ಸಾಲ ವಿತರಣೆಯಲ್ಲಿ ನಿರಾಸಕ್ತಿ ಆರೋಪ: ಬ್ಯಾಂಕ್ ಅಧಿಕಾರಿಗಳ ವಿರುದ್ಧ ಸಂಸದ, ಶಾಸಕರ ಅಸಮಾಧಾನ

Update: 2018-06-28 11:50 GMT

ಮಡಿಕೇರಿ, ಜೂ.28: ಕೇಂದ್ರ ಮತ್ತು ರಾಜ್ಯ ಸರಕಾರದ ಸಾಲದ ಯೋಜನೆಗಳ ಅನುಷ್ಠಾನದಲ್ಲಿ ಬ್ಯಾಂಕ್ ಅಧಿಕಾರಿಗಳು ನಿರಾಸಕ್ತಿ ತೋರುತ್ತಿದ್ದಾರೆಂದು  ಸಂಸದ ಪ್ರತಾಪಸಿಂಹ ಹಾಗೂ ಶಾಸಕರಾದ ಕೆ.ಜಿ.ಬೋಪಯ್ಯ ಮತ್ತು ಎಂ.ಪಿ.ಅಪ್ಪಚ್ಚುರಂಜನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿವಿಧ ರಾಷ್ಟ್ರೀಕೃತ ಬ್ಯಾಂಕ್‍ಗಳ ಕಾರ್ಯವೈಖರಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಅವರು ಅಸಡ್ಡೆ ತೋರುವ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ನಗರದ ಕಾರ್ಪೋರೇಷನ್ (ಲೀಡ್) ಬ್ಯಾಂಕ್ ಸಭಾಂಗಣದಲ್ಲಿ ಗುರುವಾರ ಕೊಡಗು-ಮೈಸೂರು ಕ್ಷೇತ್ರದ ಸಂಸದ ಪ್ರತಾಪ್‍ಸಿಂಹ ಅವರ ಅಧ್ಯಕ್ಷತೆಯಲ್ಲಿ ನಡೆದ ಬ್ಯಾಂಕ್‍ಗಳ ಸಾಲ ವಿತರಣೆ ಮತ್ತು ವಿವಿಧ ಇಲಾಖೆಗಳ ಕಾರ್ಯಕ್ರಮಗಳ ಅನುಷ್ಠಾನ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜನಪ್ರತಿನಿಧಿಗಳು ಮಾತನಾಡಿದರು. ವಿಶೇಷವಾಗಿ ಕೃಷಿ ಸಾಲ ನೀಡುವಲ್ಲಿ ಬ್ಯಾಂಕ್‍ಗಳು ಹಿನ್ನಡೆ ಸಾಧಿಸಿರುವ ಬಗ್ಗೆ ಸಂಸದ ಪ್ರತಾಪ್‍ಸಿಂಹ ಅವರು ಆಕ್ಷೇಪ ವ್ಯಕ್ತಪಡಿಸಿದರು. ಕೇಂದ್ರ ಸರಕಾರದ ಮುದ್ರಾ, ಸ್ಟಾರ್ಟ್‍ಅಪ್, ಸ್ಟಾಂಡ್ ಅಪ್ ಇಂಡಿಯಾ ಯೋಜನೆಯಡಿ ಸಾಲ ವಿತರಿಸಲು ಬ್ಯಾಂಕ್ ಅಧಿಕಾರಿಗಳು ನಿರಾಕರಿಸುತ್ತಿರುವ ಬಗ್ಗೆ ಶಾಸಕರಾದ ಕೆ.ಜಿ.ಬೋಪಯ್ಯ ಹಾಗೂ ಅಪ್ಪಚ್ಚುರಂಜನ್ ಗಮನ ಸೆಳೆದರು.

