ರಾಜ್ಯ ಸರಕಾರವನ್ನು ಅಸ್ಥಿರಗೊಳಿಸಲ್ಲ: ಯಡಿಯೂರಪ್ಪ

Update: 2018-06-26 13:19 GMT

ಬೆಂಗಳೂರು, ಜೂ.26: ರಾಜ್ಯ ಸರಕಾರವನ್ನು ಯಾವುದೇ ಕಾರಣಕ್ಕೂ ಅಸ್ಥಿರಗೊಳಿಸುವ ಪ್ರಯತ್ನಕ್ಕೆ ನಾವು ಕೈ ಹಾಕುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಣೆ ನೀಡಿದ್ದಾರೆ.

ಮಂಗಳವಾರ ಗುಜರಾತ್‌ನ ಅಹಮದಾಬಾದ್‌ನಿಂದ ಬೆಂಗಳೂರಿಗೆ ಹಿಂದಿರುಗಿದ ಬಳಿಕ ಡಾಲರ್ಸ್‌ ಕಾಲನಿಯಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೂ.29ರಂದು ನಡೆಯುವ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ಶಾರನ್ನು ಆಹ್ವಾನಿಸಲು ಅಹಮದಾಬಾದ್‌ಗೆ ತೆರಳಿದ್ದೇನೆಯೇ ಹೊರತು, ಈ ಭೇಟೆ ವೇಳೆ ಬೇರೆ ಯಾವುದೇ ರಾಜಕೀಯ ವಿಷಯಗಳ ಕುರಿತು ಚರ್ಚೆ ನಡೆಸಿಲ್ಲ ಎಂದರು.

ಸಮ್ಮಿಶ್ರ ಸರಕಾರದ ಎರಡು ಪಕ್ಷಗಳು ತಾವಾಗಿಯೇ ಕಚ್ಚಾಡಿಕೊಂಡು ಸರಕಾರವನ್ನು ಪತನಗೊಳಿಸುವ ಹಾದಿಯಲ್ಲಿರುವಾಗ, ನಾವೇಕೆ ಪ್ರಯತ್ನ ಮಾಡೋಣ. ಮೌನವಾಗಿ ಈ ಎಲ್ಲ ಬೆಳವಣಿಗೆಗಳನ್ನು ವೀಕ್ಷಿಸುತ್ತೇವೆಯೇ ಹೊರತು, ಸರಕಾರವನ್ನು ಬೀಳಿಸುವ ಪ್ರಯತ್ನಕ್ಕೆ ಮುಂದಾಗುವುದಿಲ್ಲ ಎಂದು ಯಡಿಯೂರಪ್ಪ ಹೇಳಿದರು.

ಜೂ.29ರಂದು ನಡೆಯುವ ಕಾರ್ಯಕಾರಿಣಿ ಸಭೆಯಲ್ಲಿ ವಿಧಾನಪರಿಷತ್ ಪ್ರತಿಪಕ್ಷ ನಾಯಕನ ಆಯ್ಕೆ, 2019ರ ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಕೈಗೊಳ್ಳಬೇಕಾದ ಸಿದ್ಧತೆಗಳು ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚಿಸಿ ನಿರ್ಧಾರಗಳನ್ನು ಕೈಗೊಳ್ಳುತ್ತೇವೆ ಎಂದು ಅವರು ತಿಳಿಸಿದರು.

ರಾಜ್ಯ ಸರಕಾರವು ಜು.2ರಿಂದ ವಿಧಾನಮಂಡಲದ ಅಧಿವೇಶನವನ್ನು ಕರೆದಿದೆ. ಆದರೆ, ಈವರೆಗೆ ಅಧಿವೇಶನ ಸಂಬಂಧ ಅಧಿಸೂಚನೆಯನ್ನೆ ಹೊರಡಿಸಿಲ್ಲ. ಶಾಸಕರಿಗೆ ಅಧಿವೇಶನ ಕುರಿತು ಮಾಹಿತಿಯನ್ನು ನೀಡಿಲ್ಲ ಎಂದು ಯಡಿಯೂರಪ್ಪ ಬೇಸರ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News