ಹನೂರು: ಚೆಸ್ಕಾಂ ಕಚೇರಿಯಲ್ಲಿ ಜನ ಸಂಪರ್ಕ ಸಭೆ

Update: 2018-06-26 11:39 GMT

ಹನೂರು,ಜೂ.26: ಕಳೆದ ಜನಸಂಪರ್ಕ ಸಭೆಗಳಲ್ಲಿ ನೀಡಿದ್ದ ಅಹವಾಲುಗಳಲ್ಲಿ ಬಹತೇಕ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಚೆಸ್ಕಾಂ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ರೈತರು ಮತ್ತು ಸಾರ್ವಜನಿಕರು ಆರೋಪಿಸಿದರು.

ಮಂಗಳವಾರ ಬೆಳಿಗ್ಗೆ ಮೈಸೂರು ಅಧೀಕ್ಷಕ ಎಂಜಿನಿಯರ್ ಪ್ರತೀಪ್ ಅವರ ಸಮ್ಮುಖದಲ್ಲಿ ನಡೆದ ಸಾರ್ವಜನಿಕ ಸಂಪರ್ಕ ಸಭೆಯಲ್ಲಿ ರೈತ ಮುಖಂಡರು, 'ಕಳೆದ ಬಾರಿ ನೀಡಿದ ಅಹವಾಲುಗಳ ಪೈಕಿ ಯಾವ ಸಮಸ್ಯೆಯನ್ನು ಬಗೆಹರಿಸಿದ್ದೀರಿ ? ಚೆಸ್ಕಾಂ ಅಧಿಕಾರಿಗಳು ಮತ್ತು ಗುತ್ತಿಗೆದಾರರು ರೈತರ ಬಳಿ ಹಣ ವಸೂಲಾತಿ ಬಗ್ಗೆ ಹಲವು ಸಭೆಗಳಲ್ಲಿ ತಮಗೆ ತಿಳಿಸಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಅದರ ಬಗ್ಗೆ ಯಾವ ಕ್ರಮಗಳನ್ನು ಕೈಗೊಂಡಿದ್ದೀರಾ ಎಂದು ಪ್ರಶ್ನಿಸಿದರು. ವಿದ್ಯುತ್ ಕಂಬಗಳು ಮತ್ತು ಟ್ರಾನ್ಸ್ ಪಾರ್ಮರ್ ಗಳನ್ನು ರೈತರು ತಮ್ಮ ಜಮೀನಿಗಳಿಗೆ ತೆಗೆದುಕೊಂಡು ಹೋಗಲು ಸಾಗಾಣೆ ವೆಚ್ಚವನ್ನು ಭರಿಸಬೇಕಾ ಎಂಬುದನ್ನು ಸಭೆಯಲ್ಲಿಯೇ ಸ್ಪಷ್ಟಪಡಿಸಿ ಎಂದು ಪಟ್ಟು ಹಿಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮೈಸೂರು ಅಧೀಕ್ಷಕ ಇಂಜಿನಿಯರ್ ಪ್ರತೀಪ್, ಅಧಿಕಾರಿಗಳು ಹಣವನ್ನು ಕೇಳಿದ ಸಂದರ್ಭದಲ್ಲಿ ಕೂಡಲೇ ದೂರವಾಣಿ ಮುಖಾಂತರ ನನಗೆ ಮಾಹಿತಿ ನೀಡಿ. ತಕ್ಷಣವೇ ಮುಂದಿನ ಕ್ರಮ ಕೈಗೂಳ್ಳಲಾಗುವುದು ಮತ್ತು ಸಾರ್ವಜನಿಕರಿಂದ ಬಂದತಹ ಅಹವಾಲುಗಳನ್ನು ಮುಂದಿನ ಜನ ಸಂಪರ್ಕ ಸಭೆಗೂ ಮುಂಚೆ ಬಗೆಹರಿಸುವುದಾಗಿ ಭರವಸೆ ನೀಡಿದರು. ಹನೂರು ವಿಶಾಲತೆಯಲ್ಲಿ ದೊಡ್ಡದಾಗಿರುವುದರಿಂದ ಸಮಸ್ಯೆಗಳನ್ನು ಚರ್ಚಿಸಲು ಒಂದು ತಾಸು ಸಾಕಾಗುವುದಿಲ್ಲ. ಮುಂದಿನ ಸಭೆಯಿಂದ ಮೂರು ತಾಸುಗಳಾದರೂ ಸಭೆಗೆ ಮೀಸಲಿಡಿ ಎಂದು ಮನವಿ ಸಲ್ಲಿಸಿದ್ದನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಸಮಯವನ್ನು ನಿಗಧಿಪಡಿಸಿ ಸಭೆಯನ್ನು ನಡೆಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಎಇಇ ಗಳಾದ ಪ್ರದೀಪ್, ಅನಿಲ್ ಜೆ.ಇ ಮಹೇಶ್ ಭಾಸ್ಕರ್ ರೈತ ಮುಖಂಡರಾದ ರಾಜಣ್ಣ , ಕಿಸಾನ್ ಸಂಘದ ಅಧ್ಯಕ್ಷ ರಾಜಣ್ಣ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಅಧ್ಯಕ್ಷ ವಿನೋದ್, ಪಾಪ್ಪಣ್ಣಿ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News