ಮೈಸೂರು ವಿ.ವಿಯ 120 ಬೋಧಕೇತರ ಸಿಬ್ಬಂದಿಯ ವಜಾಗೊಳಿಸುವಂತೆ ರಾಜ್ಯಾಪಾಲರ ಆದೇಶ

Update: 2018-06-26 16:47 GMT

ಮೈಸೂರು,ಜೂ.26: ಮೈಸೂರು ವಿಶ್ವವಿದ್ಯಾನಿಲಯಕ್ಕೆ ನಿಯಮ ಉಲ್ಲಂಘಿಸಿ ಅಕ್ರಮವಾಗಿ ನೇಮಕ ಮಾಡಿಕೊಂಡಿದ್ದ ಬೋಧಕೇತರ ಸಿಬ್ಬಂದಿಗಳನ್ನು ವಜಾಗೊಳಿಸುವಂತೆ ರಾಜ್ಯಪಾಲರು ಆದೇಶಿಸಿದ್ದಾರೆ.

ಈ ಸಂಬಂಧ ಸರ್ಕಾರದ ಕಾರ್ಯದರ್ಶಿಗಳು ಮೈಸೂರು ವಿ.ವಿ.ಗೆ ಪತ್ರ ಬರೆದಿದ್ದು, ಒಂದು ತಿಂಗಳೊಳಗೆ ವರದಿ ನೀಡುವಂತೆ ಸೂಚಿಸಿದ್ದಾರೆ.
ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಜೆಡಿಎಸ್ ಮುಖಂಡ ಪ್ರೊ.ಕೆ.ಎಸ್.ರಂಗಪ್ಪ ಕುಲಪತಿಗಳಾಗಿದ್ದ ವೇಳೆ ಡಿಸೆಂಬರ್, 2016 ರಲ್ಲಿ 120ಕ್ಕೂ ಹೆಚ್ಚು ಭೋಧಕೇತರ ಸಿಬ್ಬಂದಿಗಳನ್ನು ನಿಯಮ ಉಲ್ಲಂಘನೆ ಮಾಡಿ ನೇಮಕ ಮಾಡಿಕೊಂಡಿದ್ದರು ಎಂದು ರಾಜ್ಯಪಾಲರಿಗೆ ದೂರು ನೀಡಲಾಗಿತ್ತು. ಈ ಕುರಿತು ತನಿಖೆ ನಡೆಸಿದ ಅಧಿಕಾರಿಗಳು ಅಕ್ರಮ ನಡೆದಿರುವುದರ ಕುರಿತು ವರದಿ ನೀಡಿದ್ದರು. ನಿಯಮ ಉಲ್ಲಂಘನೆ ಮಾಡಿ ನೇಮಕಗೊಂಡಿರುವ ಸಿಬ್ಬಂದಿಗಳನ್ನು ವಜಾಗೊಳಿಸುವಂತೆ ರಾಜ್ಯಪಾಲರು ಆದೇಶಿಸಿದ್ದಾರೆ.

ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸಂಬಂಧಿಯಾಗಿದ್ದು, ಹಲವಾರು ಆರೋಪಗಳನ್ನು ಎದುರಿಸುತ್ತಿರುವ ಅವರಿಗೆ ಇದೀಗ ಮತ್ತೊಮ್ಮೆ ಸಂಕಷ್ಟ ಎದುರಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News