ಕನ್ನಡ ಸಾಹಿತ್ಯಾಸಕ್ತಿ ಜೀವಂತವಾಗಿದ್ದಾಗ ಮಾತ್ರ ಕನ್ನಡ ಭಾಷೆಯ ಬೆಳವಣಿಗೆ ಸಾಧ್ಯ: ಸಾಹಿತಿ ಅಬ್ದುಲ್ ರಶೀದ್

Update: 2018-06-24 18:04 GMT

ಮಡಿಕೇರಿ, ಜೂ.24: ಕನ್ನಡ ಭಾಷೆ ವಿನಾಶದಂಚಿನಲ್ಲಿದೆ ಎನ್ನುವ ಮಾತುಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ಕೇಳಿ ಬರುತ್ತಿದ್ದು, ಕನ್ನಡ ಸಾಹಿತ್ಯಾಸಕ್ತಿ ಜೀವಂತವಾಗಿರುವವರೆಗೆ ಕನ್ನಡ ಭಾಷೆಗೆ ಸಾವಿಲ್ಲವೆಂದು ಹಿರಿಯ ಸಾಹಿತಿ ಅಬ್ದುಲ್ ರಶೀದ್ ಅಭಿಪ್ರಾಯಪಟ್ಟಿದ್ದಾರೆ.

ಜಿಲ್ಲೆಯ ಸಾಹಿತ್ಯಾಸಕ್ತರನ್ನು ಒಂದೇ ವೇದಿಕೆಯಲ್ಲಿ ಸೇರಿಸುವ 'ಸಾಹಿತ್ಯ ಶಿಬಿರ ಹಾಗೂ ಸಂವಾದ' ಕಾರ್ಯಕ್ರಮ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಸಂಯುಕ್ತ ಆಶ್ರಯದಲ್ಲಿ ನಗರದ ದೇವರಾಜ ಅರಸು ಭವನದಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅಬ್ದುಲ್ ರಶೀದ್, ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷೆ ಆಧಾರಿತ ಸಾಹಿತ್ಯದ ಮೇಲಿನ ಆಸಕ್ತಿ ಹೆಚ್ಚಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದ್ದು, ಸಾಹಿತ್ಯ ಜೀವಂತವಾದಾಗ ಮಾತ್ರ ಭಾಷೆ ಜೀವಂತವಾಗಿರಲು ಸಾಧ್ಯವೆಂದರು. ಯುವ ಸಮೂಹದಲ್ಲಿ ಸಾಹಿತ್ಯಾಸಕ್ತಿ ಮೂಡಿಸುವ ಕಾರ್ಯಕ್ರಮಗಳು ನಡೆಯುತ್ತಿದೆಯಾದರೂ ಯುವಜನತೆಯನ್ನು ಹಿಡಿದಿಡುವ ಪ್ರಯತ್ನಗಳು ನಡೆಯುತ್ತಿಲ್ಲ. ಕಾರ್ಯಕ್ರಮದ ಉದ್ದೇಶಕ್ಕೆ ಹೆಚ್ಚಿನ ಒತ್ತು ನೀಡದೆ ಸ್ವಾಗತ ಮತ್ತು ವಂದನಾರ್ಪಣೆಗಾಗಿಯೇ ಕಾಲಹರಣ ಮಾಡಲಾಗುತ್ತಿದೆ. ಇದೇ ಕಾರಣದಿಂದ ಸಾಹಿತ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳ ಬಗ್ಗೆ ಯುವ ಸಮೂಹ ನಿರಾಸಕ್ತಿ ತೋರುತ್ತಿದ್ದು, ಸಾಮಾಜಿಕ ಜಾಲತಾಣಗಳ ಕಡೆಗೆ ಆಕರ್ಷಿತರಾಗುತ್ತಿದ್ದಾರೆ ಎಂದು ಅಬ್ದುಲ್ ರಶೀದ್ ವಿಷಾದ ವ್ಯಕ್ತಪಡಿಸಿದರು.

