ವಸತಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಹೋಬಳಿಗೊಂದು ’ವಸತಿಮಿತ್ರ’ರ ನೇಮಕ: ಸಚಿವ ಯು.ಟಿ.ಖಾದರ್

Update: 2018-06-27 12:39 GMT

ಬೆಂಗಳೂರು, ಜೂ.27: ವಸತಿ ಯೋಜನೆಗಳನ್ನು ಗ್ರಾಮಾಂತರ ಪ್ರದೇಶದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಹೋಬಳಿಗೊಂದು ‘ವಸತಿಮಿತ್ರ’ರನ್ನು ನೇಮಿಸಲಾಗುವುದು ಎಂದು ವಸತಿ ಹಾಗೂ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ತಿಳಿಸಿದರು.

ರಾಜೀವ್‌ಗಾಂಧಿ ಗ್ರಾಮೀಣ ವಸತಿ ನಿಗಮ ನಗರದ ಭಾರತ್ ಸ್ಕೌಟ್ ಮತ್ತು ಗೈಡ್ ಸಭಾಂಗಣದಲ್ಲಿ ‘ವಸತಿ ಯೋಜನೆಗಳಿಗೆ ಸಂಬಂಧಿಸಿದ ಕಾರ್ಯಾಗಾರ’ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮಾಂತರ ಪ್ರದೇಶದಲ್ಲಿ ವಸತಿ ಫಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. ಹಾಗೂ ಅವರಿಗೆ ವಸತಿಗಳನ್ನು ಪಡೆಯಲು ಅನುಸರಿಸಬೇಕಾದ ಕ್ರಮಗಳ ಕುರಿತು ಹೆಚ್ಚಿನ ಮಾಹಿತಿ ಇರುವುದಿಲ್ಲ. ಇಂತವರಿಗೆ ಸೂಕ್ತ ಸಲಹೆ, ಸಹಕಾರ ನೀಡುವ ನಿಟ್ಟಿನಲ್ಲಿ ಪ್ರತಿ ಹೋಬಳಿಗೆ ಒಬ್ಬರಂತೆ ವಸತಿಮಿತ್ರರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಆನ್‌ಲೈನ್‌ನಲ್ಲಿ ಅರ್ಜಿ: ಬೆಂಗಳೂರಿನಲ್ಲಿ ವಸತಿ ಯೋಜನೆಗಳಿಗೆ ಆನ್‌ಲೈನ್ ಮೂಲಕವೇ ಅರ್ಜಿಗಳನ್ನು ಹಾಕಬಹುದಾಗಿದೆ. ಇದೇ ಮಾದರಿಯಲ್ಲಿ ಗ್ರಾಮಾಂತರ ಪ್ರದೇಶದಲ್ಲೂ ಆನ್‌ಲೈನ್ ವ್ಯವಸ್ಥೆಯನ್ನು ಜಾರಿ ಮಾಡಲು ಚಿಂತನೆ ನಡೆಸಲಾಗಿದೆ. ಹಾಗೂ ಆಯ್ಕೆಯಾದ ಫಲಾನುಭವಿಗಳು ತಳಪಾಯ(ಫೌಂಡೇಶನ್) ಹಾಕಿದ ಒಂದು ವಾರದೊಳಗೆ ಮೊದಲನೆ ಕಂತಿನ ಹಣ ಬಿಡುಗಡೆ ಆಗಲಿದೆ ಎಂದು ಅವರು ಹೇಳಿದರು.

ಹೊಸ ಯೋಜನೆಯಿಲ್ಲ: ಪ್ರಸಕ್ತ ವರ್ಷದಲ್ಲಿ ವಸತಿ ಇಲಾಖೆಯ ವತಿಯಿಂದ ಯಾವುದೆ ಹೊಸ ಯೋಜನೆಗಳನ್ನು ಅನುಷ್ಠಾನ ಮಾಡುತ್ತಿಲ್ಲ. ಇರುವ ವಸತಿ ಯೋಜನೆಗಳನ್ನೆ ನಿಗದಿತ ವೇಳೆಗೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ಕಾಮಗಾರಿಗಳ ಪ್ರಗತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ವಸತಿ ಇಲಾಖೆಗೆ ಸಂಬಂಧಿಸಿದಂತೆ ಸರಕಾರದ ಮಟ್ಟದಲ್ಲಾಗುವ ನೀತಿ-ನಿಯಮಗಳು ತಾಲೂಕು ಪಂಚಾಯತ್ ಹಾಗೂ ಪಂಚಾಯತ್ ಮಟ್ಟಕ್ಕೆ ನಿಗದಿತ ವೇಳೆಗೆ ಮುಟ್ಟುವುದಿಲ್ಲ. ಈ ಮಾಹಿತಿಯ ಕೊರತೆಯಿಂದಾಗಿ ಕಾರ್ಯಕ್ರಮದ ಅನುಷ್ಠಾನದ ವೇಳೆ ಗೊಂದಲಕ್ಕೆ ಕಾರಣವಾಗಲಿದೆ. ಹೀಗಾಗಿ ಪ್ರತಿ ನೀತಿ-ನಿಯಮಗಳನ್ನು ತಕ್ಷಣವೆ ತಾಲೂಕು ಹಾಗೂ ಗ್ರಾಮ ಪಂಚಾಯತ್‌ಗೆ ಮುಟ್ಟುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.

ವಸತಿ ಯೋಜನೆಗಳನ್ನು ಗ್ರಾಮಾಂತರ ಪ್ರದೇಶಕ್ಕೆ ಪರಿಣಾಮಕಾರಿಯಾಗಿ ತಲುಪಿಸಲು ತಾಲೂಕು ಪಂಚಾಯತ್ ಅಧ್ಯಕ್ಷ ಹಾಗೂ ಅಧಿಕಾರಿಗಳ ಪಾತ್ರ ಬಹುಮುಖ್ಯವಾಗಿದೆ. ಸರಕಾರ ಹಾಗೂ ಗ್ರಾಮ ಪಂಚಾಯತ್‌ನ ನಡುವೆ ಕೊಂಡಿಯಂತೆ ತಾಲೂಕು ಪಂಚಾಯತ್ ಕೆಲಸ ಮಾಡಬೇಕಾಗಿದೆ ಎಂದು ಅವರು ಆಶಿಸಿದರು. ಈ ವೇಳೆ ಮುಖ್ಯ ಎಂಜಿನಿಯರ್ ಗುರುಪ್ರಸಾದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News