ವಿಟಿಯುನ 127 ಕೋಟಿ ಹಿಂಬಾಕಿಗೆ ಆದಾಯ ತೆರಿಗೆ ಇಲಾಖೆ ವಿನಾಯಿತಿ

Update: 2018-06-25 12:49 GMT

ಬೆಂಗಳೂರು, ಜೂ.25: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಬಹುದೊಡ್ಡ ಜೀವದಾನ ಸಿಕ್ಕಿದಂತಾಗಿದ್ದು, ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ವಿವಿಯು ತಾನು ಪಾವತಿಸಬೇಕಾಗಿದ್ದ 127 ಕೋಟಿ ರೂ. ಮೊತ್ತದ ಹಿಂಬಾಕಿ ಹಾಗೂ ಬಡ್ಡಿಗೆ ಆದಾಯ ತೆರಿಗೆ ಇಲಾಖೆ ವಿನಾಯಿತಿ ನೀಡಿದೆ.

ಸಂಸ್ಥೆಗೆ ಪುನಶ್ಚೇತನ ನೀಡುವ ನಿಟ್ಟಿನಲ್ಲಿ 441 ಕೋಟಿ ರೂ. ಕಾರ್ಪಸ್ ಫಂಡ್ ಬಿಡುಗಡೆಗೆ ಐಟಿ ಇಲಾಖೆ ಯೋಜಿಸಿದೆ. ಆರು ವರ್ಷಗಳ ಹಿಂದೆ ದಾಳಿ ವೇಳೆ ಇದನ್ನು ಮುಚ್ಚಲಾಗಿತ್ತು. 127 ಕೋಟಿ ಮೊತ್ತದ ಆದಾಯ ತೆರಿಗೆ ಹಿಂಬಾಕಿ ತೆರಿಗೆ ಹಾಗೂ ಬಡ್ಡಿಯನ್ನು ಪಾವತಿಸುವಂತೆ ಈ ಹಿಂದೆ ಆದಾಯ ತೆರಿಗೆ ಇಲಾಖೆಗೆ ವಿಶ್ವವಿದ್ಯಾಲಯಕ್ಕೆ ನೋಟಿಸ್ ನೀಡಿತ್ತು.

ಐಟಿ ಇಲಾಖೆ ಪರವಾಗಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿತ್ತು. ಈಗ ವಿಚಾರಣೆ ಮುಗಿದಿದ್ದು, ವಿವಿ ಪರವಾಗಿ ನ್ಯಾಯಾಲಯ ಆದೇಶ ನೀಡಿದೆ. ಈ ಆದೇಶವನ್ನು ಪೂರ್ತಿಯಾಗಿ ಅನುಷ್ಠಾನಗೊಳಿಸಬೇಕಾಗಿದೆ ಎಂಬಂತಹ ಮಾಹಿತಿಗಳು ಮೂಲಗಳಿಂದ ತಿಳಿದುಬಂದಿದೆ.

ಆಂಗ್ಲ ಪತ್ರಿಕೆಯ ವರದಿ ಪ್ರಕಾರ ಆದಾಯ ತೆರಿಗೆ ಕಾಯ್ದೆ ( ಎ) ಸೆಕ್ಷನ್ 12 ರ ಅಡಿಯಲ್ಲಿ ವಿವಿ ಆದಾಯ ತೆರಿಗೆಯಿಂದ ವಿನಾಯಿತಿ ಪಡೆದುಕೊಂಡಿದೆ. ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 12-ಎಎ ಅಡಿಯಲ್ಲಿ ಶಿಕ್ಷಣ ಸಂಸ್ಥೆಗಳು ಚಾರಿಟಬಲ್ ಟ್ರಸ್ಟ್ ಅಥವಾ ಸಂಸ್ಥೆಯಾಗಿ ಸ್ಥಾಪನೆಗೊಂಡಿದ್ದರೆ ತೆರಿಗೆಯಿಂದ ವಿನಾಯಿತಿ ಪಡೆದುಕೊಳ್ಳಲಿವೆ. ಇಲಾಖೆಯು ವಿಶ್ವವಿದ್ಯಾನಿಲಯದ ಹಿಂದಿನ ಖಾತೆಗಳನ್ನು ವಶಪಡಿಸಿಕೊಂಡಾಗ, ಕಾರ್ಪಸ್ ನಿಧಿಯ ಮೇಲೆ ವಿಟಿಯು ಬಡ್ಡಿಯನ್ನು ಪಡೆಯುತ್ತಿರುವ ಮೊತ್ತವು ತೆರಿಗೆಗೆ ಕಾರಣವಾಗಿದೆ ಎಂದು ಹೇಳಲಾಗುತ್ತದೆ.

ಆದಾಯ ತೆರಿಗೆ ಸೆಕ್ಷನ್ (10) (23) (ಸಿ) ಅಡಿಯಲ್ಲಿ ಎಲ್ಲಾ ವಿಶ್ವವಿದ್ಯಾಲಯಗಳು ತೆರಿಗೆಯಿಂದ ವಿನಾಯಿತಿ ಪಡೆಯಲಿವೆ. ಆದರೆ, ವಿಟಿಯು 1998-99 ಹೊರತುಪಡಿಸಿ ಉಳಿದಂತೆ ಎಲ್ಲಿಯೂ ವಿನಾಯಿತಿ ನೀಡಿರಲಿಲ್ಲ. ವಿಟಿಯು ಸಂಕಷ್ಟದಲ್ಲಿದ್ದು, ಸಿಬ್ಬಂದಿಗೆ ಸಂಬಳ ನೀಡುವುದಕ್ಕೂ ಹೋರಾಟ ಮಾಡಬೇಕಾಗಿದೆ. ರಾಜ್ಯ ಸರಕಾರದಿಂದಲೂ ಯಾವುದೇ ಆರ್ಥಿಕ ನೆರವು ದೊರಕಿಲ್ಲ. ಇದೀಗ ಈ ತೀರ್ಪಿನಿಂದಾಗಿ ವಿವಿ ಸಿಬ್ಬಂದಿಗಳು ಉಸಿರಾಡುವಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News