ಜಾರ್ಖಂಡ್: ಪೊಲೀಸರ ಅಪಹರಣ; ಘರ್ಷಣೆಗೆ ಓರ್ವ ಬಲಿ

Update: 2018-06-27 18:50 GMT

ರಾಂಚಿ, ಜೂ.27: ಕಳೆದ ವಾರ ಐವರು ಮಹಿಳಾ ಕಾರ್ಯಕರ್ತೆಯರನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಿದ್ದ ಆರೋಪಿಗಳ ಶೋಧ ಕಾರ್ಯಾಚರಣೆಗೆ ಮುಂದಾದ ಪೊಲೀಸರಿಗೆ ಸ್ಥಳೀಯರು ತಡೆಯೊಡ್ಡಿದ ಘಟನೆ ಜಾರ್ಖಂಡ್‌ನಲ್ಲಿ ನಡೆದಿದೆ.

ಪೊಲೀಸರು ಮತ್ತು ಸ್ಥಳೀಯರ ನಡುವೆ ಭಿನ್ನಾಭಿಪ್ರಾಯ ಉಂಟಾದ ಬಳಿಕ ನಡೆದ ಘರ್ಷಣೆಯಲ್ಲಿ ಓರ್ವ ಮೃತನಾಗಿದ್ದು ಒಬ್ಬ ವ್ಯಕ್ತಿ ಗಂಭೀರ ಗಾಯಗೊಂಡಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಮಧ್ಯೆ ಸ್ಥಳೀಯ ಶಾಸಕರ ಮನೆಯಲ್ಲಿ ಭದ್ರತಾ ವ್ಯವಸ್ಥೆಗೆ ನಿಯೋಜಿಸಲಾಗಿದ್ದ ಮೂವರು ಪೊಲೀಸರನ್ನು ಗುಂಪೊಂದು ಅಪಹರಿಸಿ ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕೃತ್ಯದ ಹಿಂದೆ ‘ಪಟಾಲ್‌ಗಡಿ’ ಎಂಬ ಸ್ಥಳೀಯ ಸಮಾಜವಿರೋಧಿ ಸಂಘಟನೆಯ ಕೈವಾಡವಿರುವುದಾಗಿ ಪೊಲೀಸರು ಶಂಕಿಸಿದ್ದಾರೆ.

ಅತ್ಯಾಚಾರ ಆರೋಪಿಗಳ ಪತ್ತೆಗಾಗಿ ಮಂಗಳವಾರ ಸಂಜೆಯ ವೇಳೆಗೆ ಪೊಲೀಸರು ಟೋರ್ಪಾ ಗ್ರಾಮವನ್ನು ಪ್ರವೇಶಿಸಲು ಮುಂದಾದಾಗ ಸ್ಥಳೀಯರು ಒಟ್ಟಾಗಿ ತಡೆದಿದ್ದಾರೆ. ಸಂಜೆ ವೇಳೆ ಸುಮಾರು 300ರಷ್ಟು ಪೊಲೀಸರು ಸ್ಥಳಕ್ಕೆ ಆಗಮಿಸಿ ಸ್ಥಳೀಯರ ಮನವೊಲಿಸಲು ಪ್ರಯತ್ನಿಸಿದರೂ ಬುಧವಾರ ಬೆಳಿಗ್ಗಿನವರೆಗೂ ಪೊಲೀಸರನ್ನು ಮುಂದೆ ಸಾಗಲು ಸ್ಥಳೀಯರು ಬಿಡಲಿಲ್ಲ. ಬುಧವಾರ ಬೆಳಿಗ್ಗೆ ಯಾರೋ ಕಿಡಿಗೇಡಿಗಳು ಪೊಲೀಸರ ಮೇಲೆ ಸ್ಥಳೀಯ ಸಾಂಪ್ರದಾಯಿಕ ಆಯುಧವಾದ ಬಿಲ್ಲು ಬಾಣ ಪ್ರಯೋಗಿಸಿದ್ದಾರೆ ಎನ್ನಲಾಗಿದೆ. ಬಳಿಕ ಗಲಭೆ ಆರಂಭವಾಗಿದೆ. ಈ ಸಂದರ್ಭ ಪೊಲೀಸರ ಏಟಿಗೆ ಓರ್ವ ಬಲಿಯಾಗಿದ್ದು ಮತ್ತೊಬ್ಬ ಗಾಯಗೊಂಡಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಬಳಿಕ ಪೊಲೀಸರು ಗ್ರಾಮವನ್ನು ಪ್ರವೇಶಿಸಿದ್ದಾರೆ. ಆದರೆ ಗ್ರಾಮದ ಹೆಚ್ಚಿನ ನಿವಾಸಿಗಳು ಗ್ರಾಮ ತೊರೆದಿದ್ದಾರೆ ಎನ್ನಲಾಗಿದೆ.          

ಈ ಮಧ್ಯೆ, ಸ್ಥಳೀಯ ಶಾಸಕ ಕರಿಯಾ ಮುಂಡ ಅವರ ನಿವಾಸದಲ್ಲಿ ಭದ್ರತೆಗೆಂದು ನಿಯುಕ್ತರಾಗಿದ್ದ ಮೂವರು ಪೊಲೀಸರನ್ನು ಗುಂಪೊಂದು ಅಪಹರಿಸಿದೆ ಎನ್ನಲಾಗಿದೆ. ಪಟಾಲ್‌ಗಡಿ ಸಂಘಟನೆಯವರೇ ಈ ಕೃತ್ಯ ನಡೆಸಿರುವುದರಲ್ಲಿ ಅನುಮಾನವಿಲ್ಲ ಎಂದು ಶಾಸಕರು ತಿಳಿಸಿದ್ದಾರೆ. ಅಲ್ಲದೆ ಮಂಗಳವಾರ ಸ್ಥಳೀಯ ಮುಖಂಡ ಯೂಸುಫ್ ಪುರ್ತಿ ಎಂಬಾತನ ವಿರುದ್ಧ ಬಂಧನ ವಾರಂಟ್ ಹಿಡಿದುಕೊಂಡು ಬಂದಿದ್ದ ಪೊಲೀಸರನ್ನು ಸ್ಥಳೀಯರು ತಡೆಹಿಡಿಯಲು ಪ್ರಯತ್ನಿಸಿದ ಘಟನೆಯೂ ನಡೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಆರ್.ಕೆ.ಮಲಿಕ್ ತಿಳಿಸಿದ್ದಾರೆ. ಯೂಸುಫ್ ಪರಾರಿಯಾಗಲು ಯಶಸ್ವಿಯಾಗಿದ್ದು ಆತನಿಗೆ ಸೇರಿದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News