ರೈಲ್ವೆಯ ಎಸಿ ಪ್ರಯಾಣಿಕರ ಬ್ಲಾಂಕೆಟ್‌ಗಳಿಗೆ ಈಗ ತಿಂಗಳಿಗೆರಡು ಬಾರಿ ಶುಚಿಯಾಗುವ ಭಾಗ್ಯ

Update: 2018-06-26 15:06 GMT

ಹೊಸದಿಲ್ಲಿ,ಜೂ.26: ರೈಲುಗಳಲ್ಲಿ ಎಸಿ ಬೋಗಿಗಳಲ್ಲಿ ಪ್ರಯಾಣಿಕರಿಗೆ ನೀಡಲಾಗುತ್ತಿರುವ ಬ್ಲಾಂಕೆಟ್‌ಗಳನ್ನು ಇನ್ನು ಮುಂದೆ ತಿಂಗಳಿಗೆ ಎರಡು ಬಾರಿ ತೊಳೆಯಲಾಗುತ್ತದೆ. ಈವರೆಗೆ ಇವುಗಳನ್ನು ಎರಡು ತಿಂಗಳಿಗೊಮ್ಮೆ ತೊಳೆಯಲಾಗುತ್ತಿತ್ತು. ಅಲ್ಲದೆ ಹಾಲಿ ಬ್ಲಾಂಕೆಟ್‌ಗಳನ್ನು ತೊಳೆಯಲು ಸುಲಭವಾಗುವ ಬ್ಲಾಂಕೆಟ್‌ಗಳಿಗೆ ಬದಲಿಸಲಾಗುವುದು.

ತಿಂಗಳಿಗೊಮ್ಮೆ ತೊಳೆಯುವದರಿಂದ ಈ ಬ್ಲಾಂಕೆಟ್‌ಗಳ ಜೀವಿತಾವಧಿ ಈಗಿನ ನಾಲ್ಕು ವರ್ಷಗಳಿಂದ ಎರಡು ವರ್ಷಗಳಿಗೆ ತಗ್ಗಲಿದೆ. ಇದೇ ವೇಳೆ ಬಳಕೆಯ ಶುಲ್ಕ ದುಪ್ಪಟ್ಟಾಗುವ ನಿರೀಕ್ಷೆಯಿದೆ.

 ನೂತನ ಬ್ಲಾಂಕೆಟ್‌ಗಳು ಉಣ್ಣೆ ಮತ್ತು ನೈಲಾನ್‌ಗಳ ಮಿಶ್ರಣವನ್ನು ಹೊಂದಿರಲಿದೆ. ತನ್ಮೂಲಕ ವಾಸನೆ ಹೊಡೆಯುತ್ತಿದ್ದ ಬ್ಲಾಂಕೆಟ್‌ಗಳು ಗತಕಾಲದ ವಿಷಯಗಳಾಗಲಿವೆ.

ಹಾಲಿ ಬಳಕೆಯಲ್ಲಿರುವ ಉಣ್ಣೆಯ ದಪ್ಪ ಬ್ಲಾಂಕೆಟ್‌ಗಳಿಗೆ ತಲಾ 400 ರೂ.ವೆಚ್ಚವಾಗುತ್ತಿದ್ದು, ಹೊಸ ಬ್ಲಾಂಕೆಟ್‌ಗಳಿಗೆ ಶೀಘ್ರವೇ ದರ ನಿಗದಿಗೊಳಿಸಲಾಗುವುದು ಎಂದು ರೈಲ್ವೆ ಸಚಿವಾಲಯದ ಹಿರಿಯ ಅಧಿಕಾರಿಯೋರ್ವರು ತಿಳಿಸಿದರು. ಬ್ಲಾಂಕೆಟ್‌ಗಳ ಬಳಕೆ ಶುಲ್ಕವನ್ನು ಕಳೆದ ಹತ್ತು ವರ್ಷಗಳಿಂದ ಪರಿಷ್ಕರಿಸಲಾಗಿರಲಿಲ್ಲ.

ದೇಶಾದ್ಯಂತ ತನ್ನ ಎಸಿ ದರ್ಜೆಯ ಪ್ರಯಾಣಿಕರಿಗಾಗಿ ರೈಲ್ವೆಗೆ ಪ್ರತಿನಿತ್ಯ ಸುಮಾರು 3.90 ಲಕ್ಷ ಬ್ಲಾಂಕೆಟ್‌ಗಳ ಅಗತ್ಯವಿದೆ. ಎಸಿ ಮೊದಲ ದರ್ಜೆಯ ಪ್ರಯಾಣಿಕರಿಗೆ ಪ್ರತಿ ಬಳಕೆಯ ನಂತರ ಬ್ಲಾಂಕೆಟ್‌ನ ಕವರ್ ಅನ್ನು ಬದಲಿಸಿ ನೀಡಲಾಗುತ್ತಿದ್ದರೆ,ಎಸಿ ಎರಡು ಮತ್ತು ಮೂರನೇ ದರ್ಜೆ ಪ್ರಯಾಣಿಕರಿಗೆ ಈ ಸೌಲಭ್ಯವಿಲ್ಲ.

ಲಭ್ಯ ಸಾಮರ್ಥ್ಯ ಮತ್ತು ಸಿಬ್ಬಂದಿ ವ್ಯವಸ್ಥೆಗೊಳಪಟ್ಟು ಬ್ಲಾಂಕೆಟ್‌ಗಳನ್ನು ಆದ್ಯತೆಯಲ್ಲಿ ತಿಂಗಳಿಗೆರಡು ಬಾರಿ ಶುಚಿಗೊಳಿಸಬೇಕು. ಸಾಮರ್ಥ್ಯ ಕೊರತೆಯಿದ್ದ ಸಂದರ್ಭದಲ್ಲಿ ತಿಂಗಳಿಗೆ ಕನಿಷ್ಠ ಒಂದು ಬಾರಿಯಾದರೂ ಅವುಗಳನ್ನು ಶುಚಿಗೊಳಿಸಬೇಕು ಎಂದು ರೈಲ್ವೆಯು ತನ್ನ ಎಲ್ಲ ವಲಯ ಕಚೇರಿಗಳಿಗೆ ನೀಡಿರುವ ಆದೇಶದಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News