ಹಸಿವಿನಿಂದ ಸಾವು

Update: 2018-06-25 18:33 GMT

ಕಳೆದ ಹತ್ತು ತಿಂಗಳುಗಳಲ್ಲಿ, ಜಾರ್ಖಂಡ್ ರಾಜ್ಯದಲ್ಲಿ ಕನಿಷ್ಠ 12 ಮಂದಿ ಹಸಿವಿನಿಂದಾಗಿ ಸಾವನ್ನಪ್ಪಿದ್ದಾರೆ. ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ಕಾರ್ಯನಿರ್ವಹಣೆಯಲ್ಲಿನ ವಿಳಂಬವೇ ಈ ಸಾವುಗಳಿಗೆ ಕಾರಣವೆಂದರೆ ತಪ್ಪಾಗಲಾರದು. ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವ ಬದಲು ಹಾಗೂ ರಾಜ್ಯದಲ್ಲಿ ಆಹಾರಭದ್ರತೆಯನ್ನು ಸುಧಾರಿಸಲು ಯೋಜನೆಗಳನ್ನು ಹಮ್ಮಿ ಕೊಳ್ಳುವ ಬದಲು ಜಾರ್ಖಂಡ್ ಸರಕಾರವು ಈ ಸಾವುಗಳಿಗೆ ಹಸಿವು ಕಾರಣವೆಂಬುದನ್ನು ನಿರಾಕರಿಸುವ ಮೂಲಕ ನಿಂದನೆಗೊಳಗಾಗುವುದರಿಂದ ತಪ್ಪಿಸಿಕೊಳ್ಳಲು ಯತ್ನಿಸಿತು. ಅಷ್ಟೇ ಅಲ್ಲ, ರಾಜ್ಯದ ಆಹಾರ ಸಚಿವರಾದ ಸರಯೂ ರಾಯ್ ಅವರು, ಪ್ರಕರಣಗಳ ಬಗ್ಗೆ ಒಂದರ ಹಿಂದೆ ಒಂದರಂತೆ ಹುಸಿ ಹೇಳಿಕೆಗಳನ್ನು ನೀಡಿದ್ದರಲ್ಲದೆ, ಜಾರ್ಖಂಡ್‌ನಲ್ಲಿ ಆಹಾರದ ಹಕ್ಕಿನ ವ್ಯಾಪಕ ಉಲ್ಲಂಘನೆಯ ಬಗ್ಗೆ ಬೆಳಕು ಚೆಲ್ಲಿದ್ದ ಸಾಮಾಜಿಕ ಕಾರ್ಯಕರ್ತರ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದರು.

ಜಾರ್ಖಂಡ್‌ನಲ್ಲಿ ಇತ್ತೀಚೆಗೆ ಸಂಭವಿಸಿದ ಗಿರಿಧ್‌ನ ಸಾವಿತ್ರಿ ದೇವಿ, ಛಾತ್ರದ ಮಿನೂ ಮುಸಾಹರ್ ಹಾಗೂ ರಾಮ್‌ಗಡದ ಚಿಂತಾಮನ್ ಮಲ್ಹಾರ್ ಅವರ ಸಾವಿನ ಪ್ರಕರಣಗಳು, ರಾಜ್ಯದಲ್ಲಿ ಹಸಿವಿನ ಸಮಸ್ಯೆಗೆ ಜಾರ್ಖಂಡ್ ಸರಕಾರ ಗಂಭೀರವಾಗಿ ಸ್ಪಂದಿಸುತ್ತಿಲ್ಲವೆಂಬುದನ್ನು ಬಯಲಿಗೆಳೆದಿದೆ. ಈ ಮೂವರ ಸಾವು ಸಂಭವಿಸಿದ ಬಳಿಕವೂ ಸರಕಾರವು ಈ ಕಳವಳಕಾರಿ ಪರಿಸ್ಥಿತಿಯ ಬಗ್ಗೆ ನಿರ್ಲಕ್ಷವನ್ನು ಮುಂದುವರಿಸಿದೆ.

