ಎಲ್ಲಾ ದಾನಗಳಿಗಿಂತ ವಿದ್ಯಾದಾನ ಸರ್ವಶ್ರೇಷ್ಠ: ಸಾಹಿತಿ ಬನ್ನೂರು ಕೆ.ರಾಜು

Update: 2018-06-26 16:52 GMT

ಮೈಸೂರು,ಜೂ.26: ಅನ್ನದಾನವೂ ಸೇರಿದಂತೆ ಜಗತ್ತಿನಲ್ಲಿ ಅನೇಕ ಬಗೆಯ ದಾನಗಳಿದ್ದರೂ, ಇವುಗಳಲ್ಲೆಲ್ಲಾ ಜ್ಞಾನ ಮಾರ್ಗದಲ್ಲಿ ಶಾಶ್ವತವಾದ ಸ್ವಾವಲಂಬಿ ಬದುಕನ್ನು ಕಟ್ಟಿಕೊಡುವ ವಿದ್ಯಾದಾನವೇ ಸರ್ವಶ್ರೇಷ್ಠವೆಂದು ಸಾಹಿತಿ ಬನ್ನೂರು ಕೆ. ರಾಜು ಅಭಿಪ್ರಾಯ ಪಟ್ಟರು.

ಪ್ರಸ್ತುತ ವರ್ಷ ನಡೆದ ಎಸೆಸೆಲ್ಸಿ ಪರೀಕ್ಷೆಯಲ್ಲಿ ನಾಲ್ಕು ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, ಇಪ್ಪತ್ತೆಂಟು ವಿದ್ಯಾರ್ಥಿಗಳು ಉನ್ನತಶ್ರೇಣಿ ಸೇರಿದಂತೆ ಒಟ್ಟಾರೆ ನೂರಕ್ಕೆ ನೂರು ಫಲಿತಾಂಶ ಪಡೆದಿರುವ ಹುಣಸೂರು ತಾಲೂಕಿನ ಮನುಗನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ಇದಕ್ಕೆ ಕಾರಣಕರ್ತರಾದ ಶಿಕ್ಷಕ ವರ್ಗವನ್ನು ಗೌರವಿಸಲು ಮೈಸೂರಿನ ಹಿರಣ್ಮಯಿ ಪ್ರತಿಷ್ಠಾನ ಮತ್ತು ಕಾವೇರಿ ಬಳಗ ಸಂಯುಕ್ತವಾಗಿ ಸದರಿ ಶಾಲೆಯಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಅನ್ನದಾನ ಒಂದು ಹೊತ್ತಿನ ಅಥವಾ ಒಂದು ದಿನದ ಹಸಿವನ್ನು ನೀಗಿಸಬಹುದು. ಆದರೆ ವಿದ್ಯಾದಾನ ಇಡೀ ಜೀವಮಾನದ ಹಸಿವನ್ನು ತಣಿಸುತ್ತದೆ. ತಾನೂ ಉಂಡು ಇತರರಿಗೂ ಕೊಡುವಷ್ಟು ಶಾಶ್ವತವಾದ ಸುಭದ್ರ ಜೀವನವನ್ನು ನಿರ್ಮಿಸಿಕೊಡುತ್ತದೆ. ಆದ್ದರಿಂದ ವಿದ್ಯಾದಾನಕ್ಕಿಂತ ಮಿಗಿಲು ಮತ್ತೊಂದಿಲ್ಲ. ಹಾಗೆಯೇ ಇಂತಹ ವಿದ್ಯಾದಾನ ಮಾಡುವ ಶಿಕ್ಷಕ ವೃತ್ತಿಗೆ ಸಮ ಇನ್ನೊಂದಿಲ್ಲ. ಆದರೆ ಇಂತಹ ಅತ್ಯಂತ ಶ್ರೇಷ್ಠವಾದ ವಿದ್ಯಾದಾನ ಮಾಡುವ ಶಿಕ್ಷಕ ವರ್ಗ ಮತ್ತು ಇದನ್ನು ಪಡೆದುಕೊಳ್ಳುವ ವಿದ್ಯಾರ್ಥಿ ವರ್ಗದ ಮಧ್ಯೆ ಪ್ರಾಮಾಣಿಕತೆ ಮತ್ತು ಪರಿಶ್ರಮವಿರಬೇಕು. ಆಗ ಮಾತ್ರ ಯಶಸ್ಸು ಲಭಿಸುತ್ತದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯಶಿಕ್ಷಕಿ ಸಿ.ಎಸ್. ಗೀತಾ, ವಿದ್ಯಾರ್ಥಿಗಳಿಗೆ ವಿನಯವೇ ಭೂಷಣ. ಇದೇ ಅವರ ಸಾಧನೆಗೆ ಮುಖ್ಯವಾದ ಮೆಟ್ಟಿಲು. ಅವರು ಎಷ್ಟೇ ಎತ್ತರಕ್ಕೆ ಏರಿದರೂ ವಿದ್ಯೆ ಕಲಿಸಿದ ಗುರುಗಳನ್ನು ಎಂದೂ ಮರೆಯಬಾರದು. ಪ್ರತಿಭಾ ಪುರಸ್ಕಾರ ಪಡೆಯುವುದು ದೊಡ್ಡದಲ್ಲ. ಅದನ್ನು ಇನ್ನಷ್ಟು ಅರಳಿಸಿಕೊಂಡು ಗುರು-ಹಿರಿಯರ ಮಾರ್ಗದರ್ಶನದಲ್ಲಿ ಮತ್ತಷ್ಟು ಪರಿಶ್ರಮ, ಶ್ರದ್ಧೆಯಿಂದ ಮತ್ತೆ ಮತ್ತೆ ಪ್ರತಿಭಾ ಪುರಸ್ಕಾರ ಪಡೆಯುವಂತೆ ಸಾಧಕರಾಗಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿ ತಮ್ಮ ಶಾಲೆಯ ಅದ್ಭುತ ಸಾಧನೆಗೆ ಸಹಕರಿಸಿದವರೆಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ವೇದಿಕೆಯಲ್ಲಿ ಅತ್ಯುನ್ನತ ದರ್ಜೆಯಲ್ಲಿ ತೇರ್ಗಡೆಯಾಗಿರುವ ವಿದ್ಯಾರ್ಥಿಗಳಾದ ಅಭಿಷೇಕ್, ಸಿ.ಆರ್. ಗಣೇಶ್, ಎ.ಜಿ. ನಿಸರ್ಗ, ಪಲ್ಲವಿ ಹಾಗೂ ಶಾಲೆಗೆ ನೂರಕ್ಕೆ ನೂರು ಫಲಿತಾಂಶ ಬರಲು ಪರಿಶ್ರಮವಹಿಸಿದ ಮುಖ್ಯ ಶಿಕ್ಷಕಿ ಸಿ.ಎಸ್. ಗೀತಾ ಹಾಗೂ ಶಿಕ್ಷಕಿಯರಾದ ಜೆ. ವಸಂತಕುಮಾರಿ, ಹೆಚ್. ಶಶಿಕಲಾ, ಬಿ.ಎನ್. ರೇಣುಕಾ, ಸಿ.ಎಸ್. ರಮ್ಯಾ, ಎಸ್.ಎಸ್. ಚಂದ್ರಕಲಾ, ಸೌಮ್ಯ ಅರವಿಂದ ನಾಯಕ್, ಹೆಚ್.ಸಿ. ಪಲ್ಲವಿ, ಚೇತನಾ ಹಾಗೂ ಪ್ರಥಮ ದರ್ಜೆ ಸಹಾಯಕ ಆರ್.ಜಿ. ರವೀಶ್ ಅವರುಗಳನ್ನು ಪ್ರತಿಷ್ಠಾನದಿಂದ ಅಭಿನಂದಿಸಿ ಸನ್ಮಾನಿಸಲಾಯಿತು. 