ಅದರಲ್ಲೂ ಕೆಲವು ಬ್ಯಾಂಕ್‍ಗಳು ಶೂನ್ಯ ಸಾಧನೆ ಮಾಡಿರುವುದನ್ನು ಬೊಟ್ಟು ಮಾಡಿದ ಅವರು, ಅಂತಹ ಬ್ಯಾಂಕ್ ಅಧಿಕಾರಿಗಳನ್ನು ‘ಅಭಿನಂದಿಸುವಂತೆ’ ಲೀಡ್ ಬ್ಯಾಂಕ್ ಹಾಗೂ ನಬಾರ್ಡ್ ಅಧಿಕಾರಿಗಳಿಗೆ ಸೂಚಿಸುವ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯ ಸರಕಾರದ ಪಶುಭಾಗ್ಯ ಯೋಜನೆಯಡಿ ಸಾಲ ಪಡೆಯಲು ಬಡವರು ಬ್ಯಾಂಕ್‍ಗಳಿಗೆ ತೆರಳಿದರೆ, ಅಧಿಕಾರಿಗಳು ತಮ್ಮ ‘ಟಾರ್ಗೆಟ್’ ಮುಗಿದಿದೆ ಎಂಬ ಸಬೂಬು ಹೇಳಿ ಸಾಗಹಾಕುತ್ತಿದ್ದಾರೆ. ಕೆಲವು ಬ್ಯಾಂಕ್‍ನ ವ್ಯವಸ್ಥಾಪಕರುಗಳಂತೂ ಸಾಲಕ್ಕಾಗಿ ಬರುವವರನ್ನು ಮಾತನಾಡಿಸುವ ಗೋಜಿಗೇ ಹೋಗುತ್ತಿಲ್ಲ ಎಂದು ದೂರಿದರು.

ಪ್ರಧಾನ ಮಂತ್ರಿಗಳ ಮುದ್ರಾ ಯೋಜನೆಯಡಿ ಸಾಲ ಸೌಲಭ್ಯ ಪಡೆಯಲು ಪರಿಶಿಷ್ಟ ಪಂಗಡದ ವ್ಯಕ್ತಿಯೊಬ್ಬರು ತಿತಿಮತಿಯ ವಿಜಯಾ ಬ್ಯಾಂಕ್ ಶಾಖೆಗೆ ಅರ್ಜಿ ಸಲ್ಲಿಸಿದರೂ, ಅದಕ್ಕೆ ಅಲ್ಲಿನ ವ್ಯವಸ್ಥಾಪಕರು ಸ್ಪಂದಿಸಿಲ್ಲ. ಈ ಕುರಿತು ಗ್ರಾಹಕ ಪ್ರಧಾನ ಮಂತ್ರಿಗಳ ಕಾರ್ಯಾಲಯಕ್ಕೆ ದೂರು ಸಲ್ಲಿಸಿದ್ದು, ತನಿಖೆ ನಡೆಸಿ ವರದಿ ನೀಡುವಂತೆ ಅಲ್ಲಿಂದ ಬ್ಯಾಂಕ್‍ನ ಪ್ರಾದೇಶಿಕ ಕಚೇರಿಗೆ ಆದೇಶಿಸಲಾಗಿದ್ದರೂ, ಇದುವರೆಗೆ ಯಾವುದೇ ಕ್ರಮವಾಗಿಲ್ಲ ಎಂದು ಕೆ.ಜಿ.ಬೋಪಯ್ಯ ಆರೋಪಿಸಿದರು.

ಕಾಕೋಟುಪರಂಬುವಿನ ವಿಜಯಾ ಬ್ಯಾಂಕ್ ಶಾಖೆಯಿಂದ ಸಾಲ ಪಡೆದಿರುವ ಬೆಳೆಗಾರರೊಬ್ಬರು ಪ್ರತಿ ಕಂತಿನ ಹಣವನ್ನು ಅವಧಿಗೆ ಮುನ್ನವೇ ಪಾವತಿಸುತ್ತಿದ್ದರೂ, ಅವರ ಖಾತೆಗೆ ವಿದೇಶದಿಂದ ಅವರ ಪುತ್ರ ಕಳುಹಿಸಿದ ಹಣವನ್ನು ಅಧಿಕಾರಿಗಳು ಸಾಲದ ಮೊತ್ತಕ್ಕೆ ಹೊಂದಾಣಿಕೆ ಮಾಡಿದ್ದಾರೆ. ಬ್ಯಾಂಕ್ ಅಧಿಕಾರಿಗಳ ಈ ಕಾರ್ಯವೈಖರಿಯನ್ನು ಗಮನಿಸಿದರೆ ಬೆಳೆಗಾರರು ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಲಿದೆ ಎಂದು ಬೋಪಯ್ಯ ದೂರಿದರು.

ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಜಿಲ್ಲಾ ಮಟ್ಟದ ಬ್ಯಾಂಕರ್‍ಗಳ ಪ್ರಗತಿ ಪರಿಶೀಲನಾ ಸಮಿತಿಯ ಅಧ್ಯಕ್ಷರೂ ಆಗಿರುವ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರನ್ನು ಒತ್ತಾಯಿಸಿದರು. ಅಲ್ಲದೆ ಲೀಡ್ ಬ್ಯಾಂಕ್ ಮತ್ತು ನಬಾರ್ಡ್ ಅಧಿಕಾರಿಗಳು ಕೂಡ ಈ ನಿಟ್ಟಿನಲ್ಲಿ ಗಮನಹರಿಸಬೇಕೆಂದು ಬೋಪಯ್ಯ ಸಲಹೆ ನೀಡಿದರು.

'ಶಾಸಕರನ್ನೇ ನಿರ್ಲಕ್ಷಿಸಿದ್ದಾರೆ': ಪ್ರಾಮಾಣಿಕವಾಗಿ ಕೃಷಿ ಸಾಲ, ಬೆಳೆ ಸಾಲ ಮರುಪಾವತಿಸುತ್ತಿರುವ ಗ್ರಾಹಕರಿಗೂ ಬ್ಯಾಂಕ್ ಅಧಿಕಾರಿಗಳು ಸಾಲ ನೀಡಲು ಹಿಂದೇಟು ಹಾಕುತ್ತಿರುವ ಬಗ್ಗೆ  ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಗಮನಸೆಳೆದರಲ್ಲದೆ, ಶಾಸಕನಾಗಿರುವ ತನಗೇ ಬ್ಯಾಂಕ್ ಅಧಿಕಾರಿಗಳು ಸಮರ್ಪಕವಾಗಿ ಸ್ಪಂದಿಸದಿರುವಾಗ, ಇನ್ನು ಜನಸಾಮಾನ್ಯರಿಗೆ ಇವರು ಎಷ್ಟರಮಟ್ಟಿಗೆ ಸ್ಪಂದಿಸಬಹುದು ಎಂದು ಪ್ರಶ್ನಿಸಿದರು.

ಆಯಾ ಬ್ಯಾಂಕ್‍ನ ಶಾಖೆಗಳು ಸಾಲ ನೀಡಿದ ಫಲಾನುಭವಿಗಳೆಷ್ಟು ಎಂಬ ವಿವರವಾದ ಮಾಹಿತಿಯನ್ನು ಒದಗಿಸುವಂತಾಗಬೇಕು. ಅಲ್ಲದೆ ಸಭೆಯ ಕಾರ್ಯಸೂಚಿ ಹಾಗೂ ಮಾಹಿತಿಯನ್ನೊಳಗೊಂಡ ಕೈಪಿಡಿಯನ್ನು ಕನಿಷ್ಟ ಒಂದು ವಾರ ಮುಂಚಿತವಾಗಿ ಎಲ್ಲಾ ಸದಸ್ಯರಿಗೆ ನೀಡುವಂತಾಗಬೇಕು ಎಂದು ಸೂಚಿಸಿದರು.

