ಕೋಟ್ಯಂತರ ರೂ. ವಂಚನೆ: ಪ್ರಧಾನಿ ಮೌನ ಮುರಿಯಲು ಕಾಂಗ್ರೆಸ್ ಆಗ್ರಹ

Update: 2018-06-26 05:54 GMT
ರಣದೀಪ್ ಸುರ್ಜೇವಾಲಾ

ಹೊಸದಿಲ್ಲಿ, ಜೂ.26: ಫರೀದಾಬಾದ್ ಮೂಲದ ಎಸ್‌ಆರ್‌ಎಸ್ ಸಮೂಹವು ಭಾರತೀಯ ಸ್ಟೇಟ್ ಬ್ಯಾಂಕ್‌ಗೆ 6,978 ಕೋಟಿ ರೂಪಾಯಿ ಸೇರಿದಂತೆ ಹಲವು ಬ್ಯಾಂಕ್‌ಗಳಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಕರಣದ ಬಗ್ಗೆ ಪ್ರಧಾನಿ ಕಚೇರಿ ಮತ್ತು ಹಣಕಾಸು ಸಚಿವಾಲಯ ಮೌನ ತಾಳಿದೆ ಎಂದು ಕಾಂಗ್ರೆಸ್ ಆಪಾದಿಸಿದೆ.

ಎಸ್‌ಆರ್‌ಎಸ್ ಸಮೂಹಕ್ಕೆ ಸೇರಿದ ಮೂವರು ದೇಶದಿಂದ ಪಲಾಯನ ಮಾಡಲು ಏಕೆ ಅವಕಾಶ ಮಾಡಿಕೊಡಲಾಗಿದೆ ಎಂಬ ಬಗ್ಗೆ ಜನತೆಗೆ ಸ್ಪಷ್ಟಪಡಿಸಬೇಕು ಎಂದು ಪಕ್ಷದ ವಕ್ತಾರ ರಣದೀಪ್ ಸುರ್ಜೇವಾಲಾ ಆಗ್ರಹಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಒಬ್ಬ ಆರೋಪಿ ಅನಿಲ್ ಜಿಂದಾಲ್‌ನನ್ನು ಎಪ್ರಿಲ್‌ನಲ್ಲಿ ಬಂಧಿಸಿದ್ದು, ಜೆ.ಕೆ.ಗಾರ್ಗ್, ಪಿ.ಕೆ.ಕಪೂರ್ ಮತ್ತು ಪ್ರತೀಕ್ ಜಿಂದಾಲ್ ಅವರು ದೇಶದಿಂದ ಹೊರಹೋಗಲು ಅವಕಾಶ ಮಾಡಿಕೊಡಲಾಗಿದೆ ಎಂದು ಅವರು ಆಪಾದಿಸಿದರು.

ಜಿಂದಾಲ್, ಪ್ರಧಾನಿ ಮೋದಿ ಹಾಗೂ ಹರ್ಯಾಣ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ಜತೆಗೆ ನಿಕಟ ನಂಟು ಹೊಂದಿದ್ದಾನೆ. ಆತನ ವಿರುದ್ಧ 22 ವಂಚನೆ ಪ್ರಕರಣಗಳು ಫರೀದಾಬಾದ್ ಠಾಣೆಯಲ್ಲಿ ದಾಖಲಾಗಿವೆ ಎಂದು ರಣದೀಪ್ ವಿವರಿಸಿದರು.

ಕಳಪೆ ಸಾಧನೆಯ ಐಡಿಬಿಐ ಬ್ಯಾಂಕ್ ಖರೀದಿಸುವಂತೆ ಭಾರತೀಯ ಜೀವವಿಮಾ ನಿಗಮಕ್ಕೆ ಸರ್ಕಾರ ದುಂಬಾಲು ಬಿದ್ದಿದೆ. ಪಾಲಿಸಿದಾರರು ಬ್ಯಾಂಕ್ ನಷ್ಟ, ಅನುತ್ಪಾದಕ ಸಾಲ ಹಾಗೂ ಮನ್ನಾ ಮಾಡಿದ ಸಾಲಕ್ಕೆ ಪಾವತಿಸಿದರೆ, ಸರ್ಕಾರ ಬಂಡವಾಳ ಹಿಂದೆಗೆತದ ಮೂಲಕ ಈ ವ್ಯವಹಾರ ಕುದುರಿಸಿ ಲಾಭ ಮಾಡಲು ಹೊರಟಿದೆ ಎಂದು ಆಪಾದಿಸಿದರು.

ದೇಶದಲ್ಲಿ ವಿತ್ತೀಯ ಅರಾಜಕತೆಗೆ ಸ್ವತಃ ಮೋದಿಯವರೇ ನೇತೃತ್ವ ವಹಿಸಿದ್ದಾರೆ. ಆರ್‌ಬಿಐ ಹಾಗೂ ಸಿಬಿಐಗೆ ಈ ವಂಚನೆಗಳ ಬಗ್ಗೆ ಅರಿವಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ಷೇಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News