ಬಿಜೆಪಿ ಶಾಸಕನಿಂದ ಪುತ್ರಿಯ ಅಪಹರಣ: ಮಾಜಿ ಯೋಧನ ಆರೋಪ

Update: 2018-06-25 08:33 GMT

ಜಮ್ಮು, ಜೂ.25: ತನ್ನ ಪುತ್ರಿಯನ್ನು ಬಿಜೆಪಿ ಶಾಸಕನೊಬ್ಬ ಅಪಹರಿಸಿದ್ದಾನೆ ಎಂದು ಮಾಜಿ ಯೋಧರೊಬ್ಬರು ಆರೋಪಿಸಿದ್ದಾರೆ. ಆದರೆ ಈ ಆರೋಪಗಳನ್ನು ಬಿಜೆಪಿ ಶಾಸಕ ನಿರಾಕರಿಸಿದ್ದು, ತನ್ನ ಹೆಸರಿಗೆ ಮಸಿ ಬಳಿಯುವ ಯತ್ನ ಎಂದಿದ್ದಾರೆ.

ಪಂಜಾಬ್ ನಲ್ಲಿ ಶಿಕ್ಷಣ ಪಡೆಯುತ್ತಿದ್ದ ತನ್ನ ಪುತ್ರಿಯನ್ನು ಸ್ಥಳೀಯ ಬಿಜೆಪಿ ಶಾಸಕ ಗಗನ್ ಭಗತ್ ಅಪಹರಿಸಿದ್ದಾರೆ ಎಂದು ಆರೋಪಿಸಿ ತನ್ನ ತಂದೆ ಹಾಗು ಕೆಲ ಸ್ಥಳೀಯರೊಂದಿಗೆ ಮಾಜಿ ಯೋಧ ರಾಜೀಂದರ್ ಸಿಂಗ್ ಜಮ್ಮುವಿನ ಪ್ರೆಸ್ ಕ್ಲಬ್ ಹೊರಗೆ ಪ್ರತಿಭಟನೆ ನಡೆಸಿದ್ದರು.

"ಶಾಸಕರನ್ನು ಭೇಟಿಯಾದ ನಂತರ ಪಂಜಾಬ್ ನ ದೇಶ್ ಭಗತ್ ಯುನಿವರ್ಸಿಟಿಯಲ್ಲಿ ನನ್ನ ಪುತ್ರಿಗೆ ಅಡ್ಮಿಶನ್ ಲಭಿಸಿತ್ತು. ಆಕೆ ಬ್ಯಾಚುಲರ್ ಆಫ್ ಆಯುರ್ವೇದಿಕ್ ಮೆಡಿಸಿನ್ ಆ್ಯಂಡ್ ಸರ್ಜರಿ ಕೋರ್ಸ್ ನ ಮೊದಲ ವರ್ಷದಲ್ಲಿ ಕಲಿಯುತ್ತಿದ್ದಳು. ಬೇಸಿಗೆ ರಜೆ ಹಿನ್ನೆಲೆಯಲ್ಲಿ ಆಕೆಯನ್ನು ಮನೆಗೆ ಕರೆತರಲು ಜೂನ್ 21ರಂದು ಪಂಜಾಬ್ ಗೆ ಹೋಗಿದ್ದೆ. ಆದರೆ ನಮಗೆ ತಿಳಿಸದೆ ಆಕೆಯನ್ನು ಬಿಜೆಪಿ ಶಾಸಕ ಮಾರ್ಚ್ 8ರಂದೇ ಕರೆದುಕೊಂಡು ಹೋಗಿರುವುದು ತಿಳಿದುಬಂತು" ಎಂದು ಸಿಂಗ್ ಆರೋಪಿಸಿದರು.

ಆದರೆ ಈ ಆರೋಪಗಳನ್ನು ಬಿಜೆಪಿ ಶಾಸಕನ ಜೊತೆಗೆ ಯುವತಿಯೂ ನಿರಾಕರಿಸಿದ್ದಾಳೆ. "ನನ್ನನ್ನು ಯಾರೂ ಅಪಹರಿಸಿಲ್ಲ. ಈ ಆರೋಪಗಳೆಲ್ಲವೂ ಸುಳ್ಳು. ನನ್ನ ಪೋಷಕರು ನಾನು 12ನೆ ತರಗತಿಯೂ ಉತ್ತೀರ್ಣನಾಗದ ಒಬ್ಬನನ್ನು ಮದುವೆಯಾಗುವಂತೆ ಬಲವಂತಪಡಿಸುತ್ತಿದ್ದಾರೆ. ಶಾಸಕ ಒಳ್ಳೆಯ ವ್ಯಕ್ತಿ" ಎಂದು ಹೇಳಿದ್ದಾಳೆ.

ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಜಮ್ಮು ಹಿರಿಯ ಪೊಲೀಸ್ ಅಧಿಕಾರಿ ವಿವೇಕ್ ಗುಪ್ತಾ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News