ಪಕ್ಷದ ವಿರುದ್ಧ ಯಾರೂ ಮಾತನಾಡುವಂತಿಲ್ಲ: ಸಚಿವ ಡಿ.ಕೆ.ಶಿವಕುಮಾರ್

Update: 2018-06-27 12:34 GMT

ಬೆಂಗಳೂರು, ಜೂ. 27: ಪಕ್ಷದ ವಿರುದ್ಧ ಯಾರೂ ಮಾತನಾಡುವಂತಿಲ್ಲ. ಇದು ಡಿ.ಕೆ.ಶಿವಕುಮಾರ್ ಸೇರಿದಂತೆ ಎಲ್ಲರಿಗೂ ಅನ್ವಯಿಸುತ್ತದೆ. ವ್ಯಕ್ತಿ ಪೂಜೆ ಬಿಟ್ಟು, ಪಕ್ಷ ಪೂಜೆ ಮಾಡಿ ಎಂದು ಜಲಸಂಪನ್ಮೂಲ/ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಬುಧವಾರ ಇಲ್ಲಿನ ಸದಾಶಿನಗರದಲ್ಲಿನ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಮೈತ್ರಿಕೂಟ ಸರಕಾರದ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೇಳಿಕೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ತಿರುಗೇಟು ನೀಡಿದರು.

ಇಲ್ಲಿ ಪಕ್ಷ ಮುಖ್ಯವೇ ಹೊರತು ವ್ಯಕ್ತಿ ಅಲ್ಲ. ಸಿದ್ದರಾಮಯ್ಯ ಹೇಳಿಕೆ ಅಧಿಕೃತವೂ ಅಲ್ಲ. ಅವರ ಹೇಳಿಕೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ಅಗತ್ಯವಿಲ್ಲ. ಈ ಮೈತ್ರಿಕೂಟ ಸರಕಾರ 5 ವರ್ಷ ಇರಲಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಸಮ್ಮುಖದಲ್ಲಿ ಸಹಿ ಮಾಡಿದ ದಾಖಲೆಯಿದೆ ಎಂದು ಸ್ಪಷ್ಟಪಡಿಸಿದರು.

ಸರಕಾರಕ್ಕೆ ಸಂಪೂರ್ಣ ಬೆಂಬಲ ನೀಡಲಾಗಿದ್ದು, ಪಕ್ಷ ವಿರೋಧಿ ಹೇಳಿಕೆಗಳನ್ನು ಯಾರೂ ನೀಡಬಾರದು ಎಂದ ಅವರು, ಸಿದ್ದರಾಮಯ್ಯನವರು ತನ್ನ ಆಪ್ತರೊಂದಿಗೆ ಮಾತನಾಡಿದನ್ನೇ ಕಿಡಿಗೇಡಿಗಳು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆಂದು ಶಿವಕುಮಾರ್ ದೂರಿದರು.

ಕಾಂಗ್ರೆಸ್-ಜೆಡಿಎಸ್ ನಾಯಕರು ಅಶೋಕ ಹೊಟೇಲ್‌ನಲ್ಲಿ ಮಾಡಿಕೊಂಡ ಒಪ್ಪಂದವೇ ಅಧಿಕೃತ. ಯಾರೂ ಪಕ್ಷ ಅಥವಾ ಮೈತ್ರಿ ಬಗ್ಗೆ ಹೇಳಿಕೆ ನೀಡುವಂತಿಲ್ಲ. ಈ ಕುರಿತು ಯಾವುದೇ ಗೊಂದಲ ಸೃಷ್ಟಿ ಮಾಡಬೇಡಿ ಎಂದು ಶಿವಕುಮಾರ್ ಇದೇ ವೇಳೆ ಮನವಿ ಮಾಡಿದರು.

ಮಾಜಿ ಶಾಸಕ ಚೆಲುವರಾಯಸ್ವಾಮಿ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಮೈತ್ರಿ ಬೆಂಗಳೂರಿಗೆ ಸೀಮಿತ ಮಂಡ್ಯಕ್ಕಲ್ಲ ಎಂದು ಹೇಳಿಕೆ ನೀಡಿದ್ದೂ ಸಲ್ಲ. ಚುನಾವಣಾ ಹೊಂದಾಣಿಕೆಗಳು ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುತ್ತವೆ ಎಂದು ಅವರು ಹೇಳಿದರು.

ಅಪಾರ್ಥ ಬೇಡ: ಜುಲೈ 5ಕ್ಕೆ ತಿಪಟೂರಿನ ನೊಣವಿನಕೆರೆ ಗುರುಗಳ ಆಶ್ರಮದಲ್ಲಿ ದೊಡ್ಡ ಕಾರ್ಯಕ್ರಮ ಆಯೋಜಿಸಲಾಗಿದೆ. ಚುನಾವಣೆಗೆ ಮೊದಲೇ ಕಾರ್ಯಕ್ರಮ ನಿಗದಿಯಾಗಿದ್ದು, ರಾಜ್ಯಪಾಲರು ಪಾಲ್ಗೊಳ್ಳಲಿದ್ದಾರೆ. ಹೀಗಾಗಿ ನಾನು ಅದೇ ದಿನ ನಡೆಯಲಿರುವ ಬಜೆಟ್ ಅಧಿವೇಶನದಲ್ಲಿ ಭಾಗವಹಿಸಲು ಸಾಧ್ಯವಿಲ್ಲ. ಬಜೆಟ್ ಮಂಡನೆ ವೇಳೆ ತಾನು ಅಧಿವೇಶನದಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ. ರಾಜ್ಯಪಾಲರ ಜತೆಗೆ ಅಥವಾ ಹೆಲಿಕ್ಯಾಪ್ಟರ್‌ನಲ್ಲಿ ಬಂದು ಹೋಗುವ ಪ್ರಯತ್ನ ಮಾಡುತ್ತೇನೆ. ಇದಕ್ಕೆ ಯಾವುದೇ ಅಪಾರ್ಥ ಕಲ್ಪಿಸುವುದು ಬೇಡ ಎಂದು ಅವರು ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News