ಬಿಹಾರದಲ್ಲಿ ಲೋಕಸಭೆಗೆ ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸಲು ಮುಕ್ತ: ಜೆಡಿಯು

Update: 2018-06-26 04:25 GMT
ಸಂಜಯ್ ಸಿಂಗ್

ಪಾಟ್ನಾ, ಜೂ.26: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಹಾರದಲ್ಲಿ ಎನ್‌ಡಿಎ ಮಿತ್ರ ಪಕ್ಷಗಳ ಪೈಕಿ ತಮ್ಮ ಪಕ್ಷ ಅತ್ಯಧಿಕ ಸ್ಥಾನಗಳಿಗೆ ಸ್ಪರ್ಧಿಸುವುದು ಖಚಿತ ಎಂದು ಸಂಯುಕ್ತ ಜನತಾದಳ(ಜೆಡಿಯು) ಘೋಷಿಸಿದೆ. ಬಿಜೆಪಿಗೆ ಮಿತ್ರಪಕ್ಷಗಳು ಬೇಕಿಲ್ಲ ಎನಿಸಿದರೆ, ಲೋಕಸಭೆಗೆ ಏಕಾಂಗಿಯಾಗಿ ಸ್ಪರ್ಧಿಸಲು ಆ ಪಕ್ಷಕ್ಕೆ ಮುಕ್ತ ಅವಕಾಶವಿದೆ ಎಂದು ಹೇಳುವ ಮೂಲಕ ಜೆಡಿಯು ತನ್ನ ಮಿತ್ರಪಕ್ಷಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದೆ.

ರಾಜ್ಯದ 40 ಲೋಕಸಭಾ ಕ್ಷೇತ್ರಗಳ ಪೈಕಿ ಯಾವ ಪಕ್ಷ ಎಷ್ಟು ಸ್ಥಾನಗಳಿಗೆ ಸ್ಪರ್ಧಿಸಬೇಕು ಎಂಬ ವಿವಾದ ಇತ್ಯರ್ಥವಾಗದ ಹಿನ್ನೆಲೆಯಲ್ಲಿ ಜೆಡಿಯು ಹೇಳಿಕೆ ವಿಶೇಷ ಮಹತ್ವ ಪಡೆದಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ 22 ಸ್ಥಾನಗಳನ್ನು ಗೆದ್ದಿದ್ದರೆ, ಇತರ ಒಂಬತ್ತು ಸ್ಥಾನಗಳು ಮಿತ್ರಪಕ್ಷಗಳ ಪಾಲಾಗಿದ್ದವು. ವಿರೋಧಿ ಬಣದಲ್ಲಿದ್ದ ಜೆಡಿಯು ಕೇವಲ ಎರಡು ಸ್ಥಾನಗಳಿಗೆ ತೃಪ್ತಿಪಟ್ಟಿತ್ತು. ಇದರಿಂದ ಈ ಬಾರಿ ಜೆಡಿಯುಗೆ ಹೆಚ್ಚು ಸ್ಥಾನಗಳನ್ನು ಬಿಟ್ಟುಕೊಡುವ ಸ್ಥಿತಿಯಲ್ಲಿ ಬಿಜೆಪಿ ಇಲ್ಲ.

"2014ರ ಪರಿಸ್ಥಿತಿಯೇ ಬೇರೆ. ಆದರೆ 2019ರಲ್ಲಿ ಆಟದ ಚೆಂಡು ಬದಲಾಗಲಿದೆ" ಎಂದು ಜೆಡಿಯು ಪ್ರಧಾನ ಕಾರ್ಯದರ್ಶಿ ಸಂಜಯ್ ಸಿಂಗ್ ಹೇಳಿದ್ದಾರೆ.

"ನಿತೀಶ್ ಅವರ ಬೆಂಬಲವಿಲ್ಲದೇ ಬಿಹಾರದಲ್ಲಿ ಗೆಲ್ಲಲಾಗದು ಎನ್ನುವ ವಾಸ್ತವ ಬಿಜೆಪಿಗೆ ಅರಿವಿದೆ. ನಿಮಗೆ ಮಿತ್ರ ಪಕ್ಷ ಬೇಕಿಲ್ಲ ಎಂದಾದರೆ, ಎಲ್ಲ 40 ಸ್ಥಾನಗಳಿಗೆ ಸ್ಪರ್ಧಿಸಲು ಬಿಜೆಪಿಗೆ ಮುಕ್ತ ಅವಕಾಶವಿದೆ" ಎಂದು ಸ್ಪಷ್ಟಪಡಿಸಿದ್ದಾರೆ. ಸ್ಥಾನ ಹಂಚಿಕೆ ವಿಷಯದ ಬಗ್ಗೆ ಬಿಜೆಪಿ ಮುಖಂಡರು ಅನಗತ್ಯ ಹೇಳಿಕೆ ನೀಡುವುದು ನಿಲ್ಲಿಸಬೇಕು ಎಂದೂ ಅವರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News