ಬೆಂಗಳೂರು, ಮೈಸೂರಿನವರೇ ದೊಡ್ಡ ಸಾಹಿತಿಗಳು ಎನ್ನುವ ಕೀಳರಿಮೆ ಅಥವಾ ಭ್ರಮೆ ಬೇಡ, ಶಂಖದಿಂದಲೇ ಬಂದರೆ ತೀರ್ಥ ಎನ್ನುವ ಮನೋಭಾವದಿಂದ ಹೊರ ಬಂದು ಕೊಡಗು ಜಿಲ್ಲೆಯಲ್ಲೂ ಇಲ್ಲಿಗೆ ಹೊಂದುವ ಸೊಗಡಿನ ಸಾಹಿತ್ಯ ರಚಿಸುವ ಸಾಹಿತಿಗಳಿದ್ದಾರೆ ಎನ್ನುವುದನ್ನು ಮನಗಾಣಬೇಕಾಗಿದೆ. ಕೊಡಗು ಒಂದು ವಿಶಿಷ್ಟ ಪ್ರದೇಶವಾಗಿದ್ದು, ಈ ಪ್ರದೇಶದ ಸೊಗಡನ್ನು ಅವಲಂಬಿಸಿಕೊಂಡು ವಿಶೇಷ ಮತ್ತು ವಿಭಿನ್ನ ಸಾಹಿತ್ಯಗಳು ರಚನೆಯಾಗುವ ಮೂಲಕ ಶ್ರೇಷ್ಟ ಕೃತಿಗಳು ಮೂಡಿ ಬಂದು ಜನಪ್ರಿಯಗೊಳ್ಳಲು ಸಾಧ್ಯವಾಗಲಿದೆ ಎಂದು ಅಬ್ದುಲ್ ರಶೀದ್ ಅಭಿಪ್ರಾಯಪಟ್ಟರು. ಆತ್ಮಗೌರವದಿಂದ ಸ್ಥಳೀಯ ಸೊಗಡಿಗೆ ಒತ್ತು ನೀಡಿ ಸಾಹಿತ್ಯ ರಚನೆಯಾಗುವ ಅಗತ್ಯವಿದೆ ಎಂದು ಅವರು ತಿಳಿಸಿದರು.

ಮತ್ತೊಬ್ಬ ಸಾಹಿತಿ ಶ್ರೀರಂಗಪಟ್ಟಣದ ಎಂ.ಎಸ್.ಶಶಿಕಲಾಗೌಡ ಮಾತನಾಡಿ ಸಾಹಿತ್ಯ ರಚನೆ ಎನ್ನುವುದು ನಿರಂತರ ಬದಲಾವಣೆಯ ಪ್ರಕ್ರಿಯೆಯಾಗಿದ್ದು, ರಾಮಾಯಣ, ಮಹಾಭಾರತ ಕೃತಿ ಕಾಲದಿಂದಲೂ ಈ ಬದಲಾವಣೆಯನ್ನು ಕಾಣಬಹುದಾಗಿದೆ ಎಂದರು.

ಜಾನಪದ ಕಾಲದಿಂದಲೇ ಬದಲಾವಣೆಯನ್ನು ಗಮನಿಸಬಹುದು. ನಮ್ಮಲ್ಲಿ ಉತ್ಕೃಷ್ಟವಾದ ಗಮಕ ಸಾಹಿತ್ಯ, ದಾಸ ಸಾಹಿತ್ಯ, ಇತಿಹಾಸ ಸಾಹಿತ್ಯಗಳನ್ನು ಕಾಣಬಹುದು. 1980ರಿಂದ ಶಾಸನ ಸಾಹಿತ್ಯ ಕೂಡ ಬೆಳವಣಿಗೆಯಾಗಿದೆ. ಅನುವಾದ ಸಾಹಿತ್ಯ ನಮ್ಮ ಸಂಸ್ಕೃತಿಯನ್ನು ಬೇರೊಬ್ಬರಿಗೆ ತಿಳಿಸುವ ಹಾಗೂ ಬೇರೆಯವರಿಂದ ಅರಿತುಕೊಳ್ಳುವ ಅತ್ಯುತ್ತಮ ಮಾಧ್ಯಮವಾಗಿದೆ. ಇಂದು ಭಾಷೆ ಕಲುಷಿತವಾಗುತ್ತಿದೆ. ಬದಲಾವಣೆ ಕೆಲವು ಸಾಹಿತ್ಯವನ್ನು ಅಧೋಗತಿಗೂ ತಳ್ಳುತ್ತಿದೆ. ಈ ಅಪಾಯದಿಂದ ನಾವು ಹೊರಬರಬೇಕಿದೆ. ಜ್ಞಾನವನ್ನು ತಿಳಿಸುವ ಎಲ್ಲಾ ಮಾಧ್ಯಮವೂ ಸಾಹಿತ್ಯ ಎಂದು ಹೇಳಿದರು.

