ಮಧ್ಯಂತರ ತಡೆಯಾಜ್ಞೆ ತೆರವುಗೊಳಿಸಿದ ಹೈಕೋರ್ಟ್

Update: 2018-06-26 16:27 GMT

ಬೆಂಗಳೂರು, ಜೂ.26: ಶಿಕ್ಷಣ ಹಕ್ಕು ಕಾಯ್ದೆ(ಆರ್‌ಟಿಇ) ಅಡಿ ಭಾಷಾ ಅಲ್ಪಸಂಖ್ಯಾತ ಖಾಸಗಿ ಶಾಲೆಗಳು ಕಡ್ಡಾಯವಾಗಿ ಶೇ.25 ಪ್ರವೇಶ ನೀಡುವುದಕ್ಕೆ ಈ ಹಿಂದೆ ನೀಡಲಾಗಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಹೈಕೋರ್ಟ್ ಮಂಗಳವಾರ ತೆರವುಗೊಳಿಸಿದೆ.

ಅಲ್ಪಸಂಖ್ಯಾತ ಮಾನ್ಯತೆ ನೀಡುವಂತೆ ಕೋರಿ ಸಲ್ಲಿಸಿದ್ದ ಮನವಿ ತಿರಸ್ಕರಿಸಿದ್ದ ರಾಷ್ಟ್ರೀಯ ಭಾಷಾ ಮತ್ತು ಧಾರ್ಮಿಕ ಅಲ್ಪಸಂಖ್ಯಾತ ಆಯೋಗದ ಕ್ರಮ ಪ್ರಶ್ನಿಸಿ, ನಗರದ ಸುದರ್ಶನ ವಿದ್ಯಾಮಂದಿರ ಸೇರಿ 10ಕ್ಕೂ ಅಧಿಕ ಭಾಷಾ ಅಲ್ಪಸಂಖ್ಯಾತ ಖಾಸಗಿ ಶಾಲೆಗಳು ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರಿದ್ದ ಪೀಠದಲ್ಲಿ ಮಂಗಳವಾರ ನಡೆಯಿತು.

ಈ ವೇಳೆ ನ್ಯಾಯಪೀಠ, ಅರ್ಜಿದಾರ ಶಾಲೆಗಳಿಗೆ ಅಲ್ಪಸಂಖ್ಯಾತ ಮಾನ್ಯತೆ ನೀಡಲು ನಿರಾಕರಿಸಿರುವ ಆಯೋಗದ ಕ್ರಮದ ಬಗ್ಗೆ ನಿಧಾನವಾಗಿ ವಿಚಾರಣೆ ನಡೆಸೋಣ. ಈ ಶಾಲೆಗಳು ಅಲ್ಪಸಂಖ್ಯಾತ ಮಾನ್ಯತೆ ಹೊಂದಿದೆಯೇ, ಇಲ್ಲವೇ ಎಂಬುದು ಇನ್ನೂ ನಿರ್ಧಾರವಾಗಬೇಕಿದೆ. ಹೀಗಾಗಿ ಆರ್‌ಟಿಇ ಕಾಯ್ದೆಯಡಿ ಶೇ. 25 ಪ್ರವೇಶ ಕಲ್ಪಿಸಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿ ಈ ಹಿಂದೆ ನೀಡಲಾಗಿದ್ದ ತಡೆಯಾಜ್ಞೆ ತೆರವುಗೊಳಿಸಿತು.

ಪ್ರಕರಣವೇನು: ಆರ್‌ಟಿಇ ಕಾಯ್ದೆಯಡಿ ಮಕ್ಕಳಿಗೆ ಶೇ. 25 ಪ್ರವೇಶ ನೀಡುವಂತೆ ಸರಕಾರ ಹೊರಡಿಸಿದ್ದ ಅಧಿಸೂಚನೆ ಪ್ರಶ್ನಿಸಿ ಈ ಹಿಂದೆ ಹಲವು ಖಾಸಗಿ ಶಾಲೆಗಳು ಹೈಕೋರ್ಟ್ ಮೆಟ್ಟಿಲೇರಿದ್ದವು. ಈ ಅರ್ಜಿಗಳ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಲ್.ನಾರಾಯಣ ಸ್ವಾಮಿ ಅವರಿದ್ದ ಪೀಠ, ಸರಕಾರದ ಅಧಿಸೂಚನೆ ಅನ್ವಯ ಆರ್‌ಟಿಇ ಅಡಿ ಶೇ.25ರಷ್ಟು ಪ್ರವೇಶ ನೀಡುವಂತೆ ಶಾಲೆಗಳಿಗೆ ಸೂಚಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಶಾಲೆಗಳು, ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದವು. ಏಕಸದಸ್ಯ ನ್ಯಾಯಪೀಠದ ಆದೇಶಕ್ಕೆ ತಡೆ ನೀಡಿದ್ದ ವಿಭಾಗೀಯ ಪೀಠ, ಅರ್ಜಿದಾರ ಶಾಲೆಗಳು ಭಾಷಾ ಅಲ್ಪಸಂಖ್ಯಾತ ಶಾಲೆಗಳ ವ್ಯಾಪ್ತಿಗೆ ಬರುವುದೆ, ಇಲ್ಲವೆ ಎಂಬ ಕುರಿತು ರಾಷ್ಟ್ರೀಯ ಭಾಷಾ ಮತ್ತು ಧಾರ್ಮಿಕ ಅಲ್ಪಸಂಖ್ಯಾತ ಆಯೋಗದಿಂದ ಪ್ರಮಾಣ ಪತ್ರ ಪಡೆದುಕೊಂಡು ಬರುವಂತೆ ನಿರ್ದೇಶಿಸಿತ್ತು.

ಅದರಂತೆ, ಆಯೋಗದ ಮುಂದೆ ಅಲ್ಪಸಂಖ್ಯಾತ ಮಾನ್ಯತೆ ಕೋರಿ ಶಾಲೆಗಳು ಅರ್ಜಿ ಸಲ್ಲಿಸಿದ್ದವು. ಆ ಅರ್ಜಿಗಳನ್ನು ತಿರಸ್ಕರಿಸಿದ್ದ ಆಯೋಗ, ‘ಅಲ್ಪಸಂಖ್ಯಾತ ಮಾನ್ಯತೆ ವಿಚಾರವನ್ನು ನಿರ್ಧರಿಸುವ ಅಧಿಕಾರ ತಮಗಿಲ್ಲ’ ಎಂದು ತಿಳಿಸಿತ್ತು.

ಈ ಆದೇಶವನ್ನು ಪ್ರಶ್ನಿಸಿ ಶಾಲೆಗಳು ಮತ್ತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದವು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಶಾಲೆಗಳ ಮನವಿ ಮೇರೆಗೆ ಆರ್‌ಟಿಇ ಅಡಿ ಶೇ.25ರಷ್ಟು ಪ್ರವೇಶ ನೀಡುವುದಕ್ಕೆ ಏಕಸದಸ್ಯ ಪೀಠ ತಡೆಯಾಜ್ಞೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News