ಸೈಬರ್ ಕ್ರೈಂ ತಡೆಗಟ್ಟಲು ಶ್ರಮವಹಿಸಿ: ಉಪ ಮುಖ್ಯಮಂತ್ರಿ ಪರಮೇಶ್ವರ್

Update: 2018-06-27 13:29 GMT

ಬೆಂಗಳೂರು/ಕೊಪ್ಪಳ, ಜೂ. 27: ದೇಶದಲ್ಲೇ ಕರ್ನಾಟಕ ಪೊಲೀಸ್ ಇಲಾಖೆ ಮಾದರಿ ಇಲಾಖೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಈ ಗೌರವವನ್ನು ಹೀಗೆ ಕಾಪಾಡಿಕೊಂಡು ಹೋಗುವ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.

ಬುಧವಾರ ಕೊಪ್ಪಳ ಮುನಿರಾಬಾದ್ ಕೆಎಸ್‌ಆರ್‌ಪಿ ತರಬೇತಿ ಶಾಲೆಯಲ್ಲಿ ನಡೆದ ನಿರ್ಗಮನ ಪಥಸಂಚನ ಕಾರ್ಯಕ್ರಮದಲ್ಲಿ ಭಾಗವಹಿಸಿ ತರಬೇತಿ ಪಡೆದ ಪ್ರಶಿಕ್ಷಣಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಪೊಲೀಸ್ ಇಲಾಖೆಯಲ್ಲಿ ಶಿಸ್ತಿನಿಂದ, ಜವಾಬ್ದಾರಿಯುತವಾಗಿ ಕಾನೂನು ಸುವ್ಯವಸ್ಥೆ ಕಾಪಾಡುವ ಅಧಿಕಾರಿಗಳು ನಮ್ಮಲ್ಲಿದ್ದಾರೆ ಎಂದು ಶ್ಲಾಘಿಸಿದರು.

ಒಂಬತ್ತು ತಿಂಗಳಿನಿಂದ ತರಬೇತಿ ಪಡೆದುಕೊಂಡು ಕಾನ್ಸ್‌ಟೇಬಲ್‌ಗಳಾಗಿ ಸೇವೆ ಸಲ್ಲಿಸಲು ಬರುತ್ತಿರುವ 305 ಪ್ರಶಿಕ್ಷಣಾರ್ಥಿಗಳು ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಬೇಕು. ಎಲ್ಲರೂ ಜನಸ್ನೇಹಿಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಅವರು ಸಲಹೆ ನೀಡಿದರು.

ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ಕೊಟ್ಟಾಗ ಇಡೀ ವಿಶ್ವದಲ್ಲೇ ಶ್ರೇಷ್ಠ ಸಂವಿಧಾನವಾಗಲಿದೆ ಎಂದು ಯಾರೂ ಊಹಿಸಿರಲಿಲ್ಲ. ಇದರಡಿ ಎಲ್ಲರಿಗೂ ಸಮಾನ ಹಕ್ಕು ನೀಡುವ ಕಾನೂನನ್ನು ಅವರು ನೀಡಿದ್ದಾರೆ. ನಮ್ಮ ದೇಶದಲ್ಲಿ ಸಣ್ಣಸಣ್ಣ ಭಿನ್ನಾಭಿಪ್ರಾಯ, ಮೇಲುಕೀಳು ಎಂಬ ಭಾವನೆ ಇರಬಹುದು. ಆದರೆ, ದೇಶದ ವಿಚಾರ ಬಂದಾಗ ಎಲ್ಲರೂ ಒಟ್ಟಾಗಿ ನಿಲ್ಲುವುದರಿಂದಲೇ ನಮ್ಮ ಪ್ರಜಾಪ್ರಭುತ್ವ ವಿಶ್ವದಲ್ಲೇ ಯಶಸ್ವಿಯಾಗಿದೆ. ಇತರೆ ರಾಷ್ಟ್ರಗಳಲ್ಲಿ ಸರಕಾರ ಬದಲಾಗುವ ಸಂದರ್ಭದಲ್ಲಿ ರಕ್ತಪಾತವೇ ಆಗುತ್ತದೆ. ಆದರೆ, ಭಾರತದಲ್ಲಿ ಚುನಾವಣೆ ನಡೆಯುವ ಮೂಲಕ ಶಾಂತಿಯುತವಾಗಿ ಹೊಸ ಸರಕಾರ ರಚನೆಯಾಗುತ್ತದೆ. ಹೀಗಾಗಿ ನಮ್ಮದು ಯಶಸ್ವಿ ಪ್ರಜಾಪ್ರಭುತ್ವ ಎಂದರು.

ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಹೆಚ್ಚಿದಂತೆ ಸೈಬರ್ ಕ್ರೈಂ ಅಪರಾಧಗಳು ಏರಿಕೆಯಾಗುತ್ತಿವೆ. ಈ ಅನಾಹುತ ತಡೆಯಲು ನಿಮಗೆ ಅಡಿಪಾಯ ಹಾಕಿಕೊಟ್ಟಿದ್ದು, ಸದ್ಬಳಕೆ ಮಾಡಿಕೊಳ್ಳಬೇಕು ಎಂದ ಅವರು, ಪೊಲೀಸರೆಂದರೆ ಜನರಲ್ಲಿ ಭಯದ ವಾತಾವರಣವಿದೆ. ಇದನ್ನು ಜನರ ಮನಸ್ಸಿನಿಂದ ಹೋಗುವ ರೀತಿಯಲ್ಲಿ ಪೊಲೀಸರು ಜನಸ್ನೇಹಿಗಳಂತೆ ಕೆಲಸ ಮಾಡಬೇಕೆಂದರು.

ಮುನಿರಾಬಾದ್ ಕೆಎಸ್‌ಆರ್‌ಪಿ ತರಬೇತಿ ಶಾಲೆಯಲ್ಲಿ ಮೂಲಸೌಕರ್ಯದ ಕೊರತೆ ಇರುವುದು ನನ್ನ ಗಮನಕ್ಕೆ ಬಂದಿದೆ. ಇಲ್ಲಿ ಕ್ವಾಟ್ರಸ್ ನಿರ್ಮಾಣ ಕೆಲಸ ನಡೆಯುತ್ತಿದೆ. ಹೆಚ್ಚಿನ ಕಟ್ಟಡಗಳ ಅವಶ್ಯಕತೆ ಇದೆ. ಈ ಎಲ್ಲ ಬೇಡಿಕೆಯನ್ನು ಈಡೇರಿಸುವ ಪ್ರಯತ್ನ ಮಾಡುವುದು ಎಂದು ಅವರು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ನಿರ್ದೇಶಕ ಭಾಸ್ಕರ್ ರಾವ್, ಶಾಸಕ ರಾಘವೇಂದ್ರ ಹಿಟ್ನಾಳ್, ತರಬೇತಿ ಶಾಲೆ ಮುಖ್ಯಸ್ಥ ರಾಮಕೃಷ್ಣ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

‘ಗೃಹ ಇಲಾಖೆಗೆ ಹಣಕಾಸಿನ ನೆರವು ನೀಡಲು ಮನವಿ ಮಾಡಿದ್ದೇನೆ. ಪೊಲೀಸ್ ಗೃಹ ಯೋಜನೆಯಡಿ 11 ಸಾವಿರ ಮನೆ ನಿರ್ಮಾಣಕ್ಕೆ ಅಂದಾಜು ಮಾಡಲಾಗಿದೆ. ಈ ಕಾರ್ಯಕ್ಕೆ 1,800 ಕೋಟಿ ಹಣ ಮೀಸಲಿಡಲಾಗಿದ್ದು, ತ್ವರಿತಗತಿಯಲ್ಲಿ ಸಿಬ್ಬಂದಿಗೆ ವಸತಿ ಸೌಲಭ್ಯ ಕಲ್ಪಿಸಲಾಗುವುದು’
-ಡಾ.ಜಿ.ಪರಮೇಶ್ವರ್ ಉಪ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News