    ದೀರ್ಘ ಸಮಯದ ಹಸಿವು ಹಾಗೂ ಅಪೌಷ್ಟಿಕತೆಯಿಂದಾಗಿ 60 ವರ್ಷ ಪ್ರಾಯದ ಸಾವಿತ್ರಿ ದೇವಿ 2018ರ ಜೂನ್ 2ರಂದು ಸಾವನ್ನಪ್ಪಿದ್ದರು. ತಾವು ಕೊನೆಯ ಬಾರಿಗೆ ಯಾವಾಗ ದಾಲ್ ಅಡುಗೆ ಮಾಡಿದ್ದೇವೆಂಬುದನ್ನು ಆಕೆಯ ಕುಟುಂಬದ ಸದಸ್ಯರಿಗೆ ಮರೆತೇಹೋಗಿದೆ. ಕೆಲವು ತಿಂಗಳುಗಳ ಹಿಂದೆಯೇ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದರೂ ಕೂಡಾ ಈ ಬಡ ಕುಟುಂಬಕ್ಕೆ ಇಲ್ಲಿಯ ತನಕ ಅದು ದೊರೆತಿಲ್ಲ. ಸಾವಿತ್ರಿ ದೇವಿಯ ಕುಟುಂಬವು ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿಯೇ ಇಲ್ಲವೆಂಬ ಸರಕಾರದ ವಾದಕ್ಕೆ ಇದು ತೀರಾ ವ್ಯತಿರಿಕ್ತವಾಗಿದೆ. ಅಷ್ಟೇ ಅಲ್ಲದೆ ಸರಕಾರ ಹೇಳಿಕೊಂಡುವಂತೆ ಸಾವಿತ್ರಿ ದೇವಿ ಯಾವತ್ತೂ ಚಿಕಿತ್ಸೆಗಾಗಿ ರಾಂಚಿಯ ರಿಮ್ಸ್ ಆಸ್ಪತ್ರೆಗೆ ದಾಖಲಾಗಿರಲಿಲ್ಲ. 2014ರಲ್ಲಿ ಆಕೆಗೆ ವಿಧವಾ ಪಿಂಚಣಿ ಮಂಜೂರಾಗಿದ್ದರೂ, ಈ ಯೋಜನೆಯ ಜೊತೆ ಆಕೆಯ ಆಧಾರ್ ಸಂಖ್ಯೆ ಲಿಂಕ್ ಆದ ಬಳಿಕ 2018ರಲ್ಲಿ ಪಿಂಚಣಿಯ ಮೊದಲ ಕಂತು ಪಾವತಿಯಾಗಿತ್ತು. ಆದಾಗ್ಯೂ, ಪಿಂಚಣಿಯು ಜಮೆಯಾಗಿರುವ ಬಗ್ಗೆ ಸಾವಿತ್ರಿ ದೇವಿಗೆ ಮಾಹಿತಿ ನೀಡಿರಲಿಲ್ಲ.

ರಾಮ್‌ಗಡದ ಮಾಂಡು ಗ್ರಾಮದ ನಿವಾಸಿ 50 ವರ್ಷ ಪ್ರಾಯದ ಚಿತಾಮನ್, ಕಡುಬಡತನದಲ್ಲಿ ಬದುಕಿದ್ದರು ಹಾಗೂ ಹಸಿವಿನಿಂದ ಬೆಂದಿದ್ದರು. ಚಿತಾಮನ್‌ನ ಕುಟುಂಬ ಹಾಗೂ ನೆರೆಹೊರೆಯವರು ಅತ್ಯಂತ ದಯನೀಯ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆಂಬುದನ್ನು ಒಪ್ಪಿಕೊಂಡ ಹೊರತಾಗಿಯೂ ಸರಕಾರಿ ಅಧಿಕಾರಿಗಳು, ವಿಭಿನ್ನವಾದ ಕಥೆಯನ್ನು ಹೇಳುವ ಹೇಳಿಕೆಗಳಿಗೆ ಚಿತಾಮನ್‌ನಿಂದ ಪುತ್ರನಿಂದ ಸಹಿಹಾಕಿಸಿದ್ದರು. ಹೀಗಾಗಿ, ತನ್ನ ತಂದೆಯದು ಸಹಜ ಸಾವೆಂದು, ಚಿತಾಮನ್‌ನ ಪುತ್ರ ಒಪ್ಪಿಕೊಂಡಿದ್ದಾನೆಂದು ಆಹಾರ ಸಚಿವರು ಆನಂತರ ಘೋಷಿಸಿರುವುದರಲ್ಲಿ ಅಚ್ಚರಿಯೇನಿಲ್ಲ. ಹೂಳಲಾಗಿರುವ ಚಿತಾಮನ್‌ನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹೊರತೆಗೆಯಬೇಕೆಂದು ಅವರು ಸಲಹೆ ನೀಡಿರುವುದು, ಈ ವಿಷಯದ ಬಗ್ಗೆ ಅವರಿಗಿರುವ ಅಸಂವೇದನೆಯನ್ನು ಪ್ರತಿಬಿಂಬಿಸುತ್ತದೆ. ಈ ವ್ಯಕ್ತಿಯ ಸಾವಿಗೆ ಹಸಿವು ಕಾರಣವಲ್ಲವೆಂಬ ಆತನ ಪುತ್ರನ ಹೇಳಿಕೆಯನ್ನೇ ಅವರು ಇದಕ್ಕೆ ಪುರಾವೆಯಾಗಿ ವ್ಯಾಖ್ಯಾನಿಸಿದ್ದಾರೆ.

