ಕೇಂದ್ರ ಸರಕಾರದಿಂದ ಶಿಕ್ಷಣ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಹುನ್ನಾರ: ಶಿಕ್ಷಣತಜ್ಞ ಡಾ.ನಿರಂಜನಾರಾಧ್ಯ

Update: 2018-06-30 13:47 GMT

ಬೆಂಗಳೂರು, ಜೂ.30: ಕೇಂದ್ರ ಸರಕಾರ ಸಂಪೂರ್ಣ ಶಿಕ್ಷಣ ವ್ಯವಸ್ಥೆಯನ್ನು ಒಂದು ಯೋಜನೆಗೆ ಸೀಮಿತ ಮಾಡುವ ಸಲುವಾಗಿ ‘ಸಮಗ್ರ ಶಿಕ್ಷಾ ಅಭಿಯಾನ’ವನ್ನು ಜಾರಿ ಮಾಡಲು ಮುಂದಾಗಿದೆ ಎಂದು ಶಿಕ್ಷಣತಜ್ಞ ಡಾ.ವಿ.ಪಿ.ನಿರಂಜನಾರಾಧ್ಯ ಆರೋಪಿಸಿದ್ದಾರೆ.

ಶನಿವಾರ ನಗರದ ಶಾಸಕರ ಭವನದಲ್ಲಿ ಸಮಾನ ಶಿಕ್ಷಣ ವ್ಯವಸ್ಥೆಗಾಗಿ ಸಮನ್ವಯ ವೇದಿಕೆ ವತಿಯಿಂದ ಆಯೋಜಿಸಿದ್ದ ‘ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಸಬಲೀಕರಣ-ಮುಂದಿನ ನಡೆ’ ಕುರಿತ ಮುಕ್ತ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದಿನದಿಂದ ದಿನಕ್ಕೆ ಸರಕಾರಿ ಶಾಲೆಗಳನ್ನು ದುರ್ಬಲಗೊಳಿಸುವ ವ್ಯವಸ್ಥಿತ ಪ್ರಯತ್ನ ಮಾಡಲಾಗುತ್ತಿದೆ ಎಂದು ದೂರಿದರು.

ರಾಜ್ಯದಲ್ಲಿ ಸರಕಾರಿ ಶಾಲೆಗಳ ಸ್ಥಿತಿ ದುರ್ಬಲವಾಗುತ್ತಿದ್ದು, ಇಲ್ಲಿನ ಶಾಲೆಗಳಿಗೆ ಸೇರುವ ಮಕ್ಕಳ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಇದೇ ಸಂದರ್ಭದಲ್ಲಿ ಮಕ್ಕಳ ಸಂಖ್ಯೆ ಕಡಿಮೆ ನೆಪವೊಡ್ಡಿ ಸರಕಾರ ಶಾಲೆಗಳನ್ನು ಮುಚ್ಚಲು ಮುಂದಾಗಿದೆ. ಮತ್ತೊಂದು ಕಡೆ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವ ಬದಲಿಗೆ, ಅದನ್ನು ಒಂದು ಯೋಜನೆಯ ಅಡಿಯಲ್ಲಿ ಜಾರಿ ಮಾಡಲಾಗುತ್ತದೆ ಎಂದು ಸಮಗ್ರ ಶಿಕ್ಷಾ ಅಭಿಯಾನ ಜಾರಿಗೊಳಿಸಲು ಮುಂದಾಗಿದೆ. ಈ ಎರಡೂ ನೀತಿಗಳು ಇಂದಿನ ನಮ್ಮ ಶಿಕ್ಷಣ ವ್ಯವಸ್ಥೆಗೆ ಒದಗಿರುವ ದುಸ್ಥಿತಿ ಎಂದು ವಿಷಾದಿಸಿದರು.

ಶಿಕ್ಷಣದ ಮೇಲೆ ಹಿಡಿತ ಸಾಧಿಸಿರುವ ಆಳುವ ವರ್ಗ ತಮ್ಮ ಕೆಲಸಗಳನ್ನು ಬಹಳ ವ್ಯವಸ್ಥಿತವಾಗಿ ಮಾಡುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಸರಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಕಡಿಮೆ, ಶಿಕ್ಷಕರ ಕೊರತೆ ಎಂಬ ನೆಪಗಳನ್ನು ಹೇಳುವ ಮೂಲಕ ಶಿಕ್ಷಣದ ಖಾಸಗೀಕರಣಕ್ಕೆ ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಸರಕಾರಿ ಶಾಲೆಗಳ ಸಬಲೀಕರಣ ಎಂಬುದು ಊಹಿಸಲು ಸಾಧ್ಯವಿಲ್ಲ ಎಂದ ಅವರು, ಶಿಕ್ಷಣದಲ್ಲಿ ಸಮಾನತೆ ಸಾಧಿಸದಿದ್ದರೆ ರಾಜಕೀಯ ಸಮಾನತೆ, ಆರ್ಥಿಕ ಸಮಾನತೆ ಸಾಧಿಸಲು ಅಸಾಧ್ಯ ಎಂದು ಹೇಳಿದರು.

