ನನ್ನನ್ನು ಸಿಲುಕಿಸುವ ಷಡ್ಯಂತ್ರ ನಡೆಯುತ್ತಿದೆ: ಸಚಿವ ಡಿಕೆಶಿ

Update: 2018-06-30 13:05 GMT

ಬೆಂಗಳೂರು, ಜೂ.30: ಕಪ್ಪುಹಣ ಸಕ್ರಮ ಮಾಡಿಕೊಂಡ ಪ್ರಕರಣದಲ್ಲಿ ನನ್ನನ್ನು ಸಿಲುಕಿಸುವ ಷಡ್ಯಂತ್ರ ನಡೆಯುತ್ತಿದ್ದು, ಇದರ ವಿರುದ್ಧ ಕಾನೂನು ರೀತಿಯಲ್ಲಿಯೇ ಹೋರಾಟ ನಡೆಸುತ್ತೇನೆ ಎಂದು ಜಲಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.

ಶನಿವಾರ ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದ ಕುರಿತು ಸಿಬಿಐ ನ್ಯಾಯಾಲಯವು ಆರು ಮಂದಿಯ ಜಾಮೀನು ಅರ್ಜಿ ವಜಾಗೊಳಿಸಿರುವ ವಿಚಾರಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದರು. ಈ ಪ್ರಕರಣದಲ್ಲಿ ನಮ್ಮನ್ನು ಸಿಲುಕಿಸುವ ದೊಡ್ಡ ಷಡ್ಯಂತ್ರ ನಡೆಯುತ್ತಿದೆ. ಆದರೆ, ನಾನು ಯಾವ ಅರ್ಜಿಯನ್ನು ಹಾಕುವುದಿಲ್ಲ. ಸಿಕ್ಕಿ ಬೀಳುವ ಆತಂಕದಲ್ಲಿರುವವರು ಅರ್ಜಿ ಹಾಕಿಕೊಂಡಿದ್ದಾರೆ. ನಾನು ಕಾನೂನು ಪ್ರಕಾರವೇ ಹೋರಾಟ ಮಾಡುತ್ತೇನೆ ಎಂದು ಅವರು ಹೇಳಿದರು.

ಸರ್ವಪಕ್ಷಗಳ ಸಭೆ: ಕಾವೇರಿ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ರಚಿಸಲಾಗಿರುವ ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ಕುರಿತು ಚರ್ಚಿಸಲು ಸರ್ವಪಕ್ಷಗಳ ಮುಖಂಡರ ಸಭೆಯನ್ನು ಕರೆಯಲಾಗಿದೆ. ಸಭೆಯಲ್ಲಿ ಕೇಂದ್ರ ಸರಕಾರದ ಕ್ರಮ ಹಾಗೂ ಹಾಗೂ ನ್ಯಾಯಾಲಯದ ಅಭಿಪ್ರಾಯವನ್ನು ಎಲ್ಲ ಮುಖಂಡರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ಶಿವಕುಮಾರ್ ಹೇಳಿದರು.

ಜುಲೈ 2ರಂದು ಕಾವೇರಿ ನಿರ್ವಹಣಾ ಮಂಡಳಿಯ ಸಭೆ ನಡೆಯಲಿದೆ. ರಾಜ್ಯದಿಂದಲೂ ಇಬ್ಬರು ಅಧಿಕಾರಿಗಳನ್ನು ಪ್ರತಿನಿಧಿಗಳಾಗಿ ನೇಮಕ ಮಾಡಲಾಗಿದೆ. ಆ ಸಭೆಯಲ್ಲಿ ತೆಗೆದುಕೊಳ್ಳುವ ತೀರ್ಮಾನ ಆಧರಿಸಿ, ಮುಂದಿನ ಕಾನೂನು ಕ್ರಮಗಳ ಕುರಿತು ಚರ್ಚಿಸಲಾಗುವುದು ಎಂದು ಶಿವಕುಮಾರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News