ಮಧ್ಯಮ ಸ್ವಚ್ಛ ನಗರಗಳಲ್ಲಿ ಮೈಸೂರಿಗೆ ಪ್ರಥಮ ಸ್ಥಾನ

Update: 2018-06-26 16:43 GMT

ಮೈಸೂರು, ಜೂ.26: ನಮ್ಮ ಸಾಂಸ್ಕೃತಿಕ ನಗರಿಗೆ ಸ್ವಚ್ಛತೆ ವಿಚಾರದಲ್ಲಿ ದೇಶದ ಮಧ್ಯಮ ನಗರಗಳ ಪೈಕಿ ಪ್ರಥಮ ಸ್ಥಾನ ಲಭಿಸಿರುವುದು ಸಂತಸ ತಂದಿದೆ. ಈ ಪ್ರಶಸ್ತಿ ಪೌರಕಾರ್ಮಿಕರಿಗೆ ಸಲ್ಲಬೇಕು ಎಂದು ಮಹಾಪೌರರಾದ ಬಿ.ಭಾಗ್ಯವತಿ ತಿಳಿಸಿದರು.

ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, 2018-19ರ ಸಾಲಿನ ಸ್ವಚ್ಛ ಸರ್ವೇಕ್ಷಣ ಪ್ರಕ್ರಿಯೆಯಲ್ಲಿ 3 ರಿಂದ 10 ಲಕ್ಷ ಜನಸಂಖ್ಯೆಯ ನಗರಗಳ ಪಟ್ಟಿಯಲ್ಲಿ ದೇಶದ ಪ್ರಥಮ ಸ್ವಚ್ಛ ನಗರ ಗೌರವಕ್ಕೆ ಮೈಸೂರು ಪಾತ್ರವಾಗಿದ್ದು, ಜೂ.23 ರಂದು ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಗಾಂಧಿ ಪುತ್ಥಳಿ, ಪ್ರಶಸ್ತಿ ಸ್ವೀಕರಿಸಿದ ಸಂಭ್ರಮವನ್ನು ಹಂಚಿಕೊಂಡರು.

ಪೌರಕಾರ್ಮಿಕರು ಮತ್ತು ಅಧಿಕಾರಿಗಳ ಶ್ರಮವಿಲ್ಲದಿದ್ದರೆ ಈ ಪ್ರಶಸ್ತಿ ಮೈಸೂರಿಗೆ ದೊರೆಯಲು ಸಾಧ್ಯವಿರಲಿಲ್ಲ. ಅವರೆಲ್ಲರ ಪರಿಶ್ರಮದಿಂದಾಗಿಯೇ ಮಧ್ಯಮ ಶ್ರೇಣಿ ನಗರಗಳಲ್ಲಿ ಸ್ವಚ್ಛ ನಗರಿ ಪ್ರಶಸ್ತಿಯನ್ನು ಪಡೆಯಲು ಸಾಧ್ಯವಾಗಿದೆ ಎಂದು ಭಾಗ್ಯವತಿ ಹರ್ಷ ವ್ಯಕ್ತಪಡಿಸಿದರು. ಒಂದೊಮ್ಮೆ ಸಾರ್ವಜನಿಕರ ಪ್ರತಿ ಸ್ಪಂದನೆ ವಿಭಾಗದಲ್ಲಿಯೂ ಇನ್ನೂ ಹೆಚ್ಚಿನ ಅಂಕಗಳನ್ನು ಪಡೆಯಲು ಸಾಧ್ಯವಾಗಿದ್ದರೆ ಮೊದಲ ಸಾಲಿನ ನಗರಗಳ ಪಟ್ಟಿಯಲ್ಲಿಯೂ ಪ್ರಶಸ್ತಿಗಳಿಸಬಹುದಿತ್ತು. ಆದರೆ, 8ನೇ ಸ್ಥಾನಕ್ಕೆ ಕುಸಿದಿರುವುದು ಬೇಸರ ತಂದಿದೆ ಎಂದರು.

ನಂತರ ಮಾತನಾಡಿದ ಪಾಲಿಕೆ ಆಯುಕ್ತ ಜಗದೀಶ್, ಹಿಂದಿನ ವರ್ಷದ ಸಮೀಕ್ಷೆಗಿಂತಲೂ ಈ ಬಾರಿ ಹೆಚ್ಚು ಅಂಕಗಳನ್ನು ಗಳಿಸಿದ್ದೇವೆ. ಆದರೆ, ಸ್ವಚ್ಛ ಭಾರತ್ ಮಿಷನ್ ಪ್ರತಿವರ್ಷವೂ ಮಾನದಂಡ ಬದಲಿಸುತ್ತಿರುವುದರಿಂದ ತೊಂದರೆಯಾಗಿದೆ ಎಂದು ವಿಷಾದಿಸಿದರು.

ಪ್ರತಿದಿನವೂ ನಗರದ ಸ್ವಚ್ಛತೆ ಬಗ್ಗೆ ಯೋಚನೆ ಮಾಡಬೇಕಿದೆ. ಇದು ಪಾಲಿಕ ಕರ್ತವ್ಯ ಮಾತ್ರವಲ್ಲ. ಪ್ರತಿಯೊಬ್ಬ ನಾಗರೀಕರು ಕೈ ಜೋಡಿಸಿ ಸ್ವಚ್ಛ ಮೈಸೂರು ಮಾಡಬೇಕಿದೆ. ಎಲ್ಲರೂ ಜತೆಗೂಡಿ ಮೈಸೂರು ನಗರವನ್ನು ಮತ್ತೆ ದೇಶದ ಮೊದಲ ಸ್ವಚ್ಛ ನಗರವನ್ನಾಗಿಸಲು ಶ್ರಮಿಸಬೇಕಿದೆ ಎಂದರು.

ಮೈಸೂರು ನಗರ ದೇಶದ ಮೊದಲ ಮಧ್ಯಮ ಸ್ವಚ್ಛ ನಗರಿಗೆ ಭಾಜವಾಗಿರುವುದು ಹೆಮ್ಮೆಯ ವಿಚಾರ ಎಂದು ಮಾಜಿ ಮಹಾಪೌರ ಬಿ.ಎಲ್.ಭೈರಪ್ಪ ಹರ್ಷ ವ್ಯಕ್ತಪಡಿಸಿದರು.

ಸಮೀಕ್ಷೆ ವೇಳೆಯಲ್ಲಷ್ಟೇ ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳದೇ ಸದಾ ಸ್ವಚ್ಛತೆ ಕಾಪಾಡಿಕೊಳ್ಳಬೇಕಿದೆ ಎಂದು ಉಪ ಮಹಾಪೌರರಾದ ಇಂದಿರಾ ಮಹೇಶ್  ನೆನಪಿಸಿದರು. ಆಡಳಿತ ಪಕ್ಷದ ನಾಯಕ ವಿ.ಶೈಲೇಂದ್ರ, ಪ್ರತಿಪಕ್ಷ ನಾಯಕ ಶೌಕತ್ ಪಾಷ, ಪಾಲಿಕೆ ಬಿಜೆಪಿ ನಾಯಕ ಮಾ.ವಿ.ರಾಮಪ್ರಸಾದ್, ಸದಸ್ಯರಾದ ಅಶ್ವಿನಿ ಅನಂತು, ಸ್ನೇಕ್ ಶ್ಯಾಮ್, ಆರೋಗ್ಯಾಧಿಕಾರಿಗಳಾದ ಡಾ.ನಾಗರಾಜ್, ಡಾ.ರಾಮಚಂದ್ರ ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News