ಚಿಂದಿ ಆಯುವ ವೃತ್ತಿಯ ಮಿನೂ ಮುಸಾರ್ ಎಂಬಾಕೆ ಕೂಡಾ, ನಿರ್ಗತಿಕಳಾಗಿ ಹಾಗೂ ಕಡುಬಡತನದಿಂದ ಸಾವನ್ನಪ್ಪಿದ್ದಳು. ಮಿನೂ ಮುಸಾರ್‌ಳ ನೆರೆಹೊರೆಯವರು ಹೇಳುವ ಪ್ರಕಾರ, ಆಕೆ ಎಷ್ಟರ ಮಟ್ಟಿಗೆ ಅಪೌಷ್ಟಿಕತೆಯಿಂದ ಬಳಲುತ್ತಿದ್ದಳೆಂದರೆ, ಅವಳು ಸಾವನ್ನಪ್ಪುವುದಕ್ಕೆ ಕೇವಲ ಒಂದು ವಾರದ ಮೊದಲು ಮೃತಪಟ್ಟಿದ್ದ ತನ್ನ ಪುಟ್ಟ ಮಗುವಿಗೂ, ಎದೆಹಾಲು ನೀಡಲು ಆಕೆಗೆ ಸಾಧ್ಯವಾಗಿರಲಿಲ್ಲ. ಆಕೆಯ ಬಳಿ ಪಡಿತರ ಚೀಟಿಯೂ ಇದ್ದಿರಲಿಲ್ಲ. ಜೀವನೋಪಾಯವನ್ನು ಅರಸಿಕೊಂಡು ಮಿನೂ ಬಿಹಾರದ ಗಯಾಗೆ ಬಂದಿರಬಹುದೆಂದು ಹೇಳುವ ಮೂಲಕ ಜಾರ್ಖಂಡ್ ಸರಕಾರವು, ಈ ಸಾವಿನ ಪ್ರಕರಣದಲ್ಲಿ ತನ್ನ ಹೊಣೆಗಾರಿಕೆಯಿಂದ ಪಾರಾಗಲು ಯತ್ನಿಸಿತ್ತು. ಪಡಿತರ ಚೀಟಿ ಹೊಂದಿರದೆ ಇದ್ದ ವ್ಯಕ್ತಿಗಳು ಹಸಿವಿನಿಂದ ಸಾವನ್ನಪ್ಪಿದ್ದಲ್ಲಿ ಅದಕ್ಕೆ ತನ್ನ ಇಲಾಖೆ ಹೊಣೆಯಲ್ಲವೆಂದು ಆಹಾರ ಸಚಿವರು ತಿಳಿಸಿದ್ದರು.

ಸರಕಾರದ ವಾದಕ್ಕೆ ವ್ಯತಿರಿಕ್ತವೆಂಬಂತೆ, ಇತ್ತೀಚೆಗೆ ಹಸಿವಿನಿಂದ 12 ಮಂದಿ ಸಾವನ್ನಪ್ಪಿರುವುದಕ್ಕೆ ಕಾರಣವಾದ ಅಂಶಗಳಲ್ಲಿ ಪಡಿತರ ಚೀಟಿ ಇಲ್ಲದಿರುವುದು, ಆಧಾರ್ ಜೋಡಣೆಯಿಲ್ಲದಿದ್ದುದರಿಂದ ಅಥವಾ ಆಧಾರ್ ಆಧಾರಿತ ಬಯೋಮೆಟ್ರಿಕ್ ದೃಢೀಕರಣದ ವೈಫಲ್ಯದ ಪಡಿತರ ಚೀಟಿಯ ರದ್ದತಿ ಕೂಡಾ ಒಳಗೊಂಡಿರುವುದು ಕೂಡಾ ಸೇರಿವೆ. ಹಸಿವಿಗೆ ಬಲಿಯಾದವರಲ್ಲಿ ಹಲವಾರು ಮಂದಿ ಅಸ್ವಸ್ಥರೆಂಬುದು ನಿಜ. ಆದರೆ ಅವರಿಗೆ ಸಮರ್ಪಕವಾದ ಪೌಷ್ಟಿಕ ಆಹಾರ ಹಾಗೂ ವೈದ್ಯಕೀಯ ಪಾಲನೆ ಲಭ್ಯವಾಗುತ್ತಿದ್ದರೆ ಬಹುಶಃ ಅವರು ಹಸಿವಿನಿಂದಾಗಿ ಸಾವನ್ನಪ್ಪುತ್ತಿರಲಿಲ್ಲವೇನೋ.

