ಘೋಷಿತ ತುರ್ತು ಪರಿಸ್ಥಿತಿಯಿಂದ ಅಘೋಷಿತ ತುರ್ತು ಪರಿಸ್ಥಿತಿಯೆಡೆಗೆ

Update: 2018-06-27 04:31 GMT

ದೇಶ ಇಂದಿರಾಗಾಂಧಿಯ ಕಾಲದ ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ನೆನಪಿಸಿಕೊಳ್ಳುತ್ತಿದೆ. ಆ ಸಂದರ್ಭವನ್ನು ನೆನಪಿಸಿಕೊಳ್ಳುವ ಉದ್ದೇಶವೇ, ಪ್ರಜಾಸತ್ತೆಯ ಮಹತ್ವವನ್ನು ಎತ್ತಿ ಹಿಡಿಯುವುದು. ಈ ದೇಶ ಮತ್ತೊಮ್ಮೆ ಅಂತಹ ಸ್ಥಿತಿಗೆ ಮರಳಬಾರದು ಎನ್ನುವ ಎಚ್ಚರಿಕೆಯನ್ನು ನಮ್ಮದಾಗಿಸಿಕೊಳ್ಳಲು ತುರ್ತು ಪರಿಸ್ಥಿತಿ ಹೇರಿದ ದಿನವನ್ನು ಪ್ರತಿ ವರ್ಷ ನಾವು ಸ್ಮರಿಸಿಕೊಳ್ಳಬೇಕು. ಸರ್ವಾಧಿಕಾರಿಗಳು ನಮ್ಮದೇ ಜನರಾಗಿದ್ದರೂ ಅದನ್ನು ಸಹಿಸಲಾಗದು. ‘ಕತ್ತಿ ವಿದೇಶದ್ದಾದರೇನು? ಸ್ವದೇಶದ್ದಾದರೇನು?’ ಎಂದು ಹಿರಿಯ ಕವಿಯೊಬ್ಬರು ತಮ್ಮ ಕವಿತೆಯಲ್ಲಿ ಪ್ರಸ್ತಾಪಿಸುತ್ತಾರೆ. ಈ ದೇಶವನ್ನು ತುರ್ತು ಪರಿಸ್ಥಿತಿಗೆ ತಳ್ಳಲು ಕಾರಣವಾದ ಸಂಗತಿಗಳು, ಆ ಸಂದರ್ಭದಲ್ಲಿ ನಡೆದ ಅನಾಹುತಗಳನ್ನು ನಾವು ಮೆಲುಕು ಹಾಕುತ್ತಾ ಆಮೂಲಕ ಪ್ರಜಾಸತ್ತೆಯನ್ನು ಇನ್ನಷ್ಟು ಸಬಲಗೊಳಿಸುವ ಕಡೆಗೆ ನಾವು ಹೆಜ್ಜೆಯಿಡಬೇಕು. ಬರೇ ರಾಜಕೀಯ ಕಾರಣಗಳಿಗಾಗಿ, ಒಂದು ನಿರ್ದಿಷ್ಟ ಪಕ್ಷವನ್ನು ಟೀಕಿಸುವುದಕ್ಕಾಗಿ ಹಲವು ದಶಕಗಳ ಹಿಂದೆ ಘಟಿಸಿರುವ ತುರ್ತು ಪರಿಸ್ಥಿತಿಯನ್ನು ನೆನೆಯುವುದರಲ್ಲಿ ಯಾವ ಅರ್ಥವೂ ಇಲ್ಲ. ಇಂದಿರಾಗಾಂಧಿಯೆಂದರೆ ‘ತುರ್ತು ಪರಿಸ್ಥಿತಿ’ ಅಷ್ಟೇ ಅಲ್ಲ. ತುರ್ತು ಪರಿಸ್ಥಿತಿಯಾಚೆಗೂ ಇರುವ ಅವರ ರಾಜಕೀಯ ಸಾಮರ್ಥ್ಯಗಳನ್ನು ನಾವು ಅಲ್ಲಗಳೆಯಲಾಗುವುದಿಲ್ಲ. ಇಂದು ಈ ದೇಶ ವಿಶ್ವದಲ್ಲಿ ಬಲಿಷ್ಠವಾಗಿ ತಲೆಯೆತ್ತಿ ನಿಂತಿರುವುದರ ಹಿಂದೆ ಇಂದಿರಾಗಾಂಧಿಯ ಕೊಡುಗೆಯಿದೆ. ಭೂಸುಧಾರಣೆ, ಬ್ಯಾಂಕ್ ರಾಷ್ಟ್ರೀಕರಣವೂ ಸೇರಿದಂತೆ ಈ ದೇಶದ ತಳವರ್ಗಕ್ಕೆ ಆಕೆ ಮಾಡಿರುವ ನೆರವು ಬಹುದೊಡ್ಡದು. ಆ ಕಾರಣಕ್ಕಾಗಿಯೇ ಆಕೆ ಈ ದೇಶದ ಜಮೀನ್ದಾರರ, ಮೇಲ್‌ಜಾತಿಯ ವಿರೋಧಗಳನ್ನು ಕಟ್ಟಿಕೊಳ್ಳಬೇಕಾಯಿತು.

ಬಿಜೆಪಿ ನಿಂದಿಸುವಂತೆ ಇಂದಿರಾಗಾಂಧಿಯೆಂದರೆ ಬರೇ ತುರ್ತು ಪರಿಸ್ಥಿತಿ ಮಾತ್ರವೇ ಆಗಿದ್ದರೆ ಆಕೆಯನ್ನು ಮತ್ತೆ ಜನರು ಯಾಕೆ ಬಹುಮತದಿಂದ ಗೆಲ್ಲಿಸುತ್ತಿದ್ದರು? ಆದುದರಿಂದ ತುರ್ತು ಪರಿಸ್ಥಿತಿಗೆ ಬರೇ ಇಂದಿರಾಗಾಂಧಿಯನ್ನಷ್ಟೇ ಹೊಣೆ ಮಾಡಿ, ಅವರನ್ನು ಟೀಕಿಸುವ ಮೂಲಕ ಸದ್ಯದ ಕಾಂಗ್ರೆಸ್ ನಾಯಕರಿಗೆ ಮುಜುಗರವುಂಟು ಮಾಡುವುದು ಸಮಯ ಸಾಧಕ ರಾಜಕಾರಣ. ನಾವಿಂದು ಸ್ಮರಿಸಬೇಕಾದುದು ತುರ್ತು ಪರಿಸ್ಥಿತಿ ನಿರ್ಮಾಣವಾಗಲು ಕಾರಣವಾದ ಸಂದರ್ಭ ಮತ್ತು ಅದು ಉಂಟು ಮಾಡಿದ ದುಷ್ಪರಿಣಾಮ. ಈ ಸಂದರ್ಭವನ್ನು ದುರುಪಯೋಗ ಪಡಿಸಿಕೊಂಡವರು ಕೇವಲ ಕಾಂಗ್ರೆಸ್ ನಾಯಕರು ಮಾತ್ರವಲ್ಲ, ಆರೆಸ್ಸೆಸ್‌ನಂತಹ ಸಂಘಟನೆಗಳೂ ಸಮಯ ನೋಡಿ ಇದರ ಲಾಭ ಪಡೆದುಕೊಂಡಿವೆ. ಮುಸ್ಲಿಮರ ಮೇಲೆ ನಡೆದ ದೌರ್ಜನ್ಯಗಳಿಗೆ ಆರೆಸ್ಸೆಸ್‌ನ ಕುಮ್ಮಕ್ಕೂ ಇದೆ ಎನ್ನುವುದು ಹಲವು ವರದಿಗಳಿಂದ ಬಯಲಾಗಿದೆ. ಇನ್ನೊಮ್ಮೆ ತುರ್ತು ಪರಿಸ್ಥಿತಿಯನ್ನು ಎದುರಿಸುವ ಸ್ಥಿತಿ ದೇಶಕೆ ಬರಬಾರದು ಎನ್ನುವ ನೆಲೆಯಲ್ಲಿ ತುರ್ತು ಪರಿಸ್ಥಿತಿಯ ಬಾಧಕಗಳನ್ನು ವಿಮರ್ಶಿಸಬೇಕು. ಒಂದು ಕಾಲದಲ್ಲಿ ತುರ್ತು ಪರಿಸ್ಥಿತಿಯ ವಿರುದ್ಧ ಪ್ರತಿಭಟನೆ ಮಾಡಿ ಜೈಲಿಗೆ ಹೋಗಿದ್ದ ಬಿಜೆಪಿಯ ಹಿರಿಯ ಮುಖಂಡ ಎಲ್.