ಕೊಡಗಿನ ಬಗ್ಗೆ ನನಗೆ ವಿಶೇಷ ಅಭಿಮಾನ. ಎ.ಕೆ.ಸುಬ್ಬಯ್ಯ ಅವರಂತಹ ವಾಗ್ಮಿ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ, ಜನರಲ್ ತಿಮ್ಮಯ್ಯ ಅವರಂತಹ ವೀರ ಸೇನಾನಿ, ಖ್ಯಾತ ಕ್ರೀಡಾಪಟುಗಳು, ಸಾಹಿತಿಗಳಿದ್ದಾರೆ ಎಂದು ಶಶಿಕಲಾ ಗೌಡ ಶ್ಲಾಘಿಸಿದರು.

ಆಂಗ್ಲಾಭಾಷೆಗೆ ಕೂಡ ಇಂದು ಸ್ವಂತ ಲಿಪಿ ಇಲ್ಲ. ಅದು ಲ್ಯಾಟಿನ್ ಭಾಷೆಯ ಲಿಪಿಯನ್ನು ಬಳಸಿಕೊಂಡಿದೆ. ಅದೇ ರೀತಿ ಬೆಳವಣಿಗೆ ಸಂದರ್ಭ ಭಾಷೆಗೆ ಲಿಪಿ ಇಲ್ಲ ಎಂಬ ಹಿಂಜರಿಗೆ ಬೇಡ. ಅರೆಭಾಷೆಗೆ ಸ್ವಂತ ಲಿಪಿ ಕಂಡು ಹಿಡಿಯಲಾಗಿದೆ. ಅದನ್ನು ಬೆಳೆಸಿ ಸಾಹಿತ್ಯ ರಚನೆ ಮಾಡಿ ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಕೇಶವ್ ಕಾಮತ್ ಮಾತನಾಡಿ, ಸಾಹಿತಿಗಳನ್ನು ಒಂದೆಡೆ ಸೇರಿಸುವಂತಹ ಕಾರ್ಯ ಪ್ರಶಂಸನೀಯವಾದುದು. ಲೇಖಕರ ಮತ್ತು ಕಲಾವಿದರ ಬಳಗ ಹಲವು  ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಜಿಲ್ಲೆಯ ಲೇಖಕರ ಸ್ವ ಪರಿಚಯದ ಪುಸ್ತಕವನ್ನು ಹೊರ ತರವು ಚಿಂತನೆ ಇದೆ. ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಭಿರುಚಿ ಮೂಡಿಸುವ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಬಳಗ ಆರಂಭ ಮಾಡುತ್ತಿದ್ದೇವೆ. ಇಂಟರ್‍ನೆಟ್ ಯುಗದಲ್ಲಿ ಬಾಲಸಾಹಿತ್ಯದ ಕೊರತೆ ಕಂಡು ಬರುತ್ತಿದೆ ಹೇಳಿದರು.

