ಡಿಸಿಎಂ ಹುದ್ದೆ ಪ್ರಶ್ನಿಸಿ ಸಲ್ಲಿಸಿದ್ದ ಪಿಐಎಲ್ ವಜಾ

Update: 2018-06-29 15:34 GMT

ಬೆಂಗಳೂರು, ಜೂ.29: ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳೆಂದರೆ (ಪಿಐಎಲ್) ವೈಯಕ್ತಿಕ ಹಿತಾಸಕ್ತ ಅರ್ಜಿಗಳಾಗಿವೆ ಎಂದು ತೀವ್ರ ಅತೃಪ್ತಿ ವ್ಯಕ್ತಪಡಿಸಿರುವ ಹೈಕೋರ್ಟ್, ಉಪ ಮುಖ್ಯಮಂತ್ರಿ ಹುದ್ದೆ ಅಸಾಂವಿಧಾನಿಕ ಎಂದು ಆಕ್ಷೇಪಿಸಿ ಪಿಐಎಲ್ ಸಲ್ಲಿಸಿದ್ದ ಅರ್ಜಿದಾರ ಪ್ರೊಫೆಸರ್‌ಗೆ 10 ಸಾವಿರ ರೂ.ದಂಡ ವಿಧಿಸಿದೆ.

ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ವಿವೇಕಾನಂದ ಕಾಲೇಜಿನ ಪ್ರೊ.ಶೇಖರ್ ಎಸ್.ಅಯ್ಯರ್ ಎಂಬವರು ಸಲ್ಲಿಸಿದ್ದ ಪಿಐಎಲ್ ಅನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿ ಅರ್ಜಿ ವಜಾ ಮಾಡಿತು.

ವಿಚಾರಣೆ ವೇಳೆ ದಿನೇಶ್ ಮಾಹೇಶ್ವರಿ, ನಿಮ್ಮಂಥವರು ಇಂತಹ ಪಿಐಎಲ್‌ಗಳನ್ನು ದಾಖಲಿಸುವುದು ಬಿಟ್ಟು ಸಮಾಜದ ರಚನಾತ್ಮಕ ಕಾರ್ಯಗಳತ್ತ ಗಮನ ಹರಿಸಿ. ಕೋರ್ಟ್ ಸಮಯ ಹಾಳು ಮಾಡಬೇಡಿ ಎಂದು ಕಿವಿಮಾತು ಹೇಳಿದರು.

ಅಪ್ರಾಮಾಣಿಕ ಪಿಐಎಲ್ ಸಲ್ಲಿಕೆಯಿಂದಾಗಿ ನಿಜವಾದ ಸಂತ್ರಸ್ತರು ಮತ್ತು ಅಪ್ಪಟ ಕಾಳಜಿ ಹೊಂದಿದ ಪಿಐಎಲ್‌ಗಳ ವಿಚಾರಣೆಗೆ ತೊಂದರೆ ಆಗಿದೆ. ಅಂತೆಯೇ ಕಾರ್ಯಾಂಗದ ಮೇಲೂ ಗಾಢ ಪರಿಣಾಮ ಉಂಟಾಗುತ್ತಿದೆ. ಇಂತಹ ಧೋರಣೆಯನ್ನು ಸೋಸಿ ನೋಡಿಯೇ ನಾವು ನಿಮಗೆ ದಂಡ ವಿಧಿಸುತ್ತಿದ್ದೇವೆ ಎಂದ ನ್ಯಾಯಮೂರ್ತಿಗಳು, ಪಿಐಎಲ್‌ಗಳೆಂದರೆ ಸಮಾಜಕ್ಕೆ ಮಾರ್ಗದರ್ಶಿಯಾಗಿರಬೇಕು ಎಂದು ಉಲ್ಲೇಖಿಸಿದರು.

ಅರ್ಜಿದಾರ ಅಯ್ಯರ್ ಖುದ್ದು ವಾದ ಮಂಡಿಸಿದರಲ್ಲದೆ, ಸ್ವಾಮಿ, ನಾನು ನಿಜವಾದ ಕಳಕಳಿ ಇಟ್ಟುಕೊಂಡೇ ಈ ಅರ್ಜಿ ಸಲ್ಲಿಸಿದ್ದೇನೆ. ನನಗೆ ಯಾವ ದುರುದ್ದೇಶವೂ ಇಲ್ಲ. ದಂಡ ವಿಧಿಸಬಾರದು. ತಪ್ಪಾಗಿದ್ದರೆ ಕ್ಷಮಿಸಬೇಕು ಎಂದು ಮನವಿ ಮಾಡಿದರು.

ಆದರೆ, ಇದನ್ನು ಲೆಕ್ಕಿಸದ ನ್ಯಾಯಮೂರ್ತಿಗಳು, ಇಂತಹ ಅನಗತ್ಯ ಪಿಐಎಲ್‌ಗಳಿಗೆ ಕಡಿವಾಣ ಹಾಕುವ ದೃಷ್ಟಿಯಿಂದ ದಂಡ ಹಾಕುವುದು ಅನಿವಾರ್ಯವಿದೆ. ಎಷ್ಟು ಹಾಕಬೇಕು ಎಂಬುದನ್ನು ನೀವೇ ಹೇಳಿ. ಇಲ್ಲಾಂದ್ರೆ ನಾವು ಹಾಕಿದ ಮೇಲೆ ಕಡಿಮೆ ಮಾಡುವುದಿಲ್ಲ ಎಂದು ಹೇಳಿದರು. ನಂತರ ವಿವರವಾದ ಆದೇಶ ಬರೆಯಿಸಿ 10 ಸಾವಿರ ದಂಡ ವಿಧಿಸಿದರು.

ಅರ್ಜಿದಾರರು 30 ದಿನಗಳ ಒಳಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಅವರಲ್ಲಿ ದಂಡದ ಮೊತ್ತವನ್ನು ಪಾವತಿಸಬೇಕು. ಈ ಹಣವನ್ನು ಸಂತ್ರಸ್ತರ ಪರಿಹಾರ ನಿಧಿಗೆ ಉಪಯೋಗಿಸಬೇಕು ಎಂದು ನ್ಯಾಯಮೂರ್ತಿಗಳು ಆದೇಶಿಸಿದರು.

ಆಕ್ಷೇಪಣೆ ಏನು: ಸಂವಿಧಾನದಲ್ಲಿ ಉಪ ಮುಖ್ಯಮಂತ್ರಿ ಹುದ್ದೆಯೇ ಇಲ್ಲ. ಅದು ಸಾಂವಿಧಾನಿಕ ಹುದ್ದೆಯೂ ಅಲ್ಲ. ಹೀಗಾಗಿ ಜಿ.ಪರಮೇಶ್ವರ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದನ್ನು ಅಸಾಂವಿಧಾನಿಕ ಎಂದು ಘೋಷಿಸಬೇಕು ಎಂದು ಅರ್ಜಿದಾರರು ಕೋರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News