ಕರ್ನಾಟಕದಲ್ಲಿ 2016-17ರ ಅಂಕಿಅಂಶಗಳ ಪ್ರಕಾರ 1782 ಸರಕಾರಿ ಶಾಲೆಗಳನ್ನು ಮುಚ್ಚಲಾಗಿದೆ. ಅದೇ ಸಂದರ್ಭದಲ್ಲಿ 3350 ಖಾಸಗಿ ಶಾಲೆಗಳಿಗೆ ಅನುಮತಿ ನೀಡಲಾಗಿದೆ. ಪ್ರಸ್ತುತ 28,582 ಶಿಕ್ಷಕರ ಹುದ್ದೆಗಳು ಖಾಲಿ ಇದ್ದರೂ ಆ ಜಾಗಗಳಿಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದ್ದಾರೆ. ಇದೆಲ್ಲವನ್ನೂ ಗಮನಿಸಿದರೆ ಸರಕಾರಿ ಶಾಲೆಗಳ ಪುನರ್ವಸತಿ ಹಾಗೂ ಶಾಲೆಗಳ ಮೇಲೆ ಸಕಾರಾತ್ಮಕ ಭಾವನೆ ಮೂಡಿಸುವಲ್ಲಿ ಆಳುವ ವರ್ಗಗಳು ನಿರ್ಲಕ್ಷ್ಯ ಮಾಡುತ್ತಿವೆ ಎಂದು ಅವರು ತಿಳಿಸಿದರು.

3,347 ಕಿರಿಯ ಪ್ರಾಥಮಿಕ ಶಾಲೆಗಳು ಮತ್ತು 220 ಹಿರಿಯ ಸರಕಾರಿ ಶಾಲೆಗಳಲ್ಲಿ 10ಕ್ಕಿಂತ ಕಡಿಮೆ ಮಕ್ಕಳಿದ್ದಾರೆಂಬ ಉದ್ದೇಶದಿಂದ ಮುಚ್ಚಲು ಹೊರಟಿರುವ ರಾಜ್ಯ ಸರಕಾರ ಶಾಲೆಗಳನ್ನು ಮುಚ್ಚದೆ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಪ್ರಾರಂಭಿಸಬೇಕು. ಆಯವ್ಯಯ ಪಟ್ಟಿಯಲ್ಲಿ ಶಿಕ್ಷಣಕ್ಕೆ ನೀಡಿರುವ ಅನುದಾನವನ್ನು ಕೈಬಿಡದೆ ಶೇ.11.5 ರಷ್ಟಿರುವ ಅನುದಾನವನ್ನು ಶೇ.15 ರಷ್ಟು ಹೆಚ್ಚಿಸಿ, ಸರಕಾರಿ ಶಾಲೆಗಳ ಸಂಪೂರ್ಣ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಬೇಕು.

ಖಾಸಗಿ ಸಂಸ್ಥೆಗಳ ನಿಯಂತ್ರಣ ಕಾಯ್ದೆ ರೂಪಿಸಿ ಜಾರಿಗೊಳಿಸಬೇಕು. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ(ಎಸ್‌ಡಿಎಂಸಿ)ಗೆ ಶಾಲಾ ಹಂತಗಳಲ್ಲಿ ತರಬೇತಿ ನೀಡಬೇಕು ಮತ್ತು ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು 3 ವರ್ಷದೊಳಗೆ ಭರ್ತಿ ಮಾಡಬೇಕು ಸೇರಿದಂತೆ ಹಲವು ಹಕ್ಕೊತ್ತಾಯಗಳನ್ನು ಮಂಡಿಸಲಾಯಿತು. ಕಾರ್ಯಕ್ರಮದಲ್ಲಿ ಲೇಖಕ ಶ್ರೀಪಾಧ್ ಭಟ್, ಸಮಿತಿ ಸದಸ್ಯರಾದ ಮಲ್ಲಿಗೆ ಸಿರಿಮನೆ, ಮುತ್ತುರಾಜ್, ಸರೋವರ್ ಬೆಂಕಿಕೆರೆ, ಅಖಿಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News