ಹಸಿವಿಗೆ ಬಲಿಯಾದವರ ಹಾಗೂ ಅವರ ಕುಟುಂಬಗಳ ಕಡುಬಡತನಕ್ಕೆ ಸಾಮಾಜಿಕ ಭದ್ರತಾ ಪಿಂಚಣಿಯ ನಿರಾಕರಣೆ ಹಾಗೂ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯಡಿ ಯಲ್ಲಿನ ಉದ್ಯೋಗಗಳ ಅಲಭ್ಯತೆಯೂ ಕಾರಣವಾಗಿದೆ. ಹಸಿವಿನಿಂದ ಮೃತರಾದವರ ಪೈಕಿ ಕನಿಷ್ಠ ನಾಲ್ವರು ಸಾಮಾಜಿಕ ಭದ್ರತಾ ಪಿಂಚಣಿಗೆ ಅರ್ಹರಾಗಿದ್ದರು. ಆದರೆ ಆಡಳಿತಾತ್ಮಕ ವಿಳಂಬಗಳಿಂದಾಗಿ ಅಥವಾ ಆಧಾರ್ ಸಂಬಂಧಿತ ವಿಷಯಗಳಿಂದಾಗಿ, ಅವರಿಗೆ ಪಿಂಚಣಿ ದೊರೆತಿರಲಿಲ್ಲ.

ಹಸಿವಿನಿಂದ ಸಾವಿನ ಪ್ರಕರಣಗಳು ಸಾರ್ವಜನಿಕ ವಿತರಣಾ ವ್ಯವಸ್ಥೆಯಿಂದ ಬಡ ಕುಟುಂಬಗಳು ಹೊರಗಿಡಲ್ಪಟ್ಟಿರುವುದನ್ನು ಹಾಗೂ ಜಾರ್ಖಂಡ್‌ನಲ್ಲಿ ಆಹಾರದ ಅಭದ್ರತೆಯು ಅಪಾಯಕಾರಿ ಮಟ್ಟದಲ್ಲಿರುವುದನ್ನು ಬಯಲಿಗೆಳೆದಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಸಾರ್ವತ್ರೀಕರಣಗೊಳಿಸುವಲ್ಲಿ ಹಾಗೂ ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಪೌಷ್ಟಿಕ ಆಹಾರವಸ್ತುಗಳ ಸೇರ್ಪಡೆಗೊಳಿಸುವುದು ಈ ಸಮಸ್ಯೆಗೆ ಸ್ಪಂದಿಸುವ ನಿಟ್ಟಿನಲ್ಲಿ ಅತ್ಯಂತ ಪರಿಣಾಮಕಾರಿ ಕ್ರಮವಾಗಿದೆ. ಈ ಕುಟುಂಬಗಳಲ್ಲಿ ಹೆಚ್ಚಿನವು ದಟ್ಟ ದಾರಿದ್ರದಲ್ಲಿ ಬದುಕುತ್ತಿದ್ದರೂ ಅವುಗಳಿಗೆ ಅಂತ್ಯೋದಯ ಅನ್ನ ಯೋಜನೆಯ (ಎಎವೈ) ಪಡಿತರ ಕಾರ್ಡ್‌ಗಳು ಇಲ್ಲದಿರುವುದು, ಆ ಯೋಜನೆಯ ವ್ಯಾಪಕತ್ವವನ್ನು ಪ್ರಶ್ನಾರ್ಹಗೊಳಿಸಿದೆ. ಈ ಎಲ್ಲಾ ಅಂಶಗಳ ಬಗ್ಗೆ ಚರ್ಚಿಸುವ ಬದಲು ಆಹಾರ ಸಚಿವರು, ಧಾನ್ಯ ಬ್ಯಾಂಕ್‌ಗಳ ಸ್ಥಾಪನೆಯ ಪ್ರಸ್ತಾಪವನ್ನು ಮಾಡಿದ್ದಾರೆ. ಒಂದು ವೇಳೆ ಇಂತಹ ಬ್ಯಾಂಕ್‌ಗಳು ಸ್ಥಾಪನೆಯಾದಲ್ಲಿ ಆಹಾರದ ಭದ್ರತೆಯನ್ನು ಮಾನವನ ಹಕ್ಕಾಗಿ ಖಾತರಿಪಡಿಸುವ ಪ್ರಯತ್ನವು ವಿಫಲವಾಗುತ್ತದೆ.