ಕನ್ನಡ ಬರಲ್ಲ: ವಿವಿಧ ಯೋಜನೆಗಳಡಿ ಬ್ಯಾಂಕ್‍ಗಳ ಸಾಲ ವಿತರಣೆಗೆ ಬ್ಯಾಂಕ್ ಸಿಬ್ಬಂದಿಗಳ ಭಾಷಾ ಸಮಸ್ಯೆಯೂ ಅಡ್ಡಿಯಾಗಿದೆ ಎಂಬ ಅಂಶ ಸಭೆಯಲ್ಲಿ ಬೆಳಕಿಗೆ ಬಂತು. ಬಹುತೇಕ ಬ್ಯಾಂಕ್‍ಗಳಲ್ಲಿ ಕನ್ನಡೇತರ ಅಧಿಕಾರಿ ಸಿಬ್ಬಂದಿಗಳೇ ಇದ್ದು, ಅಂತಹ ಸಿಬ್ಬಂದಿಗಳು ಒಂದು ವರ್ಷದೊಳಗೆ ಕನ್ನಡ ಕಲಿಯಬೇಕೆಂಬ ನಿಯಮವಿದ್ದರೂ, ಅದು ಪಾಲನೆಯಾಗುತ್ತಿಲ್ಲ. ಇದರಿಂದಾಗಿ ಸ್ಥಳೀಯರು ಅಂತಹ ಅಧಿಕಾರಿಗಳು, ಸಿಬ್ಬಂದಿಗಳೊಂದಿಗೆ ವ್ಯವಹರಿಸಲು ಸಾಧ್ಯವಾಗುತ್ತಿಲ್ಲ ಎಂದು ಶಾಸಕ ಬೋಪಯ್ಯ ದೂರಿದರು. ಅಂತಹ ಬ್ಯಾಂಕ್‍ಗಳಲ್ಲಿ ಕನಿಷ್ಟ ಒಬ್ಬರನ್ನಾದರೂ ಸ್ಥಳೀಯ ಭಾಷೆಯಲ್ಲಿ ವ್ಯವಹರಿಸುವ ಸಿಬ್ಬಂದಿಗಳನ್ನು ನೇಮಕ ಮಾಡಬೇಕು ಎಂದು ಅವರು ಸಲಹೆ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕೆನರಾ ಬ್ಯಾಂಕ್ ಅಧಿಕಾರಿಯೊಬ್ಬರು ತಮ್ಮ ಬ್ಯಾಂಕ್‍ನಲ್ಲಿ ಎಲ್ಲಾ ಸಿಬ್ಬಂದಿಗಳು ಹೊರ ರಾಜ್ಯದವರಾಗಿದ್ದಾರೆ. ಕೆಲವರಿಗಂತೂ ಹಿಂದಿ ಹೊರತಾಗಿ ಬೇರೆ ಭಾಷೆ ಬರುವುದೇ ಇಲ್ಲ. ಕನಿಷ್ಟ ಗುಮಾಸ್ತರಾದರೂ ಸ್ಥಳೀಯ ಭಾಷೆ ಬಲ್ಲವರಾಗಿದ್ದರೆ ಬ್ಯಾಂಕ್‍ಗಳ ಪ್ರಗತಿಯಲ್ಲೂ ಸಾಧನೆಯಾಗಬಹುದು. ಇಲ್ಲವಾದರೆ ಬ್ಯಾಂಕ್ ವ್ಯವಹಾರಗಳೇ ಕುಂಠಿತವಾಗುವ ಸಾಧ್ಯತೆಗಳಿವೆ ಎಂದು ಆತಂಕ ಹೊರಗೆಡವಿದರು. ಕನ್ನಡೇತರ ಸಿಬ್ಬಂದಿಗಳಿಗೆ ತಾನೇ ಕನ್ನಡ ಕಲಿಸಲು ಪ್ರಯತ್ನಿಸುತ್ತಿದ್ದೇನೆ. ಆದರೆ ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗುವುದೆಂಬುದನ್ನು ಕಾದು ನೋಡಬೇಕಿದೆ. ಆದ್ದರಿಂದ ಬ್ಯಾಂಕ್ ಅಧಿಕಾರಿಗಳು, ಸಿಬ್ಬಂದಿಗಳು ಕೂಡಾ ಒಂದು ವರ್ಷದೊಳಗೆ ಕನ್ನಡ ಕಲಿಯಬೇಕು ಎಂಬ ನಿಯಮವನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸುವಂತಾಗಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಜಿಲ್ಲಾಧಿಕಾರಿ ಪಿ.ಐ ಶ್ರೀವಿದ್ಯಾ ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್‍ಕುಮಾರ್ ಮಿಶ್ರ ಅವರುಗಳೂ ಧ್ವನಿಗೂಡಿಸಿ, ಕನ್ನಡ ತರಬೇತಿ ಶಿಬಿರಗಳನ್ನು ಆಯೋಜಿಸುವಂತೆ ಸಲಹೆ ನೀಡಿದರು. 

ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುನಿಲ್ ಸುಬ್ರಮಣಿ, ಜಿ.ಪಂ. ಅಧ್ಯಕ್ಷ ಬಿ.ಎ.ಹರೀಶ್, ಕಾರ್ಪೋರೇಷನ್ ಬ್ಯಾಂಕ್‍ನ ಮೈಸೂರು ಪ್ರಾದೇಶಿಕ ಕಚೇರಿಯ ಡಿಜಿಎಂ ಎಸ್.ಎಲ್.ಗಣಪತಿ, ನಬಾರ್ಡ್‍ನ ಜಿಲ್ಲಾ ಪ್ರಬಂಧಕ ಎಂ.ಸಿ.ನಾಣಯ್ಯ ಹಾಜರಿದ್ದರು. ಲೀಡ್ ಬ್ಯಾಂಕ್ ವ್ಯವಸ್ಥಾಪಕ ಬಂಗಾರು ಗುಪ್ತಾ ಸ್ವಾಗತಿಸಿ, ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News