ಅಗೌರವ ತೋರಿದ ಶಾಲಾ ಪ್ರಾಂಶುಪಾಲೆಯ ಬಂಧನಕ್ಕೆ ಆದೇಶಿಸಿದ ಮುಖ್ಯಮಂತ್ರಿ !

Update: 2018-06-29 07:12 GMT

ಡೆಹ್ರಾಡೂನ್, ಜೂ. 29: ಸರಕಾರಿ ಶಾಲೆಯೊಂದರ 57 ವರ್ಷದ ಪ್ರಾಂಶುಪಾಲೆಯೊಬ್ಬರು ತನ್ನನ್ನು ಕುಗ್ರಾಮವೊಂದರಿಂದ ಬೇರೆ ಕಡೆ ವರ್ಗಾಯಿಸಬೇಕೆಂದು ಕೋರಿ ಮನವಿ ಸಲ್ಲಿಸುವ ವೇಳೆ ಮುಖ್ಯಮಂತ್ರಿ ತ್ರಿವೇಂದ್ರ ರಾವತ್ ಅವರ ವಿರುದ್ಧ ಅಸಭ್ಯ ಭಾಷೆ ಪ್ರಯೋಗಿಸಿದ್ದಾರೆ ಎನ್ನಲಾದ ಘಟನೆಗೆ ಸಂಬಂಧಿಸಿ ಮುಖ್ಯಮಂತ್ರಿ ತಾಳ್ಮೆ ಕಳೆದುಕೊಂಡು ಆಕೆಯನ್ನು ಸೇವೆಯಿಂದ ವಜಾಗೊಳಿಸಿ, ಬಂಧಿಸುವಂತೆ ಆದೇಶ ನೀಡಿದ ಘಟನೆ ಡೆಹ್ರಾಡೂನ್ ನಲ್ಲಿ ನಡೆದಿದೆ.

ಘಟನೆ ಮುಖ್ಯಮಂತ್ರಿಯ ಜನತಾ ದರ್ಬಾರ್ ಸಂದರ್ಭ ನಡೆದಿದ್ದು, ಸಿಎಂ ಆದೇಶದಿಂದ ಬಂಧನಕ್ಕೊಳಗಾದ ಉತ್ತರ ಕಾಶಿ ಜಿಲ್ಲೆಯ ನೌಗಾಂವ್ ಪ್ರದೇಶದ ಸರಕಾರಿ ಪ್ರಾಥಮಿಕ ಶಾಲೆಯ ಪ್ರಾಂಶುಪಾಲೆ, ಉತ್ತರಾ ಬಹುಗುಣ ಅವರನ್ನು ಗುರುವಾರ ಸಂಜೆ ಬಿಡುಗಡೆಗೊಳಿಸಲಾಗಿದೆ.

ಮುಖ್ಯಮಂತ್ರಿಯ ಜನತಾ ದರ್ಬಾರ್ ಗೆ ಆಗಮಿಸಿದ್ದ ಆಕೆ ತಾನು ಕಳೆದ 25 ವರ್ಷಗಳಿಂದ ಇಂತಹ ಕುಗ್ರಾಮಗಳಲ್ಲಿ ಸೇವೆ ಸಲ್ಲಿಸುತ್ತಿದ್ದು ಕನಿಷ್ಠ ಈಗಲಾದರೂ ತನ್ನನ್ನು ಬೇರೆ ಕಡೆ ವರ್ಗಾಯಿಸುವಂತೆ ಕೋರಿದ್ದರು. ಆದರೆ ಆಕೆಯ ಬೇಡಿಕೆಯನ್ನು ಮುಖ್ಯಮಂತ್ರಿ ತಿರಸ್ಕರಿಸಿದಾಗ ಪ್ರಾಂಶುಪಾಲೆ ಅವರೊಂದಿಗೆ ವಾಗ್ವಾದ ನಡೆಸಲು ಆರಂಭಿಸಿದ್ದರು. ಆಗ ತಾಳ್ಮೆ ಕಳೆದುಕೊಂಡ ಸಿಎಂ ಆಕೆಯನ್ನು ವಜಾಗೊಳಿಸಿ ಬಂಧಿಸುವಂತೆ ಆದೇಶಿಸಿದರು.

ಈ ಘಟನೆಯ ವೀಡಿಯೊ ಸಆಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆಯಲ್ಲದೆ ಮುಖ್ಯಮಂತ್ರಿಯ ಕ್ರಮ ಸಾಕಷ್ಟು ಟೀಕೆಗೂ ಒಳಗಾಗಿದೆ. ಕಾಂಗ್ರೆಸ್ ನಾಯಕರೂ ಮುಖ್ಯಮಂತ್ರಿಯ ಒರಟು ವರ್ತನೆಯನ್ನ ಖಂಡಿಸಿದ್ದಾರೆ.

ಘಟನೆಯ ನಂತರ ಮಾತನಾಡಿದ ಮುಖ್ಯಮಂತ್ರಿ, ವರ್ಗಾವಣೆ ಮುಂತಾದ ವಿಚಾರಗಳನ್ನು ಜನತಾ ದಬಾರ್ ನಲ್ಲಿ ಎತ್ತಬಾರದು, ವರ್ಗಾವಣೆಗಳು ಸಂಬಂಧಿತ ಕಾನೂನಿನಂತೆ ನಡೆಯುತ್ತವೆ. ತಮಗೆ ಅಗೌರವ ತೋರಿದ್ದಕ್ಕಾಗಿ ಹಾಗೂ ನಿಂದಿಸಿದ್ದಕ್ಕಾಗಿ ಆಕೆಯ ವಜಾ ಆದೇಶ ನೀಡಲಾಯಿತು ಎಂದು ಸಿಎಂ ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ.

ಅತ್ತ ಪ್ರಾಂಶುಪಾಲೆ ಬಹುಗುಣ ತಮ್ಮ ಬೇಡಿಕೆಯ ಬಗ್ಗೆ ಮಾತನಾಡಿ "ನನಗೆ ನನ್ನ ಕೆಲಸ ನಿರ್ವಹಿಸುವಲ್ಲಿ ಸಮಸ್ಯೆಯಿಲ್ಲ, ಆದರೆ 25 ವರ್ಷಗಳಿಂದ ಅತ್ಯಂತ ಹಿಂದುಳಿದ ಪ್ರದೇಶಗಳಲ್ಲಿಯೇ ಸೇವೆ ಸಲ್ಲಿಸುತ್ತಿದ್ದೇನೆ. ಉತ್ತರ ಕಾಶಿಗಿಂತ ಮುಂಚೆ ಚಿನ್ಯಲಿಸೌರ್ ಎಂಬಲ್ಲಿ ಕೆಲಸ ಮಾಡುತ್ತಿದ್ದೆ. ಈ ಹಿಂದೆ ನನ್ನ ಪತಿ ನಮ್ಮ ಇಬ್ಬರು ಮಕ್ಕಳನ್ನು ನೋಡಿಕೊಳ್ಳುತ್ತಿದ್ದರು ಆದರೆ ಅವರು ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಮೃತ ಪಟ್ಟ ನಂತರ ಮಕ್ಕಳನ್ನು ನೋಡಿಕೊಳ್ಳಲು ಯಾರೂ ಇಲ್ಲ, ಮೇಲಾಗಿ ನನಗೆ ವಯಸ್ಸೂ ಆಗಿದೆ" ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News