಿರವಾಗಿದ್ದರು. ಆದರೆ, ಸ್ವಲ್ಪದರಲ್ಲೇ ವಂಚಿತರಾದರು’’ ಎಂದು ಪ್ರಜ್ಞಾನಂದರ ಕೋಚ್ ರಮೇಶ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News