ವಿಶ್ರಾಂತ ಇಂಜಿನಿಯರ್ ಎಸ್. ಗೋವಿಂದೇಗೌಡ, ಪ್ರತಿಷ್ಠಾನದ ಅಧ್ಯಕ್ಷ ಎ. ಸಂಗಪ್ಪ, ಕಾವೇರಿ ಬಳಗದ ಎನ್.ಕೆ. ಕಾವೇರಿಯಮ್ಮ, ಓರಿಗಾಮಿ ಕಲಾವಿದ ಹೆಚ್.ವಿ. ಮುರಳೀಧರ್ ಮತ್ತು ತಮ್ಮ ಮಕ್ಕಳಾದ ಸೌಂದರ್ಯ ಮತ್ತು ಸೌಮ್ಯ ಅವರ ನೆನಪಿನಲ್ಲಿ ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿಗಳನ್ನು ನೀಡಿದ ದಾನಿ ಮಹೇಶ್ ಮುಂತಾದವರು ಉಪಸ್ಥಿತರಿದ್ದರು. ಕನ್ನಡ ಶಿಕ್ಷಕಿ ವಸಂತಕುಮಾರಿ ಸ್ವಾಗತಿಸಿದರೆ ದೈಹಿಕ ಶಿಕ್ಷಣ ಶಿಕ್ಷಕಿ ಚಂದ್ರಕಲಾ ವಂದಿಸಿದರು. ಮತ್ತೋರ್ವ ಶಿಕ್ಷಕಿ ಶಶಿಕಲಾ ಕಾರ್ಯಕ್ರಮ ನಿರೂಪಣೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News