 ಮುಖ್ಯ ಅತಿಥಿಗಳಾಗಿ ಮಾತನಾಡಿದ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪಿ.ಸಿ.ಜಯರಾಮ್ ಅವರು, ವಿಭಿನ್ನ ಭಾಷೆಯಲ್ಲಿ ಸಾಹಿತ್ಯ ಕೃಷಿ ನಡೆಯುತ್ತಿದೆ. ಎಲ್ಲಾ ಸಾಹಿತಿಗಳು ದೇಶವನ್ನು ಕಟ್ಟುವಂತಹ ಕಾರ್ಯವನ್ನು ಮಾಡುತ್ತಿದ್ದಾರೆ. ಕವಿ ತನ್ನ ಭಾವನೆಗಳ ಮೂಲಕ ಅಭಿಪ್ರಾಯವನ್ನು ಜನರಿಗೆ ಪರಿಣಾಮಕಾರಿಯಾಗಿ ಮುಟ್ಟಿಸುವ ಶಕ್ತಿ ಹೊಂದಿದ್ದಾನೆ. ಸಾಹಿತ್ಯ ಕಾಲ ಕಾಲಕ್ಕೆ ಬದಲಾವಣೆ ಕಾಣಬೇಕಿದೆ. ಇಂತಹ ಸ್ಥಿತಿಯಲ್ಲಿ ಈ ರೀತಿಯ ಶಿಬಿರ ಏರ್ಪಡಿಸುತ್ತಿರುವುದು ಪ್ರಸ್ತುತವಾಗಿದೆ. ವಿದ್ಯಾರ್ಥಿಗಳನ್ನು ಇಂತಹ ಕಾರ್ಯಕ್ರಮಗಳಿಗೆ ತೊಡಗಿಸಿಕೊಳ್ಳಬೇಕು ಎಂದರು,

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಕೆ.ಪೊನ್ನಪ್ಪ ಅವರು ಮಾತನಾಡಿ, ಸಾಹಿತಿಗಳು ಆಗಿಂದಾಗ್ಗೆ ವಿಚಾರ ವಿನಿಮಯ ಮಾಡಿಕೊಳ್ಳಬೇಕು. ಸಾಹಿತ್ಯಕ್ಕೆ ಅಂತ್ಯವಿಲ್ಲ. ಅದು ಬೆಳೆಯುತ್ತಲೇ ಇರುತ್ತದೆ. ರವಿ ಕಾಣದನ್ನು ಕವಿ ಕಂಡ ಎನ್ನುವ ಮಾತು ಅರ್ಥಪೂರ್ಣವಾಗಿದೆ. ಸಾಹಿತ್ಯ ಬೆಳೆವಣಿಗೆಗೆ ಎಲ್ಲರೂ ಕೈ ಜೋಡಿಸಬೇಕು. ಉನ್ನತ ವಿದ್ಯೆಯೊಂದೇ ಸಾಹಿತ್ಯ ರಚನೆಗೆ ಅರ್ಹತೆಯಲ್ಲ. ಅನುಭವದಿಂದಲೂ ಅಪ್ಪಚ್ಚ ಕವಿಯಂತಹವರು ಉತ್ಕøಷ್ಟ ಸಾಹಿತ್ಯ ರಚಿಸಿದ ಉದಾಹರಣೆ ನಮ್ಮ ಮುಂದಿದೆ ಎಂದು ಹೇಳಿದರು.

ಲೇಖಕ ಮತ್ತು ಕಲಾವಿದರ ಬಳಗದ ಪ್ರಧಾನ ಕಾರ್ಯದರ್ಶಿ ಹಾಗೂ ಕೊಡವ ಅಕಾಡೆಮಿ ಸದಸ್ಯ ಐತಿಚಂಡ ರಮೇಶ್ ಉತ್ತಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಕೊಡಗಿನಲ್ಲಿ ಸಾಹಿತ್ಯಾಸಕ್ತರನ್ನು ಒಂದೆಡೆ ಸೇರಿಸುವ ಪ್ರಯತ್ನ ಇದಾಗಿದೆ. ಇಂತಹ ಕಾರ್ಯಕ್ರಮ ನಿರಂತರವಾಗಿ ನಡೆಬೇಕಿದೆ. ಇಡೀ ರಾಜ್ಯದಲ್ಲಿ ಪೂರ್ಣ ಪ್ರಮಾಣದ ಪುಸ್ತಕ ಮಾರಾಟ ಮಳಿಗೆ ಇಲ್ಲದ ಏಕೈಕ ಜಿಲ್ಲೆ ಕೊಡಗು ಎಂದು ವಿಷಾದಿಸಿದರು. 

ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ನಿಕಟ ಪೂರ್ವ ಅಧ್ಯಕ್ಷ ಸಂಶುದ್ದೀನ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಸಾಕಷ್ಟು ಯುವ ಸಾಹಿತಿಗಳಿದ್ದಾರೆ. ಮುಖ್ಯವಾಗಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಬೇಕು. ಹಲವು ಶಿಕ್ಷಕರಿಗೆ ಸಾಹಿತ್ಯದ ಬಗ್ಗೆ ಅಭಿರುಚಿ ಇಲ್ಲದಿರುವುದು ಸಮಸ್ಯೆಯಾಗಿದೆ. ಎಲ್ಲಾ ಶಾಲೆಗಳಲ್ಲಿ ಗ್ರಂಥಾಲಯ ಇದ್ದರೂ ಅವುಗಳ ಸದ್ಬಳಕೆ ಆಗುತ್ತಿಲ್ಲ ಎಂದು ಹೇಳಿದರು. 

ಸಾಹಿತಿ ನಾಗೇಶ್ ಕಾಲೂರು ಅವರು ಕೊಡವ ಸಾಹಿತ್ಯದ ಪರಿಚಯ ಮಾಡಿಕೊಟ್ಟರು. ಕೊಡವ ಜಾನಪದ ಸಾಹಿತ್ಯ ಉತ್ಕøಷ್ಟವಾಗಿದೆ. ಕೊಡಗಿನ ಬಾಳೋಪಾಟ್, ದೇವಡ ಪಾಟ್, ಶಿಶುಗೀತೆಗಳು ಅರ್ಥಪೂರ್ಣವಾಗಿವೆ. ಎಲ್ಲಾ ವಿಭಾದ ಸಾಹಿತ್ಯ ಜಾನಪದದಿಂದ ಬೆಳೆದು ಬಂದಿದೆ. ಕೊಡವ ಗಾದೆಗಳು ಕೂಡ ಮೌಲ್ಯದಿಂದ ಕೂಡಿವೆ ಎಂದು ಹೇಳಿದರು.

ಅರೆಭಾಷೆ ಸಾಹಿತ್ಯದ ಬಗ್ಗೆ ಮಾತನಾಡಿದ ಸಾಹಿತಿ ಬಿ.ಆರ್.ಜೋಯಪ್ಪ, ಹಲವು ಮಂದಿ ಉತ್ತಮ ಸಾಹಿತ್ಯ ರಚನೆ ಮಾಡಿದ್ದಾರೆ. ಅರೆಭಾಷೆಗೆ ಲಿಪಿಯಿದ್ದು, ಅದರಲ್ಲಿ ಬರೆಯುವ ಪ್ರಯತ್ನಗಳು ನಡೆಯುತ್ತಿವೆ. ಅರೆಭಾಷೆ ವಿಶೇಷ ಎಂದರೆ ಒಂದು ಪುಟದಲ್ಲಿ ಬರೆಯುವುದನ್ನು ಅರ್ಧ ಪುಟದಲ್ಲಿ ಬರೆಯಬಹುದಾಗಿದೆ. ಅದೇ ರೀತಿ ಹತ್ತು ನಿಮಿಷದಲ್ಲಿ ಹೇಳುವುದನ್ನು ಐದೇ ನಿಮಿಷದಲ್ಲಿ ಹೇಳಬಹುದಾಗಿದೆ. ಅರೆಭಾಷೆ ಅಕಾಡೆಮಿ ರಚನೆಯಾದ ನಂತರ ಸಾಕಷ್ಟು ಕೃತಿಗಳು ರಚನೆಯಾಗಿವೆ ಎಂದು ಹೇಳಿದರು.

ಅಕಾಡೆಮಿ ರಿಜಿಸ್ಟ್ರಾರ್ ಉಮರಬ್ಬ ಸ್ವಾಗತಿಸಿದರು. ಅರೆಭಾಷೆ ಅಕಾಡೆಮಿ ಸದಸ್ಯ ಕಡ್ಲೆರ ತುಳಸಿ ಮೋಹನ್ ನಿರೂಪಿಸಿದರು. ಕಾನೆಹಿತ್ಲು ಮೊಣ್ಣಪ್ಪ ಅವರು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News