ಜನತೆಯ ಆಹಾರ ಭದ್ರತೆಯ ಬಗ್ಗೆ ಜಾರ್ಖಂಡ್ ಸರಕಾರದ ನಿರ್ಲಿಪ್ತತೆಯು, ರಾಂಚಿಯ ನಾಗ್ರಿ ಬ್ಲಾಕ್‌ನಲ್ಲಿ ‘ಆಹಾರಭದ್ರತೆಗಾಗಿನ ನೇರ ಲಾಭದ ವರ್ಗಾವಣೆ’ ಎಂಬ ಪೈಲಟ್ ಯೋಜನೆಯನ್ನು ಹಿಂಪಡೆಯಲು ವಿಳಂಬಿಸುತ್ತಿರುವ ಮೂಲಕ ಬಹಿರಂಗಗೊಡಿದೆ.
 ಎಲ್ಲಾ ರೀತಿಯಲ್ಲೂ ಈ ಪೈಲಟ್ ಯೋಜನೆ ದಯನೀಯವಾಗಿ ವಿಫಲವಾಗಿದೆ. ಆದಾಗ್ಯೂ ಸರಕಾರವು ಈ ಯೋಜನೆಯನ್ನು ಇನ್ನೂ ಕೂಡಾ ಹಿಂದೆಗೆದುಕೊಂಡಿಲ್ಲ ಅಥವಾ ಈ ಕಳಪೆ ಉಪಕ್ರಮದಿಂದಾಗಿ ಸಬ್ಸಿಡಿ ದರದಲ್ಲಿ ಆಹಾರಧಾನ್ಯಗಳನ್ನು ಪಡೆಯುವ ಕಾನೂನುಬದ್ಧ ಹಕ್ಕು ನಿರಾಕರಿಸಲ್ಪಟ್ಟ ಪಡಿತರ ಚೀಟಿದಾರರಿಗೆ ಪರಿಹಾರ ನೀಡಲೂ ಅದು ಮುಂದಾಗಿಲ್ಲ.

ಆಹಾರದ ಹಕ್ಕಿನ ಅಭಿಯಾನವು, ನೇರ ಲಾಭದ ವರ್ಗಾವಣೆಗಾಗಿನ ಆಹಾರ ಭದ್ರತೆ ಕುರಿತ ಪೈಲಟ್ ಯೋಜನೆಯನ್ನು ತಕ್ಷಣವೇ ಹಿಂಪಡೆಯುವುದನ್ನು ಆಗ್ರಹಿಸುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆ(ಪಿಡಿಎಸ್)ಯನ್ನು ಸಾರ್ವತ್ರೀಕರಣಗೊಳಿಸುವುದನ್ನು ಹಾಗೂ ಜಾರ್ಖಂಡ್‌ನ ಆಹಾರ ಸಚಿವರು ಭರವಸೆ ನೀಡಿರುವಂತೆ, ಪಿಡಿಎಸ್‌ನಲ್ಲಿ ದ್ವಿದಳ ಧಾನ್ಯಗಳು ಹಾಗೂ ಖಾದ್ಯ ತೈಲದ ಸೇರ್ಪಡೆಗೊಳಿಸಬೇಕೆಂಬುದಾಗಿಯೂ ಅಭಿಯಾನ ಒತ್ತಾಯಿಸುತ್ತಿದೆ.

ಸಾರ್ವಜನಿಕ ಆಹಾರ ವಿತರಣಾ ವ್ಯವಸ್ಥೆ ಹಾಗೂ ಇತರ ಎಲ್ಲಾ ಸಾರ್ವಜನಿಕ ಸೇವೆಗಳ ಫಲಾನುಭವಿಯಾಗಲು ಆಧಾರ್ ಅನ್ನು ಕಡ್ಡಾಯಗೊಳಿಸುವುದನ್ನು ಸರಕಾರವು ತಕ್ಷಣದಿಂದಲೇ ರದ್ದುಪಡಿಸಬೇಕಾಗಿದೆ ಹಾಗೂ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಅಹವಾಲುಗಳನ್ನು ಬಗೆಹರಿಸುವ ವ್ಯವಸ್ಥೆಯನ್ನು ಬಲಪಡಿಸಬೇಕಾಗಿದೆ.

ಕೃಪೆ: countercurrents

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News