ವಿಮಾನ ನಿಲ್ದಾಣದಲ್ಲಿ ಗರ್ಭಿಣಿಯ ವಿವಸ್ತ್ರಗೊಳಿಸಿ ತಪಾಸಣೆಗೈದ ಸಿಐಎಸ್‍ಎಫ್ ಸಿಬ್ಬಂದಿ

Update: 2018-06-27 11:53 GMT

ಹೊಸದಿಲ್ಲಿ, ಜೂ.27: ಗುವಾಹಟಿಯ ಲೋಕಪ್ರಿಯ ಗೋಪಿನಾಥ್ ಬೊರ್ದೊಲೊಯ್  ವಿಮಾನ ನಿಲ್ದಾಣದಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ಗರ್ಭಿಣಿಯೊಬ್ಬರನ್ನು ಅಲ್ಲಿನ ಸಿಐಎಸ್‍ಎಫ್ ಮಹಿಳಾ ಸಿಬ್ಬಂದಿ ವಿವಸ್ತ್ರಗೊಳಿಸಿ ತಪಾಸಣೆಗೊಳಪಡಿಸಿರುವುದು ವರದಿಯಾಗಿದೆ. ಮಹಿಳೆ ನಿಜವಾಗಿಯೂ ಗರ್ಭಿಣಿಯೇ ಎಂದು ತಿಳಿಯಲು ಸಿಬ್ಬಂದಿ ಹೀಗೆ ಮಾಡಿದ್ದರೆಂದು ಹೇಳಲಾಗಿದೆ.

ಆರು ತಿಂಗಳ  ಗರ್ಭಿಣಿಯಾಗಿದ್ದ ಮಹಿಳೆ ತನ್ನ ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ತನ್ನ ಪತಿಯೊಂದಿಗೆ ಗುವಾಹಟಿಯಿಂದ ದಿಲ್ಲಿಗೆ ಪ್ರಯಾಣಿಸಲು ವಿಮಾನ ನಿಲ್ದಾಣಕ್ಕೆ ಜೂನ್ 24ರಂದು ಆಗಮಿಸಿದಾಗ ಘಟನೆ ನಡೆದಿತ್ತು. ಮಹಿಳೆಯ ತಂದೆ ಜೂನ್ 11ರಂದು ಮೃತಪಟ್ಟ ಕಾರಣ ಆಕೆ ತನ್ನ ಪತಿ ಶಿವಂ ಸರ್ಮಹ್ ಜೊತೆ ಜೂನ್ 12ರಂದು ಗುವಾಹಟಿಗೆ ಆಗಮಿಸಿದ್ದರು.

ಮಹಿಳೆಯ ಪತಿ ತನ್ನ ಪತ್ನಿಗಾದ ಅವಮಾನದ ಬಗ್ಗೆ ಟ್ವಿಟ್ಟರ್ ನಲ್ಲಿ ಹೇಳಿಕೊಂಡಾಗಲಷ್ಟೇ ಘಟನೆ ಹೊರಜಗತ್ತಿಗೆ ತಿಳಿದು ಬಂದಿತ್ತು. ತನ್ನ ಪತ್ನಿಯನ್ನು ವಿವಸ್ತ್ರಗೊಳಿಸಿ ತಪಾಸಣೆಗೈದ ಸಿಐಎಸ್‍ಎಸ್ ಸಿಬ್ಬಂದಿ ಸುಜಾತ ಎಂದೂ ಆತ ಹೆಸರಿಸಿದ್ದಾರಲ್ಲದೆ "ಈ ದೇಶದಲ್ಲಿ ಗರ್ಭಿಣಿಯಾಗುವುದೂ ಅಪರಾಧವೇ?" ಎಂದು ಪ್ರಶ್ನಿಸಿದ್ದಾರೆ.

"ಆರಂಭದಲ್ಲಿ ತಾನು ನನ್ನ ಪತ್ನಿಗೆ ವೀಲ್ ಚೇರ್ ಬೇಕೆಂದಾಗ ಅದನ್ನು ಒದಗಿಸಲಾಯಿತು. ಆದರೆ ಬೋರ್ಡಿಂಗ್ ಪಾಸ್ ಒದಗಿಸುವ ಮುನ್ನ 20 ನಿಮಿಷ ನಮ್ಮನ್ನು ಪ್ರಶ್ನಿಸಲಾಯಿತು. ನಮ್ಮಲ್ಲಿ ವೈದ್ಯರ ಪ್ರಿಸ್ಕ್ರಿಪ್ಶನ್ ಚೀಟಿ ಇದ್ದರೂ ಹೆಚ್ಚು ಚೀಲ ವಿಮಾನದೊಳಕ್ಕೆ ಕೊಂಡೊಯ್ಯದಂತೆ ಹೇಳಿದ ಕಾರಣ ನಾವು ಅದನ್ನು ಚೆಕ್-ಇನ್ ನಲ್ಲಿಯೇ ಚೀಲದಲ್ಲಿ ಬಿಟ್ಟು ಬಂದಿದ್ದೆವು" ಎಂದೂ ಅವರು ವಿವರಿಸಿದ್ದಾರೆ.

ಘಟನೆ ಹಿನ್ನೆಲೆಯಲ್ಲಿ ಸಿಐಎಸ್‍ಎಫ್ ಮಹಿಳಾ ಸಿಬ್ಬಂದಿಯನ್ನು ವರ್ಗಾಯಿಸಲಾಗಿದ್ದು, ಘಟನೆಯ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News