×
Ad

ಅಂದು ನಿರ್ಭಯಾಳಿಗಾಗಿ ಹೋರಾಡಿದ್ದ ಆಪ್ ನಾಯಕರು, ಇಂದು ಓರ್ವ ಆರೋಪಿಯನ್ನು ಬೆಂಬಲಿಸುತ್ತಿದ್ದಾರೆ: ಸ್ವಾತಿ ಮಲಿವಾಲ್

Update: 2024-05-19 22:03 IST

ANI Photo

ಹೊಸದಿಲ್ಲಿ : ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ಷಡ್ಯಂತ್ರದ ಭಾಗವಾಗಿದ್ದಾರೆ ಎಂದು ತನ್ನ ಪಕ್ಷದಿಂದ ಆರೋಪಿಸಲ್ಪಟ್ಟಿರುವ ಆಪ್ ನ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್ ಅವರು, ತನ್ನ ಪಕ್ಷದ ಸಹೋದ್ಯೋಗಿಗಳು ಒಮ್ಮೆ ನಿರ್ಭಯಾಳಿಗೆ ನ್ಯಾಯಕ್ಕಾಗಿ ಹೋರಾಡಿದ್ದರು. ಆದರೆ ಇಂದು ಅವರು ತನ್ನ ಮೇಲೆ ಹಲ್ಲೆ ನಡೆಸಿದ ಆರೋಪಿಯನ್ನು ಬೆಂಬಲಿಸುತ್ತಿದ್ದಾರೆ ಎಂದು ರವಿವಾರ ಹೇಳಿದ್ದಾರೆ.

ದಿಲ್ಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ಆಪ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರು ಇಲ್ಲಿದ್ದರೆ ಬಹುಶಃ ತನ್ನ ಸ್ಥಿತಿ ಇಷ್ಟು ಕೆಟ್ಟದ್ದಾಗಿರುತ್ತಿರಲಿಲ್ಲ ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್ ನಲ್ಲಿ ಮಲಿವಾಲ್ ಹೇಳಿದ್ದಾರೆ.

ಮೇ 13ರಂದು ತಾನು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ರನ್ನು ಭೇಟಿಯಾಗಲು ಅವರ ನಿವಾಸಕ್ಕೆ ತೆರಳಿದ್ದಾಗ ಅವರ ಆಪ್ತ ಸಹಾಯಕ ಬಿಭವ ಕುಮಾರ್ ತನ್ನ ಮೇಲೆ ಹಲ್ಲೆ ನಡೆಸಿದ್ದರು ಎಂದು ಮಲಿವಾಲ್ ಆರೋಪಿಸಿದ್ದಾರೆ. ಮಲಿವಾಲ್ ಆರೋಪಗಳನ್ನು ತಳ್ಳಿಹಾಕಿರುವ ಆಪ್, ಕೇಜ್ರಿವಾಲ್‌ ರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ಅವರು ಬಿಜೆಪಿ ಸೂಚನೆಯಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಪ್ರತಿಪಾದಿಸಿದೆ.

10 ವರ್ಷಗಳಿಗೂ ಹಿಂದೆ ಆಪ್ ಸ್ಥಾಪನೆಗೊಂಡಾಗಿನಿಂದಲೂ ಅದರೊಂದಿಗೆ ಗುರುತಿಸಿಕೊಂಡಿರುವ ಮಲಿವಾಲ್, ‘ಅದೊಂದು ಕಾಲವಿತ್ತು, ನಾವೆಲ್ಲರೂ ನಿರ್ಭಯಾಳಿಗೆ ನ್ಯಾಯಕ್ಕಾಗಿ ಹೋರಾಡಲು ಬೀದಿಗಿಳಿದಿದ್ದೆವು. ಅದೇ ಜನರು 12 ವರ್ಷಗಳ ಬಳಿಕ ಇಂದು ಸಿಸಿಟಿವಿ ದೃಶ್ಯಗಳನ್ನು ಕಣ್ಮರೆ ಮಾಡಿದ ಮತ್ತು ಫೋನ್ ನಲ್ಲಿಯ ಪ್ರತಿಯೊಂದನ್ನೂ ಅಳಿಸಿ ಹಾಕಿದ ಆರೋಪಿ (ಬಿಭವ ಕುಮಾರ್)ಯನ್ನು ರಕ್ಷಿಸಲು ಬೀದಿಗಿಳಿದಿದ್ದಾರೆಯೇ? ಇಷ್ಟೊಂದು ಶಕ್ತಿಯನ್ನು ಅವರು ಸಿಸೋಡಿಯಾರಿಗಾಗಿ ತೋರಿಸಬಹುದಿತ್ತು’ ಎಂದು ತನ್ನ ಪೋಸ್ಟ್ ನಲ್ಲಿ ಬರೆದಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News