ಕೆ. ಅಡ್ವಾಣಿಯವರೇ ‘‘ಈ ದೇಶ ಮತ್ತೊಂದು ತುರ್ತು ಪರಿಸ್ಥಿತಿಯನ್ನು ಎದುರಿಸಬೇಕಾದ ಹಾದಿಯಲ್ಲಿದೆ’’ ಎಂದು ಆತಂಕ ವ್ಯಕ್ತಪಡಿಸಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು.

ವರ್ತಮಾನದ ರಾಜಕೀಯ ಸ್ಥಿತಿಗತಿಗಳನ್ನು ಗಮನಿಸಿ ಅವರು ಈ ಹೇಳಿಕೆಯನ್ನು ನೀಡಿದ್ದರು. ಎರಡು ದಿನಗಳ ಹಿಂದೆ ರಾಜಸ್ಥಾನದ ಹಿರಿಯ ಬಿಜೆಪಿ ಮುಖಂಡರೊಬ್ಬರು ಬಿಜೆಪಿಯನ್ನು ತೊರೆಯುತ್ತಾ ‘‘ದೇಶದಲ್ಲಿರುವ ಅಘೋಷಿತ ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಡಲಿದ್ದೇನೆ’’ ಎಂದು ಮಾಧ್ಯಮಗಳ ಮುಂದೆ ಘೋಷಿಸಿದರು. ಶಿವಸೇನೆಯೂ ಕೂಡ ಇಂತಹದೇ ಮಾತುಗಳನ್ನಾಡುತ್ತಿದೆ. ಇಂದು ದೇಶ ನಿಜಕ್ಕೂ ಅಘೋಷಿತ ತುರ್ತುಪರಿಸ್ಥಿತಿಯನ್ನು ಎದುರಿಸುತ್ತಿದೆಯೇ? ಅಥವಾ ಘೋಷಿತ ತುರ್ತು ಪರಿಸ್ಥಿತಿಯ ಕಡೆಗೆ ಭಾರತದ ಭವಿಷ್ಯ ಜಾರುತ್ತಿದೆಯೇ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದಕ್ಕಾಗಿ ನಾವು ತುರ್ತು ಪರಿಸ್ಥಿತಿಯ ದಿನವನ್ನು ನೆನೆದುಕೊಳ್ಳಬೇಕಾಗಿದೆ. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಅಭಿವ್ಯಕ್ತಿ ಸ್ವಾತಂತ್ರಕ್ಕೆ ಧಕ್ಕೆಯಾಯಿತು. ಪತ್ರಕರ್ತರು ಮತ್ತು ವಿರೋಧಪಕ್ಷದ ನಾಯಕರು ಜೈಲು ಸೇರಬೇಕಾಯಿತು. ಸಂವಿಧಾನಕ್ಕೆ ಗೃಹ ಬಂಧನವಾಯಿತು. ಆದರೆ ಈ ಸಂದರ್ಭದಲ್ಲಿ ತಳಸ್ತರದ ಜನರಿಗೆ ಅದರ ಅನುಭವವಾಗಿರಲಿಲ್ಲ. ಮೇಲ್ಮಧ್ಯಮ ವರ್ಗದ ಜನರು ಈ ಸಂದರ್ಭವನ್ನು ದುರುಪಯೋಗಪಡಿಸಿಕೊಂಡರು. ಮುಸ್ಲಿಮರ ಮೇಲೂ ದಾಳಿಯಾಯಿತು. ಬಡವರ್ಗಕ್ಕೆ ಈ ದೇಶದಲ್ಲಿ ನಡೆಯುತ್ತಿರುವುದೇನು ಎನ್ನುವುದು ಆಗ ಅರ್ಥವಾಗಿರಲಿಲ್ಲ. ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳಲ್ಲಿ ಭೂಸುಧಾರಣೆಯು ಯಶಸ್ವಿಯಾಗಿ ಜಾರಿಯಾದದ್ದು ಈ ತುರ್ತು ಪರಿಸ್ಥಿತಿಯ ಸಂದರ್ಭದಲ್ಲೇ. ಆದರೆ ಅಲ್ಪ ಒಳಿತಿಗಾಗಿ ನಾವು ತುರ್ತು ಪರಿಸ್ಥಿತಿಯನ್ನು ಯಾವ ಕಾರಣಕ್ಕೂ ಸಮರ್ಥಿಸುವಂತಿಲ್ಲ. ತುರ್ತು ಪರಿಸ್ಥಿತಿಯನ್ನು ಸಾರ್ವಜನಿಕವಾಗಿ ಬಿಜೆಪಿ ನಾಯಕರು ತೀವ್ರವಾಗಿ ಖಂಡಿಸುತ್ತಿದ್ದಾರೆ. ಅಂತಹ ನಾಯಕರು ಒಂದು ಕ್ಷಣ ಭಾರತದ ವರ್ತಮಾನದ ಕಡೆಗೆ ಅವಲೋಕಿಸಬೇಕು. ನೋಟುನಿಷೇಧದ ಸಂದರ್ಭದಲ್ಲಿ ಏನು ನಡೆಯಿತು ಎನ್ನುವುದನ್ನು ನಾವು ನೋಡಿದ್ದೇವೆ.

ತಮ್ಮದೇ ಹಣಕ್ಕಾಗಿ ಜನರು ಬ್ಯಾಂಕಿನ ಮುಂದೆ ನಿಲ್ಲಬೇಕಾಯಿತು. ಹಲವರು ಈ ಸಂದರ್ಭದಲ್ಲಿ ಮೃತಪಟ್ಟರು. ಗ್ರಾಮೀಣ ಪ್ರದೇಶದ ಮೇಲೆ ಇದು ಮಾಡಿದ ದುಷ್ಪರಿಣಾಮ ಅತ್ಯಂತ ಭೀಕರ. ಇಂದಿಗೂ ನೋಟು ನಿಷೇಧದ ಆಘಾತದಿಂದ ಜನರು ಚೇತರಿಸಿಲ್ಲ. ಸರಿ, ಇದರಿಂದ ದೇಶಕ್ಕೆ ಏನಾದರೂ ಲಾಭವಾಯಿತೇ ಎಂದು ನೋಡಿದರೆ ಅದೂ ಇಲ್ಲ. ನೋಟು ನಿಷೇಧದಿಂದ ಬೃಹತ್ ಉದ್ಯಮಿಗಳು ಲಾಭ ಮಾಡಿಕೊಂಡರು. ಆರ್‌ಬಿಐಗೆ ತೀವ್ರ ನಷ್ಟವುಂಟಾಯಿತು. ಬಿಜೆಪಿ ವಿಶ್ವದ ಅತ್ಯಂತ ಶ್ರೀಮಂತ ಪಕ್ಷ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ರೈತರು ತಮ್ಮ ಜಾನುವಾರುಗಳನ್ನು ಮಾರುವಂತಹ ವಾತಾವರಣ ಇಂದು ದೇಶದಲ್ಲಿಲ್ಲ. ತಮ್ಮದೇ ಸೊತ್ತಾಗಿರುವ ಜಾನುವಾರುಗಳನ್ನು ಮಾರಲಾಗದಂತಹ ಸ್ಥಿತಿ ಇಂದಿರಾಗಾಂಧಿಯ ತುರ್ತುಪರಿಸ್ಥಿತಿಯ ಸಂದರ್ಭದಲ್ಲೂ ಇದ್ದಿರಲಿಲ್ಲ.

ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಹೇಗೆ ಗುಂಪುಗಳು ಅಮಾಯಕ ಜನರ ಮೇಲೆ ದಾಳಿ ನಡೆಸಿತ್ತೋ ಅಂತಹದೇ ದಾಳಿಗಳು ಇದೀಗ ಗೋರಕ್ಷಕರ ವೇಷದಲ್ಲಿರುವ ಗೂಂಡಾಗಳಿಂದ ನಡೆಯುತ್ತಿದೆ. ಗೋಸಾಕುತ್ತಿರುವ ರೈತರ ಬದುಕು ಬರಡಾಗುತ್ತಿವೆ. ಮಾಧ್ಯಮಗಳ ಮೇಲೆ ಸರಕಾರ ಹೇರುತ್ತಿರುವ ಪರೋಕ್ಷ ನಿಯಂತ್ರಣ, ನೀಡುತ್ತಿರುವ ನೇರ ಕಿರುಕುಳಗಳನ್ನು ನಾವು ನೋಡುತ್ತಿದ್ದೇವೆ. ಗೌರಿ ಲಂಕೇಶರ ಹತ್ಯೆ ನಡೆದಿರುವುದು, ಎನ್‌ಡಿಟಿವಿಯ ಮೇಲೆ ದಾಳಿ ನಡೆದಿರುವುದು ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಅಲ್ಲ ಎಂಬುದನ್ನು ಬಿಜೆಪಿ ನಾಯಕರು ನೆನಪಿನಲ್ಲಿಡಬೇಕಾಗಿದೆ. ಸುಪ್ರೀಂಕೋರ್ಟ್‌ನಂತಹ ಸಂಸ್ಥೆಗಳನ್ನೂ ವ್ಯಾಪಕವಾಗಿ ದುರುಪಯೋಗಪಡಿಸಿಕೊಂಡ ಹೆಮ್ಮೆ ಮೋದಿ ನೇತೃತ್ವದ ಸರಕಾರದ್ದಾಗಿದೆ. ಹೀಗಿರುವಾಗ, ನಾವು ಹಿಂದಿನ ಘೋಷಿತ ತುರ್ತುಪರಿಸ್ಥಿತಿಯನ್ನು ನೆನೆಯುತ್ತಾ, ವರ್ತಮಾನದ ಅಘೋಷಿತ ತುರ್ತುಪರಿಸ್ಥಿತಿಯ ವಿರುದ್ಧ ಮಾತನಾಡಬೇಕಾಗಿದೆ. ಹಿಂದಿನ ತುರ್ತುಪರಿಸ್ಥಿತಿ ಘೋಷಿತವಾಗಿದ್ದುದರಿಂದ ಅದರ ವಿರುದ್ಧ ಬಹಿರಂಗವಾಗಿ ಹೋರಾಡಲು ನಮಗೆಲ್ಲ ಸಾಧ್ಯವಾಯಿತು. ಆದರೆ ಇಂದು ಪ್ರಜಾಸತ್ತೆಯ ವೇಷದಲ್ಲೇ ತುರ್ತುಪರಿಸ್ಥಿತಿ ನಮ್ಮ ಮನೆಯಂಗಳದಲ್ಲಿ ಬಂದು ನಿಂತಿದೆ. ಇದನ್ನು ವಿರೋಧಿಸುವ ದಾರಿಯನ್ನು ಕಂಡುಕೊಳ್ಳುವುದು ಸದ್ಯದ ಅಗತ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News